
ರಾಜರಾಜೇಶ್ವರಿನಗರ: ಇತಿಹಾಸ ಪ್ರಸಿದ್ಧ ಕನ್ನಲ್ಲಿಯಲ್ಲಿ ಶ್ರೀ ವೀರಭದ್ರಸ್ವಾಮಿ ದೇವರ ಬ್ರಹ್ಮರಥೋತ್ಸವ, ಗ್ರಾಮೀಣ ಸೊಗಡಿನ ಸಾಂಸ್ಕೃತಿಕ ಉತ್ಸವ, ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.
ಮಾಗಡಿ ಮುಖ್ಯರಸ್ತೆಯ ಕನ್ನಲ್ಲಿಯಲ್ಲಿ ನಡೆದ ಬ್ರಹ್ಮರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು, ರಥೋತ್ಸವಕ್ಕೆ ಬಾಳೆಹಣ್ಣು-ದವನ ಎಸೆಯುವ ಮೂಲಕ ಭಕ್ತಿಭಾವ ಮೆರೆದರು.
ವೀರಭದ್ರಸ್ವಾಮಿ ದೇವರನ್ನು ಹೊತ್ತ ರಥವನ್ನು ಭಕ್ತರು ಎಳೆದು ಧನ್ಯತಾ ಭಾವ ತೋರಿದರು. ವೀರಭದ್ರನ ಕುಣಿತ, ಡೊಳ್ಳು ಕುಣಿತ, ತಮಟೆ, ನಗಾರಿ, ವಾದ್ಯಮೇಳದೊಂದಿಗೆ ನಡೆದ ಜನಪದ ಉತ್ಸವದಲ್ಲಿ ವಯೋ ಭೇದವಿಲ್ಲದೆ ಎಲ್ಲರೂ ಕುಣಿದು ಕುಪ್ಪಳಿಸಿದರು. ರಥೋತ್ಸವಕ್ಕೂ ಮುನ್ನ ದೇವಸ್ಥಾನದಲ್ಲಿ ಹೋಮ-ಹವನ, ವಿಶೇಷ ಪೂಜೆಗಳು ನೆರವೇರಿದವು.
ಕನ್ನಲ್ಲಿ ವೀರಭದ್ರಸ್ವಾಮಿ ದೇವಸ್ಥಾನದ ದಾಸೋಹ ಸಮಿತಿ ಅಧ್ಯಕ್ಷ ಶಾಂತರಾಜು ಮಾತನಾಡಿ, ‘ರಾಜ-ಮಹಾರಾಜರ ಕಾಲದಿಂದಲೂ ಜಾತ್ರಾ ಮಹೋತ್ಸವ ನಡೆಯುತ್ತಿದೆ. ದೇವಸ್ಥಾನ ಆಡಳಿತ ಮಂಡಳಿ, ಗ್ರಾಮಸ್ಥರು ಸೇರಿ ಉತ್ಸವ, ರಥೋತ್ಸವ ನಡೆಸುತ್ತಿದ್ದಾರೆ‘ ಎಂದು ತಿಳಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಅವರ ನೇತೃತ್ವದಲ್ಲಿ ಅಲ್ಲಮಪ್ರಭು ಕಲಾ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಹಾಸ್ಯಕಲಾವಿದ ತುಕಾಲಿ ಸಂತೋಷ್ ತಂಡದವರಿಂದ ಹಾಸ್ಯ ನಾಟಕ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.