ADVERTISEMENT

ಜಾತಿ, ಉಪಜಾತಿಗಳ ಪುನರಾವರ್ತನೆ: ಆಯೋಗದಿಂದ ಸ್ಪಷ್ಟನೆ ಕೇಳಿದ ವೀರಶೈವ ಮಹಾಸಭಾ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 16:01 IST
Last Updated 15 ಸೆಪ್ಟೆಂಬರ್ 2025, 16:01 IST
<div class="paragraphs"><p>ಜಾತಿ ಸಮೀಕ್ಷೆ (ಸಾಂದರ್ಭಿಕ ಚಿತ್ರ)</p></div>

ಜಾತಿ ಸಮೀಕ್ಷೆ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗವು ಪ್ರಕಟಿಸಿರುವ ಕೈ‍ಪಿಡಿಯಲ್ಲಿ ವೀರಶೈವ ಲಿಂಗಾಯತ ಸಮುದಾಯಗಳ 135 ಜಾತಿ, ಉಪಜಾತಿಗಳಿವೆ. ಹಲವು ಜಾತಿ, ಉಪಜಾತಿಗಳು ಪುನರಾವರ್ತಿತವಾಗಿವೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಹೇಳಿದೆ.

ಕಾಂತರಾಜ ಆಯೋಗವು 79 ಜಾತಿ, ಉಪಜಾತಿಗಳನ್ನು ಉಲ್ಲೇಖಿಸಿತ್ತು. ಸಮೀಕ್ಷೆ ನಂತರ 95 ಜಾತಿ, ಉಪಜಾತಿಗಳು ದಾಖಲಾಗಿದ್ದವು. ಆದರೆ, ಆಯೋಗವು 84 ಜಾತಿ, ಉಪಜಾತಿಗಳನ್ನು ಪ್ರಕಟಿಸಿತ್ತು. 32 ಜಾತಿ, ಉಪಜಾತಿಗಳನ್ನು ಸೇರಿಸುವಂತೆ ಮಹಾಸಭಾ ಮನವಿ ಮಾಡಿತ್ತು. ಈಗ ಹೊಸಪಟ್ಟಿಯಲ್ಲಿ 135ಕ್ಕೇರಿದೆ. ಯಾವ ಮಾನದಂಡದ ಆಧಾರದಲ್ಲಿ ಸೇರಿಸಲಾಗಿದೆ ಎಂಬುದನ್ನು ಆಯೋಗ ಸ್ಪಷ್ಟಪಡಿಸಬೇಕು ಎಂದು ವೀರಶೈವ ಮಹಾಸಭಾವು ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಪತ್ರ ಬರೆದಿದೆ.

ADVERTISEMENT

ಹಲವು ಜಾತಿ, ಉಪಜಾತಿಗಳು ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಪುನರಾವರ್ತಿತವಾಗಿವೆ. ಹೀಗಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಯೋಗವನ್ನು ಕೋರಲಾಗಿತ್ತು. ಆದರೆ, ಕೋರಿಕೆಗೆ ಯಾವುದೇ ಬೆಲೆ ಸಿಕ್ಕಿಲ್ಲ. ಇದರ ಹಿಂದಿನ ಉದ್ದೇಶವೇನು ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ.

ವೀರಶೈವ ಲಿಂಗಾಯತ ಸಮಾಜಕ್ಕೆ ಸೇರುವ ಎಲ್ಲ ಸಮುದಾಯಗಳನ್ನು ಒಂದೇ ಕಡೆ ಸೇರಿಸಿ ಹಿಂದಿನ ಆಯೋಗ ವರದಿ ನೀಡಿತ್ತು. ಅದರಂತೆ ಈ ಬಾರಿಯೂ ಒಂದೇ ಕಡೆ ಸೇರಿಸುವಂತೆ ಮಹಾಸಭಾದಿಂದ ಮನವಿ ಮಾಡಲಾಗಿತ್ತು. ಈ ಮನವಿಗೆ ಯಾವುದೇ ಬೆಲೆ ಸಿಕ್ಕಿಲ್ಲ. ಕೈಪಿಡಿ ಬಿಡುಗಡೆಗೆ ಮುನ್ನಾ ಕರಡು ಕೈಪಿಡಿ ತಯಾರಿಸಿ ಸಾರ್ವಜನಿಕರಿಗೆ ನೀಡಿ ತಪ್ಪುಗಳಿದ್ದರೆ ಸರಿಪಡಿಸಲು ಅವಕಾಶ ಕೋರಲಾಗಿತ್ತು. ಅದಕ್ಕೆ ಆಯೋಗ ‍ಪ್ರತಿಕ್ರಿಯಿಸಿಲ್ಲ ಎಂದು ಮಹಾಸಭಾದ ಕಾರ್ಯದರ್ಶಿ ಎಚ್.ಎಂ. ರೇಣುಕ ಪ್ರಸನ್ನ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.