ADVERTISEMENT

ಮಾಲಿನ್ಯ ತಡೆಗಟ್ಟಲು ಬರಲಿದೆ ವಾಹನ್‌ ಗ್ರೀನ್‌ ಸೇವಾ

ಹೊಸವರ್ಷದಲ್ಲಿ 120 ರಿಟ್ರೊ ಫಿಟ್‌ಮೆಂಟ್‌ ಸೆಂಟರ್‌ಗಳಲ್ಲಿ ಅನುಷ್ಠಾನ

ಬಾಲಕೃಷ್ಣ ಪಿ.ಎಚ್‌
Published 9 ಡಿಸೆಂಬರ್ 2024, 23:43 IST
Last Updated 9 ಡಿಸೆಂಬರ್ 2024, 23:43 IST
<div class="paragraphs"><p>ವಾಹನ್‌ ಗ್ರೀನ್‌ ಸೇವಾ</p></div>

ವಾಹನ್‌ ಗ್ರೀನ್‌ ಸೇವಾ

   

ಬೆಂಗಳೂರು: ಮಾಲಿನ್ಯ ತಡೆಗಟ್ಟುವುದಕ್ಕಾಗಿ ವಾಹನ್‌ ಗ್ರೀನ್‌ ಸೇವಾ ಸಾಫ್ಟ್‌ವೇರ್‌ ಅನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಅಭಿವೃದ್ಧಿ ಪಡಿಸಿದೆ. ಡೀಸೆಲ್‌, ಪೆಟ್ರೋಲ್ ಎಂಜಿನ್‌ ಹೊಂದಿರುವ ಹಳೆ ವಾಹನಗಳನ್ನು ಎಲೆಕ್ಟ್ರಿಕ್‌, ಎಲ್‌ಪಿಜಿ, ಸಿಎನ್‌ಜಿ ಎಂಜಿನ್‌ಗೆ ಪರಿವರ್ತಿಸುವ ಮೂಲಕ ಮಾಲಿನ್ಯವನ್ನು ಶೂನ್ಯಕ್ಕೆ ತರುವುದು ಇದರ ಉದ್ದೇಶ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸೂಚನೆಯಂತೆ ಈ ಸಾಫ್ಟ್‌ವೇರ್‌ ಅಭಿವೃದ್ಧಿ ಮಾಡಲಾಗಿದೆ. ಕರ್ನಾಟಕದಲ್ಲಿರುವ 120 ರಿಟ್ರೊ ಫಿಟ್‌ಮೆಂಟ್‌ ಸೆಂಟರ್‌ಗಳ ಸಿಬ್ಬಂದಿಗೆ ಮೂರು ತಿಂಗಳ ಹಿಂದೆಯೇ ತರಬೇತಿಯನ್ನು ನೀಡಲಾಗಿದೆ. 

ADVERTISEMENT

ಎಲ್ಲ ವಾಹನಗಳಿಗೆ ಬಳಕೆ: ದ್ವಿಚಕ್ರವಾಹನಗಳು, ಆಟೊರಿಕ್ಷಾಗಳು, ಟ್ಯಾಕ್ಸಿ, ಬಸ್‌ ಸೇರಿ ಎಲ್ಲ ವಾಹನಗಳ ಎಂಜಿನ್‌ಗಳನ್ನು ಪರಿವರ್ತಿಸಲು ಅವಕಾಶವಿದೆ. ಎಲ್ಲ ವಾಹನಗಳು ಈ ರೀತಿ ನೈಸರ್ಗಿಕ ಅನಿಲ ಅಥವಾ ನೈಸರ್ಗಿಕ ಇಂಧನ ಬಳಸಿದರೆ ಹೊಗೆ ಉಗುಳುವುದು ಕಡಿಮೆಯಾಗುತ್ತದೆ. ಇದು ವಾಹನಗಳಿಗೆ ಮಾತ್ರವಲ್ಲ, ನಗರಗಳಲ್ಲಿ ವಾಸಿಸುವವರ ಆರೋಗ್ಯದ ದೃಷ್ಟಿಯಿಂದಲೂ ಪ್ರಯೋಜನಕಾರಿಯಾಗಿದೆ. ಇಂಧನ ವೆಚ್ಚವೂ ಕಡಿಮೆಯಾಗಲಿದೆ.

