ADVERTISEMENT

₹100ರ ಗಡಿ ದಾಟಿದ ತರಕಾರಿಗಳ ಬೆಲೆ

ಮಳೆ ನಿಂತರೂ ಇಳಿಯದ ಬೆಲೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 19:36 IST
Last Updated 8 ಡಿಸೆಂಬರ್ 2021, 19:36 IST
ನುಗ್ಗೇಕಾಯಿ 
ನುಗ್ಗೇಕಾಯಿ    

ಬೆಂಗಳೂರು: ನಗರದಲ್ಲಿ ಕಳೆದ ವಾರ ಕಡಿಮೆ ಇದ್ದ ತರಕಾರಿಗಳ ದರ ದಿಢೀರ್ ಏರಿದ್ದು, ಬೀನ್ಸ್‌,ಬದನೆ, ತೊಂಡೆಕಾಯಿ ಸೇರಿದಂತೆ ಹಲವು ತರಕಾರಿಗಳ ಬೆಲೆ ಕೆ.ಜಿ.ಗೆ ₹100ಕ್ಕೆತಲುಪಿದೆ.

ಸತತ ಮಳೆಯಿಂದಾಗಿ ಒಂದು ತಿಂಗಳಿನಿಂದ ನಿರಂತರ ಏರಿಕೆ ಕಂಡು ₹150ರವರೆಗೆ ತಲುಪಿದ್ದ ಟೊಮೆಟೊ ದರ ಕಳೆದ ವಾರ ಕೊಂಚ ತಗ್ಗಿತ್ತು. ಇದರಿಂದ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದರು. ಈಗ ಮತ್ತೆ ಟೊಮೆಟೊ ದರ ₹100ಕ್ಕೆ ಏರಿ ಗ್ರಾಹಕರಿಗೆ ದರ ಏರಿಕೆ ಬಿಸಿ ನೀಡಿದೆ.

‘ಬೆಂಡೆಕಾಯಿ, ತೊಗರಿಕಾಯಿ, ಕ್ಯಾರೆಟ್,ಮೂಲಂಗಿ,ಬೀಟ್‌ರೂಟ್‌, ಮೆಣಸಿನಕಾಯಿ, ಅವರೆಕಾಯಿ ದರಗಳೂ ಕೆ.ಜಿ.ಗೆ ₹50ಕ್ಕಿಂತ ಹೆಚ್ಚಳ ಕಂಡಿವೆ. ಈ ತರಕಾರಿಗಳ ದರ ಕಳೆದ ವಾರ ಕಡಿಮೆ ಇದ್ದವು. ಪ್ರತಿ ತರಕಾರಿ ದರ ₹10ರಿಂದ ₹20 ಹೆಚ್ಚಳವಾಗಿದ್ದು, ಎಲ್ಲ ತರಕಾರಿಗಳ ದರ ₹30ಕ್ಕಿಂತ ಹೆಚ್ಚೇ ಇದೆ’ ಎನ್ನುತ್ತಾರೆ ಕೆ.ಆರ್.ಮಾರುಕಟ್ಟೆಯ ತರಕಾರಿ ವ್ಯಾಪಾರಿ ವೆಂಕಟೇಶ್‌.

ADVERTISEMENT

ದಾಸನಪುರ ಎಪಿಎಂಸಿ ಮಾರುಕಟ್ಟೆಯ ತರಕಾರಿ ಸಗಟು ವರ್ತಕ ಕುಮಾರ್, ‘ಎರಡು ತಿಂಗಳಿನಿಂದ ಸುರಿದಿದ್ದ ಭಾರಿ ಮಳೆಯಿಂದ ತರಕಾರಿಗಳ ದರ ನಿರಂತರವಾಗಿ ಏರಿಕೆ ಕಂಡಿತ್ತು. ಈಗ ಮಳೆ ನಿಂತಿರುವ ಮಾತ್ರಕ್ಕೆ ಬೆಲೆಗಳು ಕಡಿಮೆಯಾಗುವುದಿಲ್ಲ’ ಎಂದರು.

‘ಮಳೆಯಿಂದ ತರಕಾರಿಗಳು ಹಾನಿಗೆ ತುತ್ತಾಗಿ, ಮಾರುಕಟ್ಟೆಗಳಲ್ಲಿ ಆವಕ ಪ್ರಮಾಣ ಕುಸಿಯುತ್ತದೆ. ಇದರಿಂದ ತರಕಾರಿ ದರ ಮತ್ತಷ್ಟು ಏರುತ್ತದೆ. ಮೊದಲಿನಂತೆ ಅಗತ್ಯ‍ಪ್ರಮಾಣದ ತರಕಾರಿಗಳು ಮಾರುಕಟ್ಟೆಗೆ ಪೂರೈಕೆಯಾಗಲು ತಿಂಗಳುಗಟ್ಟಲೆ ಸಮಯ ಬೇಕು. ಅಲ್ಲಿಯವರೆಗೆ ದರ ಏರಿಕೆ ತಪ್ಪಿದ್ದಲ್ಲ’ ಎಂದೂ ಹೇಳಿದರು.

