ಬೆಂಗಳೂರು: ರಾಜ್ಯದಲ್ಲಿ ಶ 8ರಷ್ಟು ಜನಸಂಖ್ಯೆ ಹೊಂದಿರುವ ವಹ್ನಿಕುಲ ಕ್ಷತ್ರಿಯ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ವಹ್ನಿಕುಲ ಕ್ಷತ್ರಿಯರ ಗುರು ಪೀಠ ಆಗ್ರಹಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೀಠದ ಸಹ ಕಾರ್ಯದರ್ಶಿ ವೆಂಕಟೇಶ್, ‘ಆದಿಶಕ್ತಿ ಮಹಾಸಂಸ್ಥಾನ ಮಠ ಟ್ರಸ್ಟ್ ವಹ್ನಿಕುಲ ಕ್ಷತ್ರಿಯರ ಗುರುಪೀಠದ ಸಮುದಾಯ ಭವನ ನಿರ್ಮಿಸುವುದಕ್ಕೆ ಮಂಜೂರಾಗಿರುವ ₹1 ಕೋಟಿಗೆ ಹೆಚ್ಚುವರಿಯಾಗಿ ₹50 ಲಕ್ಷ ಅನುದಾನ ಒದಗಿಸಿ ಕೂಡಲೇ ಬಿಡುಗಡೆಗೊಳಿಸಬೇಕು’ ಎಂದು ಒತ್ತಾಯಿಸಿದರು.
‘ವಹ್ನಿಕುಲ ಕ್ಷತ್ರಿಯರ ಮತ್ತು ಇದರ ಉಪಜಾತಿಗಳು ಶೈಕ್ಷಣಿಕವಾಗಿ ಬಹಳ ಹಿಂದುಳಿದಿವೆ. ಆದ್ದರಿಂದ, ಪ್ರತಿ ಜಿಲ್ಲೆಯಲ್ಲಿ ವಸತಿ ಶಾಲೆ ಮತ್ತು ಕಾಲೇಜುಗಳನ್ನು ನಿರ್ಮಿಸಲು ಕನಿಷ್ಠ ₹100 ಕೋಟಿ ಅನುದಾನದ ಜೊತೆಗೆ 100 ಎಕರೆ ಜಮೀನು ಒದಗಿಸಬೇಕು. ವಹ್ನಿಕುಲ ಕ್ಷತ್ರಿಯ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸಿ, ಎಲ್ಲ ಸರ್ಕಾರಿ ಸೌಲಭ್ಯಗಳನ್ನು ಹಂಚಿಕೆ ಮಾಡಬೇಕು’ ಎಂದರು.
‘ನೀಲಸಂದ್ರ ಮತ್ತು ಹೊಂಗಸಂದ್ರ ಗ್ರಾಮದಲ್ಲಿರುವ ಧರ್ಮರಾಯಸ್ವಾಮಿ ದೇವಸ್ಥಾನದ ಹೆಸರಿನಲ್ಲಿರುವ ಕಂದಾಯ ಜಮೀನನ್ನು ಕೂಡಲೇ ದೇವಸ್ಥಾನಕ್ಕೆ ಹಸ್ತಾಂತರಿಸಬೇಕು. ಬೆಂಗಳೂರು ನಗರದ ವಾರ್ಡ್ ಸಂಖ್ಯೆ 119ರ ಪೈಲ್ವಾನ್ ಎಂ. ಕೃಷ್ಣಪ್ಪ ರಸ್ತೆಯಲ್ಲಿರುವ ಕರಗ ಭವನ ನಿರ್ಮಿಸುವುದಕ್ಕೆ ಬಿಬಿಎಂಪಿಯಿಂದ ಮಂಜೂರಾಗಿರುವ 3,500 ಚದರಡಿ ವಿಸ್ತೀರ್ಣದ ನಿವೇಶವನ್ನು ಕೂಡಲೇ ಹಸ್ತಾಂತರಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.