ADVERTISEMENT

ವೀರಶೈವ, ಲಿಂಗಾಯತ ನಮೂದು: ಸಮಿತಿ ರಚನೆ

ಖಂಡ್ರೆ ಅಧ್ಯಕ್ಷತೆಯಲ್ಲಿ ಪಕ್ಷಾತೀತ ಶಾಸಕರ ಸಭೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 16:17 IST
Last Updated 22 ಆಗಸ್ಟ್ 2025, 16:17 IST
ಈಶ್ವರ ಬಿ. ಖಂಡ್ರೆ
ಈಶ್ವರ ಬಿ. ಖಂಡ್ರೆ   

ಬೆಂಗಳೂರು: ಸೆಪ್ಟೆಂಬರ್ 20ರಿಂದ ಆರಂಭವಾಗುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವೇಳೆ ವೀರಶೈವ ಅಥವಾ ಲಿಂಗಾಯತ ಎಂದು ನಮೂದಿಸುವ ಕುರಿತು ಉನ್ನತ ಮಟ್ಟದ ಸಮಿತಿ ರಚಿಸಲು ಹಾಗೂ ಮಠಾಧೀಶರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಹೇಳಿದೆ.

ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಚಿವ ಈಶ್ವರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಶುಕ್ರವಾರ ಸಮುದಾಯದ ಪ್ರಮುಖರ ಸಭೆ ನಡೆಯಿತು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ ಪ್ರತಿನಿಧಿಸುವ ಶಾಸಕರು ಭಾಗವಹಿಸಿದ್ದರು.

‘ಸಮೀಕ್ಷೆಯಲ್ಲಿ ವೀರಶೈವ– ಲಿಂಗಾಯತ ಸಮುದಾಯದ ನೈಜ ಸಂಖ್ಯೆ ಖಚಿತಪಡಿಸಿಕೊಳ್ಳುವುದು ನಮ್ಮ ಉದ್ದೇಶವಾಗಿದೆ. ಸಮುದಾಯದ ನೈಜ ಸಂಖ್ಯೆ ತಿಳಿಯಲು ಅಖಿಲ ಭಾರತ ವೀರಶೈವ– ಲಿಂಗಾಯತ ಮಹಾಸಭಾ ತೆಗೆದುಕೊಳ್ಳುವ ತೀರ್ಮಾನ ಒಪ್ಪುವುದಕ್ಕೆ ಸಭೆಯಲ್ಲಿ ಸಮ್ಮತಿ ಸೂಚಿಸಲಾಗಿದೆ ಎಂದು ಈಶ್ವರ ಖಂಡ್ರೆ ಅವರು ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಯಾವುದೇ ಜಾತಿಯ ಜನರ ಹಕ್ಕನ್ನು ಕಸಿದುಕೊಳ್ಳುವ ಉದ್ದೇಶ ನಮಗೆ ಇಲ್ಲ. ಆದರೆ, ನಮ್ಮ ಸಮಾಜಕ್ಕೆ ಅನ್ಯಾಯವಾಗದಂತೆ ಸಮಾಜದ ಇಂದಿನ ಸ್ಥಿತಿ–ಗತಿ ಮತ್ತು ಸಂಖ್ಯೆಯನ್ನು ನಿಖರವಾಗಿ ತಿಳಿಯಲು ಸಭೆಯಲ್ಲಿ ಚರ್ಚಿಸಲಾಯಿತು’ ಎಂದರು.

ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಅನಾರೋಗ್ಯದ ಕಾರಣ ಸಭೆಗೆ ಬಂದಿರಲಿಲ್ಲ.

ಸಚಿವರಾದ ಶರಣಬಸಪ್ಪ ದರ್ಶನಾಪುರ, ಶಿವಾನಂದ ಪಾಟೀಲ, ಡಾ.ಶರಣಪ್ರಕಾಶ ಪಾಟೀಲ, ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕರಾದ ಬಿ.ಆರ್. ಪಾಟೀಲ, ಬಸವರಾಜ ರಾಯರಡ್ಡಿ, ಸಿ.ಎಸ್. ನಾಡಗೌಡ, ರಾಜು ಕಾಗೆ, ಸಿ.ಸಿ.ಪಾಟೀಲ, ಡಿ.ಜಿ.ಶಾಂತನಗೌಡ, ಅಲ್ಲಮಪ್ರಭು ಪಾಟೀಲ, ಕೆ. ಷಡಕ್ಷರಿ, ಎಂ.ವೈ.ಪಾಟೀಲ, ಜಿ.ಎಸ್. ಪಾಟೀಲ, ಯು.ಬಿ ಬಣಕಾರ, ಮಹಾಂತೇಶ ಕೌಜಲಗಿ, ಬಿ.ಪಿ. ಹರೀಶ್, ವಿಜಯಾನಂದ ಕಾಶಪ್ಪನವರ,  ಡಾ.ಚಂದ್ರಶೇಖರ ಪಾಟೀಲ, ಗಣೇಶ್ ಹುಕ್ಕೇರಿ, ಅರವಿಂದ ಬೆಲ್ಲದ, ಜ್ಯೋತಿ ಗಣೇಶ್, ಶರಣು ಸಲಗರ, ಎಚ್‌.ಎಂ. ಗಣೇಶ್ ಪ್ರಸಾದ್, ಬಸವರಾಜು ಶಿವಗಂಗಾ, ಶರಣಗೌಡ ಕಂದಕೂರ, ಬಾಬಾ ಸಾಹೇಬ್ ಪಾಟೀಲ, ಎಚ್.ಡಿ. ತಮ್ಮಯ್ಯ, ಲತಾ ಮಲ್ಲಿಕಾರ್ಜುನ್, ಅಶೋಕ್ ಮನಗೂಳಿ, ಶೈಲೇಂದ್ರ ಬೆಲ್ದಾಳೆ ಸೇರಿದಂತೆ 50ಕ್ಕೂ ಹೆಚ್ಚು ಶಾಸಕರು, ಮಾಜಿ ಸಂಸದ ಪ್ರಭಾಕರ ಕೋರೆ, ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಶಂಕರ್ ಬಿದರಿ ಮತ್ತು ನಿವೃತ್ತ ನ್ಯಾಯಮೂರ್ತಿ ಸುಭಾಷ್ ಅಡಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.