ADVERTISEMENT

ತರಕಾರಿ, ಸೊಪ್ಪಿನ ದರ ಏರಿಕೆ

​ಪ್ರಜಾವಾಣಿ ವಾರ್ತೆ
Published 25 ಮೇ 2020, 20:00 IST
Last Updated 25 ಮೇ 2020, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಬೆಂಗಳೂರು: ಲಾಕ್‍ಡೌನ್ ಸಡಿಲಿಕೆಯಾದ ಬಳಿಕ ತರಕಾರಿ ಹಾಗೂ ಸೊಪ್ಪಿನ ದರ ಕೊಂಚ ಏರಿವೆ. ಚಿಲ್ಲರೆ ವ್ಯಾಪಾರಿಗಳು ಮನಬಂದಂತೆ ಹಣ್ಣು ಹಾಗೂ ತರಕಾರಿಗಳ ಬೆಲೆ ಏರಿಸಿದ್ದು, ಸಗಟು ದರಗಳು ಯಥಾಸ್ಥಿತಿಯಲ್ಲಿವೆ.

ಬೇಸಿಗೆಯಲ್ಲಿ ತರಕಾರಿ ಹಾಗೂ ಹಣ್ಣಿನ ದರ ಏರುವುದು ಸಾಮಾನ್ಯ. ಆದರೆ, ಈ ಬಾರಿ ಲಾಕ್‍ಡೌನ್ ಇದ್ದ ಕಾರಣ ದರಗಳೆಲ್ಲ ಸ್ಥಿರವಾಗಿದ್ದವು. ಶುಭ ಸಮಾರಂಭಗಳಿಗೆ ನಿರ್ಬಂಧ ಹಾಗೂ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸಿಗದ ಕಾರಣ ದರ ಇಳಿಮುಖವಾಗಿತ್ತು. ಒಂದು ವಾರದಿಂದ ತರಕಾರಿ ದರ ಏರುತ್ತಿದೆ.

'ಸಗಟು ಮಾರುಕಟ್ಟೆಗಳಿಗೆ ಎಂದಿನಂತೆ ಹಣ್ಣು, ತರಕಾರಿ ಆವಕವಾಗುತ್ತಿದೆ. ಬೇಡಿಕೆಯೂ ಹೆಚ್ಚಾಗಿಲ್ಲ. ಲಾಕ್‍ಡೌನ್‍ನಿಂದ ವ್ಯಾಪಾರಿಗಳು ನಷ್ಟ ಅನುಭವಿಸಿದ್ದರು. ಈಗ ಲಾಕ್‍ಡೌನ್ ಸಡಿಲಿಕೆಯಾಗಿರುವ ಹಿನ್ನೆಲೆ ಚಿಲ್ಲರೆ ವ್ಯಾಪಾರಿಗಳು ಲಾಭಕ್ಕಾಗಿ ದರಗಳನ್ನು ಏರಿಸಿರಬಹುದು' ಎಂದು ದಾಸನಪುರ ಎಪಿಎಂಸಿ ಮಾರುಕಟ್ಟೆಯ ವರ್ತಕರೊಬ್ಬರು ತಿಳಿಸಿದರು.

ADVERTISEMENT

ಸೊಪ್ಪಿನ ದರ ಏರಿಕೆ: ವಾರದಿಂದ ಸೊಪ್ಪಿನ ದರಗಳೂ ಕೊಂಚ ಏರಿವೆ. ಪ್ರತಿ ಕಟ್ಟಿಗೆ ₹10ರಿಂದ ₹15ರಷ್ಟಿದ್ದ ಕೊತ್ತಂಬರಿ, ಈಗ ದುಪ್ಪಟ್ಟಾಗಿದೆ. ಸಗಟು ದರ ಪ್ರತಿ ಕಟ್ಟಿಗೆ ₹30ರಷ್ಟಿದ್ದು, ಚಿಲ್ಲರೆ ಅಂಗಡಿಗಳಲ್ಲಿ ಕೊತ್ತಂಬರಿ ಸೊಪ್ಪಿನ ಮಧ್ಯಮ ಗಾತ್ರದ ಕಟ್ಟು ಒಂದಕ್ಕೆ ₹60 ನಿಗದಿ ಮಾಡಲಾಗಿದೆ. ಸಬ್ಬಕ್ಕಿ ಸೊಪ್ಪು ₹15, ಪಾಲಕ್ ₹6, ದಂಟಿನ ಸೊಪ್ಪು ₹5ರಂತೆ ಸಗಟು ದರ ಇದೆ. ಹಾಪ್‍ಕಾಮ್ಸ್ ನಲ್ಲಿ ಒಂದು ಕೆ.ಜಿ ಕೊತ್ತಂಬರಿ ದರ ₹120 ಇದೆ.

'ಬೇಸಿಗೆಯಲ್ಲಿ ಸೊಪ್ಪುಗಳು ಸರಿಯಾಗಿ ಬೆಳೆಯುವುದಿಲ್ಲ. ಹೀಗಾಗಿ ಮೇ-ಜೂನ್‍ನಲ್ಲಿ ಸೊಪ್ಪಿನ ದರ ಏರುತ್ತದೆ. ಕೊತ್ತಂಬರಿಯನ್ನು ಅಡುಗೆಗೆ ಪ್ರಧಾನವಾಗಿ ಬಳಸುವುದರಿಂದ ಬೆಲೆ ಏರಿದೆ. ಕಳೆದ ಬಾರಿಗೆ ಹೋಲಿಸಿದರೆ ಸೊಪ್ಪಿನ ದರ ಅಷ್ಟೇನೂ ದುಬಾರಿಯಾಗಿಲ್ಲ' ಎಂದು ಸೊಪ್ಪಿನ ಸಗಟು ವ್ಯಾಪಾರಿ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.