ಅನಧಿಕೃತ ಅಳವಡಿಕೆಗೆ ಕಡಿವಾಣ: ವಾಹನದ ಮೂಲ ಎಂಜಿನ್ ಮತ್ತು ಇತರ ಘಟಕಗಳನ್ನು ಪರ್ಯಾಯ ಶಕ್ತಿಯ ಮೂಲದೊಂದಿಗೆ ಬದಲಾಯಿಸುವ ಪ್ರಕ್ರಿಯೆ ಇದೆ. ಆದರೆ, ಅವುಗಳ ಬಗ್ಗೆ ಸರಿಯಾದ ಅಂಕಿ ಅಂಶ ಸರ್ಕಾರದಲ್ಲಿ ಇಲ್ಲ. ಹಲವು ಬಾರಿ ಅನಧಿಕೃತವಾಗಿ ಮಾಡಲಾಗುತ್ತಿದೆ. ಇದರಿಂದ ಯಾವುದೋ ವಾಹನಕ್ಕೆ ಬೆಂಕಿ ಹತ್ತಿಕೊಂಡರೆ ಅದರಲ್ಲಿ ಯಾವ ಎಂಜಿನ್‌, ಯಾವ ಸಿಲಿಂಡರ್‌, ಯಾವ ಕಿಟ್‌ ಇತ್ತು ಎಂದು ಗೊತ್ತಾಗುವುದಿಲ್ಲ. ಗ್ರೀನ್‌ ಸೇವಾ ಸಾಫ್ಟ್‌ವೇರ್‌ ಮೂಲಕ ಅಳವಡಿಸಿಕೊಂಡಾಗ ವಾಲ್ವ್‌, ಎಂಜಿನ್‌, ಕಿಟ್‌, ಸಿಲಿಂಡರ್‌, ಉತ್ಪಾದನಾ ಕಂಪನಿಯಿಂದ ಹಿಡಿದು ಪ್ರತಿಯೊಂದು ಮಾಹಿತಿ ಸಿಗಲಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅನಧಿಕೃತ ಫಿಟ್‌ಮೆಂಟ್‌ಗಳಿಗೆ ಗ್ರೀನ್‌ ಸೇವಾ ಸಾಫ್ಟ್‌ವೇರ್‌ ಕಡಿವಾಣ ಹಾಕಲಿದೆ. ಡೇಟಾಗಳನ್ನು ಸಿಬ್ಬಂದಿ ನಮೂದು ಮಾಡುವಾಗ ಆಗುವ ತಪ್ಪುಗಳು ಇಲ್ಲಿ ಆಗುವುದಿಲ್ಲ. ಯಾಕೆಂದರೆ ಉತ್ಪಾದನಾ ಕಂಪನಿಗಳಿಂದಲೇ ನೇರವಾಗಿ ಡೇಟಾಗಳು ಸಾಫ್ಟ್‌ವೇರ್‌ಗೆ ಅಪ್‌ಡೇಟ್‌ ಆಗುತ್ತವೆ. ಇದರಿಂದ ಇಲಾಖೆಗೂ, ವಾಹನ ಮಾಲೀಕರಿಗೂ ಉಪಯೋಗವಾಗುತ್ತದೆ ಎಂಬುದು ಅಧಿಕಾರಿಗಳ ಅಭಿ‍ಪ್ರಾಯವಾಗಿದೆ.

ನ್ಯಾಯಾಲಯದಲ್ಲಿ ಪ್ರಕರಣ: ಕೆಲವು ಫಿಟ್‌ಮೆಂಟ್‌ ಕೇಂದ್ರಗಳು ವಾಹನ್‌ ಗ್ರೀನ್‌ ಸೇವಾ ಸಾಫ್ಟ್‌ವೇರ್‌ ಅಳವಡಿಸಿಕೊಳ್ಳಲು ಒಪ್ಪದೇ ನ್ಯಾಯಾಲಯದ ಮೆಟ್ಟಿಲೇರಿವೆ. ಇದು ಇತ್ಯರ್ಥವಾದ ಕೂಡಲೇ ರಾಜ್ಯದಲ್ಲಿ ವಾಹನ್‌ ಗ್ರೀನ್‌ ಸೇವಾ ಸಾಫ್ಟ್‌ವೇರ್‌ ಅಳವಡಿಕೆಯಾಗಲಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

***

ಹೊಸ ವರ್ಷದಲ್ಲಿ ಅಳವಡಿಕೆ

ಸೆಕೆಂಡ್‌ ಹ್ಯಾಂಡ್‌ ಕಿಟ್‌ ಅಳವಡಿಸುವ ಅನಧಿಕೃತವಾಗಿ ಕಿಟ್‌ ಅಳವಡಿಸುವ ಪ್ರಕ್ರಿಯೆಗಳು ಹೊಸ ಸಾಫ್ಟ್‌ವೇರ್‌ ಬಂದ ಮೇಲೆ ನಿಂತು ಹೋಗುತ್ತದೆ. ಈ ಕಾರಣಕ್ಕೆ ನಮ್ಮ ರಾಜ್ಯದ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ದೇಶದ ಎಲ್ಲ ರಾಜ್ಯಗಳಲ್ಲಿಯೂ ಜಾರಿಯಾಗುತ್ತಿರುವ ಯೋಜನೆ ಇದಾಗಿದೆ. ಪ್ರಕರಣ ಇತ್ಯರ್ಥ ಆದ ಕೂಡಲೇ ರಾಜ್ಯದಲ್ಲಿಯೂ ಜಾರಿಯಾಗಲಿದೆ ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರ ಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.