ADVERTISEMENT

ಥಣಿಸಂದ್ರದಲ್ಲಿ ವಂದೇ ಭಾರತ್‌ ಡಿಪೊ: ಬಿಡ್‌ ಅವಧಿ ವಿಸ್ತರಣೆ

ಡಿಸೆಂಬರ್‌ 12ರ ಒಳಗೆ ಬಿಡ್‌ ಸಲ್ಲಿಸಲು ಅವಕಾಶ ನೀಡಿದ ನೈರುತ್ಯ ರೈಲ್ವೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 0:41 IST
Last Updated 25 ನವೆಂಬರ್ 2025, 0:41 IST
ವಂದೆ ಭಾರತ್‌ ಸ್ಲೀಪರ್ ಕೋಚ್‌ ರೈಲು
ವಂದೆ ಭಾರತ್‌ ಸ್ಲೀಪರ್ ಕೋಚ್‌ ರೈಲು   

ಬೆಂಗಳೂರು: ಥಣಿಸಂದ್ರದಲ್ಲಿ ವಂದೇ ಭಾರತ್‌ ಸ್ಲೀಪರ್‌ ರೈಲುಗಳನ್ನು ನಿರ್ವಹಿಸುವ ಡಿಪೊ ನಿರ್ಮಾಣಕ್ಕೆ ಟೆಂಡರ್‌ ಆಹ್ವಾನಿಸಲಾಗಿದ್ದು, ಬಿಡ್‌ ಸಲ್ಲಿಸುವ ಅವಧಿಯನ್ನು ನೈರುತ್ಯ ರೈಲ್ವೆ ವಿಸ್ತರಿಸಿದೆ.

ಎಂಜಿನಿಯರಿಂಗ್, ನಿರ್ಮಾಣ ಮತ್ತು ಸಂಗ್ರಹಣೆ (ಇಸಿಪಿ) ಮಾದರಿಯ ಸೌಲಭ್ಯವನ್ನು ಸ್ಥಾಪಿಸಲು ಜುಲೈಯಲ್ಲಿ ಇ–ಟೆಂಡರ್ ಆಹ್ವಾನಿಸಲಾಗಿತ್ತು. ನವೆಂಬರ್‌ 21ರ ಒಳಗೆ ಬಿಡ್‌ ಸಲ್ಲಿಸಲು ದಿನಾಂಕ ನಿಗದಿಪಡಿಸಲಾಗಿತ್ತು. ಈಗ ಈ ಅವಧಿಯನ್ನು ಡಿಸೆಂಬರ್‌ 12ರವರೆಗೆ ವಿಸ್ತರಿಸಲಾಗಿದೆ.

ವಂದೇ ಭಾರತ್‌ ಸೂಪರ್‌ ಫಾಸ್ಟ್‌ ಸೀಟರ್‌ ರೈಲುಗಳು ಯಶಸ್ವಿಯಾದ ಬಳಿಕ ವಂದೇ ಭಾರತ್‌ ಸ್ಲೀಪರ್‌ ರೈಲುಗಳನ್ನು ಹಳಿಗಿಳಿಸಲು ರೈಲ್ವೆ ಇಲಾಖೆ ನಿರ್ಧರಿಸಿತ್ತು. ಸ್ಲೀಪರ್‌ ರೈಲುಗಳ ತಯಾರಿಯು ಭರದಿಂದ ಸಾಗುತ್ತಿದೆ. ಅವುಗಳ ನಿರ್ವಹಣೆಗಾಗಿ ದೇಶದ ಐದು ಕಡೆಗಳಲ್ಲಿ  ಡಿಪೊಗಳನ್ನು ನಿರ್ಮಿಸಲು ರೈಲ್ವೆ ಮಂಡಳಿ ನಿರ್ಧರಿಸಿತ್ತು. ಅದರಲ್ಲಿ ಈಶಾನ್ಯ ಬೆಂಗಳೂರಿನಲ್ಲಿರುವ ಥಣಿಸಂದ್ರವೂ ಒಂದು. ₹ 227.94 ಕೋಟಿ ಅಂದಾಜು ವೆಚ್ಚದಲ್ಲಿ 16 ಬೋಗಿಗಳ ರೈಲು ನಿರ್ವಹಿಸುವ ಡಿಪೊ ಇದಾಗಲಿದೆ.

ADVERTISEMENT

ಚನ್ನಸಂದ್ರ ಮತ್ತು ಯಲಹಂಕ ರೈಲು ನಿಲ್ದಾಣಗಳ ನಡುವಿನ ಥಣಿಸಂದ್ರದಲ್ಲಿ ಹಿಂದೆ ರೈಲು ನಿಲ್ದಾಣವಿತ್ತು. ಇದು ದಶಕದ ಹಿಂದೆ ಸ್ಥಗಿತಗೊಂಡಿತ್ತು. ಈ ರೈಲು ನಿಲ್ದಾಣದ ಪಕ್ಕದಲ್ಲಿಯೇ ಡಿಪೊ ನಿರ್ಮಾಣಗೊಳ್ಳಲಿದೆ. 

