ADVERTISEMENT

ವೀರಶೈವ, ಲಿಂಗಾಯತ ಎರಡೂ ಒಂದೇ: ರಂಭಾಪುರಿ ಶ್ರೀ

ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2025, 15:31 IST
Last Updated 26 ಏಪ್ರಿಲ್ 2025, 15:31 IST
ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಅವರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಧನಗುರುಸ್ವಾಮಿ, ವೀರಭದ್ರ ಶಿವಾಚಾರ್ಯ ಸ್ವಾಮಿ, ರೇಣುಕಾ ಶಿವಾಚಾರ್ಯ ಸ್ವಾಮಿ, ಜಿ.ಎಸ್.ಪಾಟೀಲ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ 
ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಅವರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಧನಗುರುಸ್ವಾಮಿ, ವೀರಭದ್ರ ಶಿವಾಚಾರ್ಯ ಸ್ವಾಮಿ, ರೇಣುಕಾ ಶಿವಾಚಾರ್ಯ ಸ್ವಾಮಿ, ಜಿ.ಎಸ್.ಪಾಟೀಲ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ     

ಬೆಂಗಳೂರು: ‘ವೀರಶೈವ, ಲಿಂಗಾಯತ ಎರಡೂ ಒಂದೇ. ಆದರೆ, ಕೆಲವರು ತಮ್ಮ ಸ್ವಾರ್ಥಕ್ಕೆ ಬೇರೆ ರೀತಿ ವ್ಯಾಖ್ಯಾನ ಮಾಡುತ್ತಿದ್ದು, ಇಂತಹ ವದಂತಿಗಳಿಗೆ ಕಿವಿಗೊಡಬಾರದು’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.

ನಗರದಲ್ಲಿ ಶನಿವಾರ ನಡೆದ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ರೇಣುಕ ಸಿರಿ ಪ್ರಶಸ್ತಿ ಪ್ರದಾನ ಮತ್ತು ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

‘ಜಾತಿ ಗಣತಿ ವರದಿಯಲ್ಲಿ ವೀರಶೈವ ಲಿಂಗಾಯತ ಜನಸಂಖ್ಯೆ ನೋಡಿದರೆ ಭೂಮಿ ಕುಸಿದಷ್ಟು ಆತಂಕಕ್ಕೆ ಒಳಗಾಗಿದ್ದೇವೆ. ಸಮುದಾಯದ ಒಳ ಪಂಗಡಗಳನ್ನು ಪ್ರತ್ಯೇಕಗೊಳಿಸಿ, ಮೂಲ ಶಕ್ತಿಯನ್ನೇ ಕುಂಠಿತಗೊಳಿಸುವ ಕೆಲಸ ವ್ಯವಸ್ಥಿತವಾಗಿ ನಡೆದುಕೊಂಡು ಬರುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಸಮುದಾಯದ ಎಲ್ಲ ಪಂಗಡಗಳು ಒಂದಾಗಬೇಕು ಎಂಬುದು ಮಠದ ಅಭಿಲಾಷೆ. ಆಗ ಗೊಂದಲಗಳು ಇರುವುದಿಲ್ಲ, ಸಮಾಜವೂ ಅಭಿವೃದ್ಧಿ ಹೊಂದುತ್ತದೆ ಎಂದು ಅಭಿಪ್ರಾಯಪಟ್ಟರು.

ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ‘ಜಾತಿ ಗಣತಿ ವರದಿ ಮುಂದಿನ ಪೀಳಿಗೆಗೆ ಮಹತ್ವದ್ದಾಗಿದೆ. ಸಾಮಾಜಿಕ ನ್ಯಾಯಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ರಾಜ್ಯ ಸರ್ಕಾರ ಮತ್ತೊಮ್ಮೆ ಜಾತಿ ಗಣತಿ ಮಾಡಿಸಿ, ಮುಂದಿನ ನಿರ್ಧಾರ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಸಮುದಾಯದ ಒಳಪಂಗಡಗಳು ಒಂದಾಗಬೇಕು. ರಂಭಾಪುರಿ ಮಠದ ಸ್ವಾಮೀಜಿ ಹಾಗೂ ಹಿರಿಯರು ಎಲ್ಲರನ್ನೂ ಒಂದುಗೂಡಿಸುವ ಕೆಲಸ ಮಾಡಬೇಕು ಎಂದರು. 

ಮಹಲಿಂಗಪುರದ ವಿನಾಯಕ ಚಿಕ್ಕೋಡಿ ಅವರು ರೇಖಾ ಚಿತ್ರದಲ್ಲಿ ಬಿಡಿಸಿದ ರೇಣುಕಾಚಾರ್ಯರ ನವಲೀಲೆಯ ಭಾವಚಿತ್ರಗಳನ್ನು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅನಾವರಣಗೊಳಿಸಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ. ಎಚ್.ವಿ.ಪಂಚಾಕ್ಷರಯ್ಯ ಅವರು ಉಪನ್ಯಾಸ ನೀಡಿದರು. ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಹಾಜರಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಂಸ್ಥೆ ಅಧ್ಯಕ್ಷ ಯು.ಎಂ. ಬಸವರಾಜ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.