ಸೊಪ್ಪುಗಳೂ ದುಬಾರಿ: ಒಂದು ತಿಂಗಳಿನಿಂದ ಹೆಚ್ಚಳವಾಗಿದ್ದ ಸೊಪ್ಪಿನ ದರಗಳು ಈವರೆಗೆ ಕಡಿಮೆಯಾಗಿಲ್ಲ.ದಂಟು, ಪಾಲಕ್, ಮೆಂತ್ಯೆ, ಕೊತ್ತಂಬರಿ, ಸಬ್ಬಸಿಗೆ ಸೇರಿದಂತೆ ಎಲ್ಲ ಸೊಪ್ಪುಗಳು ಪ್ರತಿ ಕಟ್ಟಿಗೆ ₹20ಕ್ಕೂ ಹೆಚ್ಚಿನ ದರದಲ್ಲಿ ಮಾರಾಟ ಆಗುತ್ತಿವೆ. ಕೊತ್ತಂಬರಿ ಸೊಪ್ಪು ₹40 ಇದೆ.

ನುಗ್ಗೇಕಾಯಿ ಕೆ.ಜಿ.ಗೆ ₹200!

ನುಗ್ಗೇಕಾಯಿ ಸಗಟು ದರ ಪ್ರತಿ ಕೆ.ಜಿ.ಗೆ ₹200, ಚಿಲ್ಲರೆ ದರ ₹250 ಹಾಗೂ ಹಾಪ್‌ಕಾಮ್ಸ್‌ನಲ್ಲಿ ₹350ರಂತೆ ಬುಧವಾರ ಮಾರಾಟವಾಗಿದೆ. ಕಳೆದ ತಿಂಗಳು ₹30ರಿಂದ ₹50ರವರೆಗೆ ಮಾರಾಟವಾಗಿತ್ತು.

‘ಆರೋಗ್ಯಕರ ಅಂಶಗಳು ಹೇರಳವಾಗಿರುವ ಕಾರಣದಿಂದ ಸಾಮಾನ್ಯವಾಗಿ ಪ್ರತಿ ವರ್ಷ ಚಳಿಗಾಲದಲ್ಲಿ ನುಗ್ಗೇಕಾಯಿಯ ದರ ಹೆಚ್ಚಾಗುತ್ತದೆ. ಈ ವರ್ಷದ ಭಾರಿ ಮಳೆಯಿಂದ ನುಗ್ಗೇಕಾಯಿ ಫಸಲು ಹಾಳಾಗಿದೆ. ಹಾಗಾಗಿ, ಮಾರುಕಟ್ಟೆಗಳಲ್ಲಿ ನುಗ್ಗೇಕಾಯಿ ಕೊರತೆ ಎದುರಾಗಿ, ಬೆಲೆಯೂ ಏರಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ದರ ಹತ್ತು ಪಟ್ಟು ಹೆಚ್ಚಾಗಿದೆ’ ಎಂದು ತರಕಾರಿ ವ್ಯಾಪಾರಿ ಮಂಜೇಶ್‌ ಹೇಳಿದರು.

ದರಪಟ್ಟಿ (ಪ್ರತಿ ಕೆ.ಜಿ.ಗೆ ₹ಗಳಲ್ಲಿ)

ತರಕಾರಿ; ಚಿಲ್ಲರೆ ದರ; ಹಾಪ್‍ಕಾಮ್ಸ್ ದರ

ನುಗ್ಗೇಕಾಯಿ; 250; 350

ತೊಂಡೆಕಾಯಿ; 100; 163

ಬದನೆ; 100; 114

ಟೊಮೆಟೊ; 100; 115

ಬೀನ್ಸ್; 100; 90

ಬೆಂಡೆಕಾಯಿ; 80; 94

ತೊಗರಿಕಾಯಿ; 80; 108

ಕ್ಯಾರೆಟ್; 70;94

ಮೂಲಂಗಿ; 60; 86

ಬೀಟ್‌ರೂಟ್‌; 50; 70

ಮೆಣಸಿನಕಾಯಿ; 50; 64

ಅವರೆಕಾಯಿ; 50; 60

ಶುಂಠಿ; 40; 70

ಈರುಳ್ಳಿ; 40; 56

ಹೂಕೋಸು; 40; 54

ಆಲೂಗಡ್ಡೆ; 30; 42

ಎಲೆಕೋಸು; 30; 64

––

ಸೊಪ್ಪು;ಚಿಲ್ಲರೆ(ಕಟ್ಟಿಗೆ);ಹಾಪ್‍ಕಾಮ್ಸ್ (ಕೆ.ಜಿ.ಗೆ)

ದಂಟು;30;140

ಪಾಲಕ್;25;125

ಮೆಂತ್ಯೆ;25;124

ಕೊತ್ತಂಬರಿ;20;70

ಸಬ್ಬಸಿಗೆ; 20;70

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.