ಈ ಸ್ಥಳವು ಚನ್ನಸಂದ್ರ ಮತ್ತು ಯಲಹಂಕ ರೈಲು ನಿಲ್ದಾಣಗಳ ನಡುವೆ ಇದೆ, ಇದು ಒಂದು ದಶಕದ ಹಿಂದೆ ಸ್ಥಗಿತಗೊಂಡಿದ್ದ ಹಿಂದಿನ ಥಣಿಸಂದ್ರ ರೈಲು ನಿಲ್ದಾಣಕ್ಕೆ ಹತ್ತಿರದಲ್ಲಿದೆ.

ಬಾಣಸವಾಡಿಯಲ್ಲಿ ಶೆಡ್ ವಿಸ್ತರಣೆ: ವಂದೇ ಭಾರತ್‌ ಸೀಟರ್‌ ರೈಲುಗಳ ನಿರ್ವಹಣೆಗಾಗಿ ಬಾಣಸವಾಡಿಯಲ್ಲಿರುವ ಮೆಮು ಶೆಡ್‌ ಅನ್ನು ₹ 50 ಕೋಟಿ ವೆಚ್ಚದಲ್ಲಿ ವಿಸ್ತರಿಸಲಾಗುತ್ತಿದೆ. ಅಲ್ಲದೇ ಬೈಯಪ್ಪನಹಳ್ಳಿಯಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ₹ 123 ಕೋಟಿ ವೆಚ್ಚದಲ್ಲಿ ನಿರ್ವಹಣಾ ಮೂಲಸೌಕರ್ಯವನ್ನು ನವೀಕರಿಸಲಾಗುತ್ತಿದೆ. ನಾಲ್ಕನೇ ಪಿಟ್‌ಲೈನ್‌ ಇದಾಗಲಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಬಾಣಸವಾಡಿಯಲ್ಲಿರುವ ಮೆಮು ಶೆಡ್‌ ಪ್ರಸ್ತುತ 270 ಮೀಟರ್‌ ಉದ್ದವಿದೆ. ಇಲ್ಲಿ 8–12 ಬೋಗಿಗಳ ರೈಲುಗಳನ್ನಷ್ಟೇ ನಿರ್ವಹಿಸಲು ಸಾಧ್ಯವಾಗುವಷ್ಟು ಸ್ಥಳಾವಕಾಶವಿದೆ. ಅದಕ್ಕಾಗಿ ಹೆಚ್ಚುವರಿಯಾಗಿ 130 ಮೀಟರ್‌ ಸೇರಿಸಲಾಗುತ್ತಿದೆ. 

ಬಿಇಎಂಎಲ್‌ನ ಚೆನ್ನೈ ಇಂಟಗ್ರಲ್‌ ಕೋಚ್‌ ಕಾರ್ಖಾನೆಯಲ್ಲಿ (ಐಸಿಎಫ್‌) ಎರಡು ಪ್ರೊಟೊಟೈಪ್‌ (ಮೂಲಮಾದರಿ) ವಂದೇ ಭಾರತ್‌ ಸ್ಲೀಪರ್‌ ರೈಲುಗಳು ತಯಾರಾಗಿದ್ದು, ತಾಂತ್ರಿಕ ಕಾರಣದಿಂದಾಗಿ ಇನ್ನೂ ಬಿಡುಗಡೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

–––

ವೇಗವಾಗಿ ನಡೆಯಲಿ

ಥಣಿಸಂದ್ರದಲ್ಲಿ ವಂದೇಭಾರತ್‌ ನಿರ್ವಹಣಾ ಡಿಪೊ ಆಗುತ್ತಿರುವುದು ಸ್ವಾಗತಾರ್ಹ ವಿಚಾರ. ಆದರೆ ಟೆಂಡರ್‌ ಪ್ರಕ್ರಿಯೆಯಲ್ಲಿಯೇ ವಿಳಂಬವಾಗುತ್ತಿದೆ. ಡಿಪೊ ನಿರ್ಮಾಣದಲ್ಲಿ ಮತ್ತೆ ನಿಧಾನವಾಗದಂತೆ ವೇಗವಾಗಿ ಮಾಡಬೇಕು ಎಂದು ಕರ್ನಾಟಕ ರೈಲ್ವೆ ವೇದಿಕೆಯ ಕೆ.ಎನ್. ಕೃಷ್ಣ ಪ್ರಸಾದ್ ಆಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.