ADVERTISEMENT

ವಚನ ದಸರಾ ಎಲ್ಲೆಡೆಯಾಗಲಿ: ಶಾಸಕ ಎಸ್‌.ಟಿ. ಸೋಮಶೇಖರ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 15:57 IST
Last Updated 4 ಅಕ್ಟೋಬರ್ 2025, 15:57 IST
ವಚನ ದಸರಾ ಸಮಾರೋಪದಲ್ಲಿ ಬಸವಣ್ಣನವರಿಗೆ ಪುಷ್ಪಾರ್ಚನೆ ಸಲ್ಲಿಸಿದ ಎಸ್.ಟಿ. ಸೋಮಶೇಖರ್, ಬೇಲಿಮಠದ ಸ್ವಾಮೀಜಿ, ಪಿನಾಕಪಾಣಿ
ವಚನ ದಸರಾ ಸಮಾರೋಪದಲ್ಲಿ ಬಸವಣ್ಣನವರಿಗೆ ಪುಷ್ಪಾರ್ಚನೆ ಸಲ್ಲಿಸಿದ ಎಸ್.ಟಿ. ಸೋಮಶೇಖರ್, ಬೇಲಿಮಠದ ಸ್ವಾಮೀಜಿ, ಪಿನಾಕಪಾಣಿ   

ಬೆಂಗಳೂರು: ‘ದಸರಾ ಸಂದರ್ಭದಲ್ಲಿ 11 ದಿನಗಳಲ್ಲಿಯೂ ಕನ್ನಡದ ಸ್ವಾತಂತ್ರ್ಯ ಧೀರೆಯರ ನೆನೆಯುವ ವಚನ ದಸರಾ ಅರ್ಥಪೂರ್ಣವಾಗಿದ್ದು, ಇದು ಯಶವಂತಪುರ ವಿಧಾನಸಭೆ ಕ್ಷೇತ್ರದ ಎಲ್ಲೆಡೆ ನಡೆಯಬೇಕು’ ಎಂದು ಶಾಸಕ ಎಸ್‌.ಟಿ. ಸೋಮಶೇಖರ್‌ ಹೇಳಿದರು.

ಕಲ್ಯಾಣ ಬಡಾವಣೆಯಲ್ಲಿ ವಚನಜ್ಯೋತಿ ಬಳಗ ಆಯೋಜಿಸಿದ್ದ ವಚನ ದಸರೆಯ ಸಮಾರೋಪದಲ್ಲಿ ಅವರು ಮಾತನಾಡಿದರು.

‘ಮಕ್ಕಳಲ್ಲಿ ವಚನ ಬಿತ್ತನೆ ಸಾರ್ಥಕವಾದ ಅದನ್ನು ಕಾಪಾಡಿಕೊಳ್ಳಬೇಕಾದ ಹೊಣೆಗಾರಿಕೆ ನಮ್ಮದಾಗಿದೆ’ ಎಂದು ಹೇಳಿದರು.

ADVERTISEMENT

ಬೇಲಿಮಠದ ಸ್ವಾಮೀಜಿ ಮಾತನಾಡಿ, ‘ಕಲ್ಯಾಣದಲ್ಲಿ ವಿಪ್ಲವವಾದಾಗ ಅಕ್ಕನಾಗಮ್ಮ ಚನ್ನಬಸವಣ್ಣನವರ ನೇತೃತ್ವದಲ್ಲಿ ಮಡಿವಾಳ ಮಾಚಿದೇವ, ಡೋಹರ ಕಕ್ಕಯ್ಯ, ನುಲಿಯ ಚೆಂದಯ್ಯ, ಗಂಗಾಂಬಿಕೆ, ರುದ್ರಮುನಿದೇವರು ಸೇರಿಕೊಂಡು ಉಳವಿಯತ್ತ ನಡೆದರು. ಎಳೆಮೂಟೆಯ ಶಿಕ್ಷೆಯಲ್ಲಿ ಉಸಿರು ಉಳಿಸಿಕೊಂಡ ಹರಳಯ್ಯನವರನ್ನು ಕಾಯಕ ಶರಣರು ಕಾವೇರಿ ತೀರಕ್ಕೆ ಕರೆದುಕೊಂಡು ಬಂದರು. ಇಂದಿಗೂ ಚಾಮರಾಜನಗರ ಭಾಗದಲ್ಲಿ ಇರುವ ಹರವೆ ಗ್ರಾಮದಲ್ಲಿ ಹರಳಯ್ಯನವರ ಸಮಾಧಿ ಇದೆ’ ಎಂದು ವಿವರಿಸಿದರು.

‘ವಚನ ದಸರಾದಲ್ಲಿ ಪ್ರತಿದಿನವೂ ಒಬ್ಬೊಬ್ಬ ವಚನಕಾರ್ತಿಯರ ಪರಿಚಯ ಮಾಡಿಕೊಂಡು ಅವರ‌ ವಚನಗಳ‌ ವ್ಯಾಖ್ಯಾನ ನಡೆಸಲಾಗಿದ್ದು ಬೇರೆ ಬೇರೆ ತಂಡಗಳ ವಚನ ಗಾಯನ ನಡೆದಿದೆ’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ತಿಳಿಸಿದರು.

ಮಕ್ಕಳಲ್ಲಿ ವಚನ ಸಂಸ್ಕೃತಿ ಬಿತ್ತಲು ‘ಮಕ್ಕಳ ವಚನ ಮೇಳ’ವನ್ನು ಕಲಾಗ್ರಾಮದಲ್ಲಿ ನವೆಂಬರ್ 18ರಿಂದ 27ರವರೆಗೆ ನಡೆಸಲಾಗುವುದು ಎಂದರು.

ಪದ್ಮಜ ಪ್ರಸನ್ನ, ಬಳಗದ ಪ್ರಧಾನ ಕಾರ್ಯದರ್ಶಿ ಪ್ರಭು ಇಸುವನಹಳ್ಳಿ, ಮುಖ್ಯ ಕಾರ್ಯನಿರ್ವಾಹಕ ರಾಜಾ ಗುರುಪ್ರಸಾದ್, ಗಾಯಕಿಯರಾದ ಮೀನಾಕ್ಷಿ ಮೇಟಿ, ಟಿ.ಎಂ. ಜಾನಕಿ, ಕಿರಣ್ ಬಳ್ಳಾರಿ, ವಚನ ಕಲಿಕಾ ತರಗತಿಯ ಸಂಚಾಲಕರಾದ ಮಧು ಶಿವಕುಮಾರ್, ದಿವಾಕರ್, ಪ್ರಾಧ್ಯಾಪಕ - ರಂಗವಿಮರ್ಶಕ ರುದ್ರೇಶ್ ಅದರಂಗಿ, ನಿವೃತ್ತ ಅಧಿಕಾರಿಗಳಾದ ಪ್ರಕಾಶ್ ಮಜಗಿ, ರಾಜು, ಬಡಾವಣೆಯ ಹಿರಿಯರಾದ ಚನ್ನಮಲ್ಲಯ್ಯ, ಚಂದ್ರಶೇಖರಯ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.