ADVERTISEMENT

ಉತ್ಪಾದನೆ, ತಾಂತ್ರಿಕ ಸಮಸ್ಯೆ: ಹಾಲು ಪೂರೈಕೆಯಲ್ಲಿ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 20:29 IST
Last Updated 7 ಮಾರ್ಚ್ 2023, 20:29 IST
.
.   

ಬೆಂಗಳೂರು: ಉತ್ಪಾದನೆಯಲ್ಲಿ ಕುಸಿತ, ತಾಂತ್ರಿಕ ಸಮಸ್ಯೆಗಳು ಮತ್ತು ಸಿಹಿ ತಿಂಡಿಗಳ ತಯಾರಿಕೆಗೆ ಹೆಚ್ಚು ಒದಗಿಸಲಾಗುತ್ತಿರುವುದರಿಂದ ನಗರದಲ್ಲಿ ಹಾಲಿನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ.

ನಗರಕ್ಕೆ ಪ್ರತಿದಿನ 14 ಲಕ್ಷದಿಂದ 15ಲಕ್ಷ ಲೀಟರ್‌ಗಳಷ್ಟು ಹಾಲು ಈ ಮೊದಲು ಪೂರೈಕೆಯಾಗುತ್ತಿತ್ತು. ಆದರೆ, ಈಗ 13 ಲಕ್ಷ ಲೀಟರ್‌ಗಳಷ್ಟು ಪೂರೈಕೆಯಾಗುತ್ತಿದೆ.

ನಗರದ ಗ್ರಾಹಕರಿಗೆ ಹೆಚ್ಚಿನ ಪ್ರಮಾಣದಲ್ಲಿ ‘ಬಮುಲ್‌’ ವತಿಯಿಂದ ಹಾಲು ಪೂರೈಸಲಾಗುತ್ತಿದೆ. ಸದ್ಯ 10.30 ಲಕ್ಷ ಲೀಟರ್‌ಗಳಷ್ಟು ಹಾಲನ್ನು ಮಾರಾಟ ಮಾಡಲಾಗುತ್ತಿದೆ. ಉಳಿದ ಹಾಲು ವಿವಿಧ ಉತ್ಪನ್ನಗಳನ್ನು ತಯಾರಿಸಲು ಬಳಕೆಯಾಗುತ್ತಿದೆ.

ADVERTISEMENT

ತುಮಕೂರು, ಮಂಡ್ಯ, ಕೋಲಾರ ಹಾಲು ಒಕ್ಕೂಟಗಳು ಸಹ ಬೆಂಗಳೂರಿಗೆ ಹಾಲು ಪೂರೈಸುತ್ತಿವೆ. ಈ ಒಕ್ಕೂಟಗಳು ತಲಾ 2 ಲಕ್ಷದಿಂದ 3 ಲಕ್ಷ ಲೀಟರ್‌ನಷ್ಟು ಪ್ರತಿದಿನ ಪೂರೈಸುತ್ತಿವೆ.

ಬಮುಲ್‌ಗೆ ಪೂರೈಕೆಯಾಗುವ ಹಾಲಿನಲ್ಲಿ 2.10 ಲಕ್ಷ ಲೀಟರ್‌ ಅನ್ನು ಮೊಸರು ತಯಾರಿಸಲು ಬಳಸಲಾಗುತ್ತಿದೆ. ಜತೆಗೆ, 20 ಸಾವಿರ ಲೀಟರ್‌ ಅನ್ನು ಪನ್ನೀರ್‌, ಪೇಡೆ ಸೇರಿದಂತೆ ವಿವಿಧ ಉತ್ಪನ್ನಗಳಿಗೆ ಬಳಸಲಾಗುತ್ತಿದೆ. ಆಂಧ್ರಪ್ರದೇಶದಲ್ಲಿ ಜಾರಿಯಲ್ಲಿರುವ ಅಂಗನವಾಡಿ ಮಕ್ಕಳಿಗೆ ಹಾಲು ವಿತರಿಸುವ ‘ವಿಜಯ ವಜ್ರ’ ಯೋಜನೆಗೆ 40 ಸಾವಿರ ಲೀಟರ್‌ ಪೂರೈಸಲಾಗುತ್ತಿದೆ. ಜತೆಗೆ, ರಾಜ್ಯದಲ್ಲಿನ ಶಾಲಾ ಮಕ್ಕಳಿಗೆ ಹಾಲು ವಿತರಿಸುವ ’ಕ್ಷೀರಭಾಗ್ಯ’ ಯೋಜನೆಗೆ ಕನಿಷ್ಠ 50 ಸಾವಿರ ಲೀಟರ್‌ ಅಗತ್ಯವಿದೆ.

