ADVERTISEMENT

₹3 ಕೋಟಿ ವೆಚ್ಚ l ವಸಂತಪುರ ಕೆರೆ ಕಾಮಗಾರಿ ಶುರು

ಕೆಲವೇ ತಿಂಗಳಲ್ಲಿ ಹೊಸ ರೂಪ ಪಡೆಯುವ ಆಶಾಭಾವ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 22:12 IST
Last Updated 10 ಜುಲೈ 2020, 22:12 IST
ವಸಂತಪುರ ಕೆರೆ
ವಸಂತಪುರ ಕೆರೆ   

ಬೆಂಗಳೂರು: ನಗರದ ವಸಂತಪುರ ಕೆರೆಯ (ಜನಾರ್ದನ ಕೆರೆ) ಅಭಿವೃದ್ಧಿ ಕಾಮಗಾರಿಗಳು ಕೊನೆಗೂ ಆರಂಭವಾಗಿದ್ದು, ಜಲಕಾಯವು ಕೆಲವೇ ತಿಂಗಳಲ್ಲಿ ಹೊಸ ರೂಪ ಪಡೆಯುವ ಆಶಾಭಾವ ವ್ಯಕ್ತವಾಗಿದೆ.

ವಸಂತಪುರ ವಾರ್ಡ್‌ನಲ್ಲಿರುವ ಈ ಕೆರೆ ಅಕ್ಷರಶಃ ಕಸದ ತೊಟ್ಟಿಯಾಗಿತ್ತು. ಕಳೆದ ವರ್ಷವೇ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳಬೇಕಿತ್ತು. ಆದರೆ, ಸ್ಥಳೀಯ ಪ್ರಭಾವಿಗಳು ಕಾಮಗಾರಿ ನಡೆಸಲು ಅಡ್ಡಿಪಡಿಸಿದ್ದರು. ಕೆರೆ ಅಭಿವೃದ್ಧಿ ಪ್ರಾಧಿಕಾರವು ಪೊಲೀಸರ ಸುಪರ್ದಿಯಲ್ಲಿ ಕೊನೆಗೂಕೆರೆಯ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಿದೆ. ಅಭಿವೃದ್ಧಿ ಕಾಮಗಾರಿಗೆ ₹3 ಕೋಟಿ ವೆಚ್ಚ ಮಾಡಲಾಗುತ್ತಿದೆ.

‘ನಗರದ ಬೇರೆ ಕೆರೆಗಳು ಕನಿಷ್ಠ ವಾಯುವಿಹಾರ ಮಾರ್ಗ ಹಾಗೂ ಮೂಲ ಸೌಕರ್ಯಗಳಿಂದ ಕೂಡಿವೆ. ಆದರೆ, ಇಲ್ಲಿ ಕೆರೆಯ ಲಕ್ಷಣಗಳೇ ಮರೆಯಾಗಿವೆ. ಜಲಮೂಲದಲ್ಲಿ ಭಾರಿ ಪ್ರಮಾಣದ ಹೂಳು ತುಂಬಿದೆ. ಬದಿಗಳಲ್ಲಿ ವಲಸೆ ಕಾರ್ಮಿಕರು ಮಲ-ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಕೆರೆಯ ಹತ್ತಿರ ಸುಳಿಯಲು ಸ್ಥಳೀಯ ನಿವಾಸಿಗಳು ಹಿಂದೇಟು ಹಾಕುತ್ತಾರೆ’ ಎಂದು ಸ್ಥಳೀಯರೊಬ್ಬರು ವಿವರಿಸಿದರು.

ADVERTISEMENT

‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಲಮೂಲದ ಅಭಿವೃದ್ಧಿಗೆ ಚಾಲನೆ ಸಿಕ್ಕಿತು. ಆದರೆ, ಸ್ಥಳೀಯ ಕೆಲ ಪ್ರಭಾವಿಗಳು ಕೋರ್ಟ್ ಮೆಟ್ಟಿಲೇರಿದ್ದರಿಂದ ಕಾಮಗಾರಿಗೆ ಹಿನ್ನಡೆಯಾಗಿತ್ತು. ಒತ್ತುವರಿಯಿಂದ ಜಲಕಾಯದ ಜಾಗ 7 ಎಕರೆಯಿಂದ 4 ಎಕರೆಗೆ ಇಳಿದಿದೆ. ಎಲ್ಲ ಅಂದುಕೊಂಡಂತೆ ನಡೆದಿದ್ದರೆ, ಜಲಮೂಲದ ಚಿತ್ರಣ ಈಗಾಗಲೇ ಬದಲಾಗಬೇಕಿತ್ತು’ ಎಂದು ಪಾಲಿಕೆ ಸದಸ್ಯೆ ಶೋಭಾ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಾಯುವಿಹಾರ ಮಾರ್ಗ, ಕೆರೆಯ ಸುತ್ತ ಬೇಲಿ ಹಾಗೂ ಏರಿ ನಿರ್ಮಿಸಲಾಗುವುದು. ಹೂಳು ಎತ್ತಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.