ADVERTISEMENT

ಸ್ವಾವಲಂಬಿ ಭಾರತದ ಪ್ರತೀಕ ‘ವಂದೇ ಭಾರತ್‌ ’: ಎಚ್‌.ಡಿ. ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 16:21 IST
Last Updated 8 ನವೆಂಬರ್ 2025, 16:21 IST
ಎರ್ನಾಕುಲಂ-ಬೆಂಗಳೂರು ವಂದೇ ಭಾರತ್‌ ರೈಲು ಶನಿವಾರ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಕ್ಕೆ ಶನಿವಾರ ಸಂಜೆ ತಲುಪಿತು
ಎರ್ನಾಕುಲಂ-ಬೆಂಗಳೂರು ವಂದೇ ಭಾರತ್‌ ರೈಲು ಶನಿವಾರ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಕ್ಕೆ ಶನಿವಾರ ಸಂಜೆ ತಲುಪಿತು   

ಬೆಂಗಳೂರು: ರೈಲ್ವೆ ಜಾಲಕ್ಕೆ ಸೇರ್ಪಡೆಯಾಗುವ ಪ್ರತಿಯೊಂದು ವಂದೇ ಭಾರತ್‌ ರೈಲು ಕೂಡ ಸ್ವಾವಲಂಬಿ ಭಾರತದ ಪ್ರತೀಕವಾಗಿದೆ. ಭವಿಷ್ಯವನ್ನು ರೂಪಿಸುವ ನಾವೀನ್ಯತೆ, ವಿಶ್ವಾಸ ಮತ್ತು ಸಾಮರ್ಥ್ಯದ ದ್ಯೋತಕ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳ ಮೂಲಕ ಸಂಚರಿಸುವ ಎರ್ನಾಕುಲಂ-ಬೆಂಗಳೂರು ವಂದೇ ಭಾರತ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಆಗಿ ಶನಿವಾರ ಚಾಲನೆ ನೀಡಿದ್ದು, ಈ ರೈಲು ಮೆಜೆಸ್ಟಿಕ್‌ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಕ್ಕೆ ಬಂದಾಗ ಸ್ವಾಗತಕೋರಿ ಮಾತನಾಡಿದರು.

‘ಮೇಕ್‌ ಇನ್‌ ಇಂಡಿಯಾದಡಿ ನಮ್ಮದೇ ಎಂಜಿನಿಯರ್‌ಗಳು ವಿನ್ಯಾಸ ಮಾಡಿದ ಮತ್ತು ನಿರ್ಮಿಸಿದ ಈ ರೈಲುಗಳು ಭಾರತವು ತಾಂತ್ರಿಕವಾಗಿ ಮತ್ತು ವೇಗವಾಗಿ ಹೇಗೆ ಮುಂದುವರಿಯುತ್ತಿದೆ ಎಂಬುದನ್ನು ಬಿಂಬಿಸುತ್ತಿದೆ’ ಎಂದು ಹೇಳಿದರು.

ADVERTISEMENT

ಅಂತರ ರಾಜ್ಯ ಸಂಪರ್ಕ ಮಾರ್ಗವು ಅಗತ್ಯವಾಗಿದ್ದು, ವಾಣಿಜ್ಯ, ಶಿಕ್ಷಣ ಮತ್ತು ಸಂಸ್ಕೃತಿಯ ಎರಡು ಕೇಂದ್ರಗಳಾದ ಎರ್ನಾಕುಲಂ–ಬೆಂಗಳೂರನ್ನು ಈ ರೈಲು ಜೋಡಿಸುತ್ತಿದೆ ಎಂದರು.

ಸಂಸದ ಪಿ.ಸಿ. ಮೋಹನ್ ಮತ್ತು ನೈರುತ್ಯ ರೈಲ್ವೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಎರ್ನಾಕುಲಂ-ಬೆಂಗಳೂರು ವಂದೇ ಭಾರತ್‌ ರೈಲು ಬೆಂಗಳೂರು ಕೆಎಸ್‌ಆರ್‌ ನಿಲ್ದಾಣಕ್ಕೆ ತಲುಪಿದಾಗ ಎಚ್.ಡಿ. ಕುಮಾರಸ್ವಾಮಿ ಪಿ.ಸಿ. ಮೋಹನ್ ನೈಋತ್ಯ ರೈಲ್ವೆಯ ಅಧಿಕಾರಿಗಳು ಸ್ವಾಗತಿಸಿದರು

ಕೇರಳ ತಮಿಳುನಾಡಿಗೆ ಅನುಕೂಲ

ಎರ್ನಾಕುಲಂ–ಬೆಂಗಳೂರು ವಂದೇ ಭಾರತ್‌ ರೈಲು 608 ಕಿಲೋಮೀಟರ್‌ ಕ್ರಮಿಸುತ್ತದೆ. ಅದರಲ್ಲಿ ಕರ್ನಾಟಕದಲ್ಲಿ 85 ಕಿಲೋಮೀಟರ್‌ ಇದ್ದು ಮಧ್ಯೆ ಕೆ.ಆರ್‌.ಪುರ ನಿಲ್ದಾಣದಲ್ಲಿ ಮಾತ್ರ ನಿಲುಗಡೆಯನ್ನು ಹೊಂದಿದೆ. ಕೇರಳ ಮತ್ತು ತಮಿಳುನಾಡಿನ ಜನರಿಗೆ ಹೆಚ್ಚು ಅನುಕೂಲವಾಗಿದೆ. ಕೆಎಸ್‌ಆರ್‌ ಬೆಂಗಳೂರಿನಿಂದ ಬೆಳಿಗ್ಗೆ 5.10ಕ್ಕೆ ಹೊರಡಲಿದ್ದು ಕೃಷ್ಣರಾಜಪುರ, ಸೇಲಂ ಈರೋಡ್ ತಿರುಪ್ಪೂರು ಕೊಯಮತ್ತೂರು ಪಾಲಕ್ಕಾಡ್ ತ್ರಿಶೂರ್‌ ಮೂಲಕ ಸಂಚರಿಸಿ ಮಧ್ಯಾಹ್ನ 1.50ಕ್ಕೆ ಎರ್ನಾಕುಲಂ ತಲುಪಲಿದೆ. ಅಲ್ಲಿಂದ ಮಧ್ಯಾಹ್ನ 3.17ಕ್ಕೆ ಹೊರಟು ರಾತ್ರಿ 11ಕ್ಕೆ ಕೆಎಸ್‌ಆರ್ ಬೆಂಗಳೂರು ತಲುಪಲಿದೆ. ಬುಧವಾರ ಹೊರತುಪಡಿಸಿ ವಾರದ ಆರು ದಿನ ಸಂಚರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.