‘ಗ್ರಾಹಕರ ಬೇಡಿಕೆಯಷ್ಟು ಹಾಲು ಪೂರೈಸಲು ಸಾಧ್ಯವಾಗುತ್ತಿಲ್ಲ. ಸದ್ಯ 15 ಲಕ್ಷ ಲೀಟರ್‌ ಬೇಡಿಕೆ ಇದೆ. ಆದರೆ, ನಮಗೆ ಇನ್ನೂ 2 ಲಕ್ಷ ಲೀಟರ್‌ನಷ್ಟು ಕೊರತೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಹೆಚ್ಚಾಗಬಹುದು. ನಷ್ಟದ ಕಾರಣಕ್ಕೆ ಹೈನುಗಾರಿಕೆ ಬಗ್ಗೆ ರೈತರು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ’ ಎಂದು ಬಮುಲ್‌ ಅಧ್ಯಕ್ಷ ನರಸಿಂಹಮೂರ್ತಿ ಹೇಳುತ್ತಾರೆ.

‘ಕಳೆದ ಐದು ವರ್ಷಗಳಲ್ಲಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ಕೇವಲ ₹2 ಹೆಚ್ಚಿಸಲಾಗಿದೆ. ಪಶು ಆಹಾರ ದರವೂ ಹೆಚ್ಚಾಗಿದೆ. ಬೇರೆ ರಾಜ್ಯಗಳಲ್ಲಿ ರೈತರಿಗೆ ಪ್ರತಿ ಲೀಟರ್‌ಗೆ ₹40 ದೊರೆಯುತ್ತಿದ್ದರೆ, ಕರ್ನಾಟಕದಲ್ಲಿ ₹30 ಸಿಗುತ್ತಿದೆ. ಲಾಭ ಇಲ್ಲದ ಕಾರಣ ರೈತರು ಹೈನುಗಾರಿಕೆ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಹಾಲಿಗೆ ಹೆಚ್ಚಿನ ದರ ನೀಡಿ ರೈತರನ್ನು ಸಂಕಷ್ಟದಿಂದ ಪಾರು ಮಾಡುವಂತೆ ಸರ್ಕಾರಕ್ಕೆ ಕೋರಿದ್ದೇವೆ. ಆದರೆ, ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ದೂರುತ್ತಾರೆ.

ಖಾಸಗಿ ಕಂಪನಿಗಳ ಹಾಲಿಗೆ ಹೋಲಿಸಿದರೆ ನಂದಿನಿ ಹಾಲಿನ ದರ ಕಡಿಮೆ ಇರುವುದರಿಂದ ಕೆಲವು ಏಜೆಂಟರು ಸಿಹಿ ತಿಂಡಿಗಳನ್ನು ತಯಾರಿಸಲು ಹೆಚ್ಚು ಪೂರೈಸುತ್ತಿರುವುದರಿಂದ ಗ್ರಾಹಕರಿಗೆ ಸಮಸ್ಯೆಯಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಜತೆಗೆ, ಈಗ ಬೇಸಿಗೆಯಾಗಿರುವುದರಿಂದ, ಸುಮಾರು 50 ಸಾವಿರ ಲೀಟರ್‌ನಷ್ಟು ಹಾಲು ಉತ್ಪಾದನೆ ಕಡಿಮೆಯಾಗಿದೆ. ಇಂತಹ ಸಮಸ್ಯೆಗಳಿಂದ ಕೆಲವೆಡೆ ಮಾತ್ರ ಕೊರತೆಯಾಗಿರಬಹುದು ಎಂದು ಹೇಳುತ್ತಾರೆ.

‘ಆ್ಯಪ್‌’ನಲ್ಲಿ ಸಮಸ್ಯೆ
ಏಜೆಂಟರಿಂದ ಹಾಲು ಪೂರೈಕೆ ಕುರಿತು ಮಾಹಿತಿ ಪಡೆಯಲು ‘ಬಮುಲ್‌’ ಆ್ಯಪ್‌ ಅಭಿವೃದ್ಧಿಪಡಿಸಿದೆ. ಈ ಆ್ಯಪ್‌ನಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದಾಗಿ ಬೇಡಿಕೆ ಸಲ್ಲಿಸಿದಷ್ಟು 2–3 ದಿನ ಹಾಲು ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಈಗ ಸರಿಪಡಿಸಲಾಗಿದೆ ಎಂದು ಬಮುಲ್‌ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.