ADVERTISEMENT

ಜಪ್ತಿ ವಾಹನ ಹಸ್ತಾಂತರ: ₹14,10 ಲಕ್ಷ ಹಳೇ ದಂಡವೂ ವಸೂಲಿ

ಪ್ರತಿ ಠಾಣೆಯಲ್ಲೂ ವಾಹನ ಮಾಲೀಕರ ಸರದಿ ಸಾಲು: ಪಿಎಸ್‌ಐ ನೇತೃತ್ವದ ತಂಡದಿಂದ ದಾಖಲೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 2 ಮೇ 2020, 19:55 IST
Last Updated 2 ಮೇ 2020, 19:55 IST
ಜಪ್ತಿ ಮಾಡಲಾದ ವಾಹನ ಬಿಡಿಸಿಕೊಳ್ಳಲು ಆರ್‌.ಟಿ.ನಗರ ಪೊಲೀಸ್‌ ಠಾಣೆ ಎದುರು ಸರದಿಯಲ್ಲಿ ನಿಂತಿದ್ದ ಮಾಲೀಕರು – ಪ್ರಜಾವಾಣಿ ಚಿತ್ರ
ಜಪ್ತಿ ಮಾಡಲಾದ ವಾಹನ ಬಿಡಿಸಿಕೊಳ್ಳಲು ಆರ್‌.ಟಿ.ನಗರ ಪೊಲೀಸ್‌ ಠಾಣೆ ಎದುರು ಸರದಿಯಲ್ಲಿ ನಿಂತಿದ್ದ ಮಾಲೀಕರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಲಾಕ್‌ಡೌನ್‌ ಹಾಗೂ ನಿಷೇಧಾಜ್ಞೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಜಪ್ತಿ ಮಾಡಲಾಗಿದ್ದ 2 ಸಾವಿರಕ್ಕೂ ಹೆಚ್ಚು ವಾಹನಗಳನ್ನು ನಗರ ಪೊಲೀಸರು ಮಾಲೀಕರಿಗೆ ಹಸ್ತಾಂತರಿಸಿದ್ದಾರೆ. ಇದರ ಜೊತೆಗೆಯೇ, ಸಂಚಾರ ನಿಯಮ ಉಲ್ಲಂಘನೆಯ ಹಳೇ ಪ್ರಕರಣಗಳಲ್ಲಿ ಬಾಕಿ ಇದ್ದ ₹14.10 ಲಕ್ಷ ದಂಡವನ್ನೂ ವಸೂಲಿ ಮಾಡಿದ್ದಾರೆ.

ಹೈಕೋರ್ಟ್‌ ನಿರ್ದೇಶನದಂತೆ ನಿಗದಿತ ಶುಲ್ಕ ಕಟ್ಟಿಸಿಕೊಂಡು ದಾಖಲೆಗಳ ಪರಿಶೀಲನೆ ನಡೆಸಿ ಆಯಾ ಠಾಣೆ ಪೊಲೀಸರು, ದ್ವಿಚಕ್ರ ವಾಹನ, ಆಟೊ ಹಾಗೂ ಕಾರುಗಳನ್ನು ಬಿಡುಗಡೆ ಮಾಡಿದ್ದಾರೆ.

ಇದೇ ಸಂದರ್ಭದಲ್ಲೇ ಸಂಚಾರ ಪೊಲೀಸರು, ಈ ಹಿಂದೆ ಸಂಚಾರ ನಿಯಮ ಉಲ್ಲಂಘಿಸಿದ್ದ ಪ್ರಕರಣಗಳ ದಂಡವನ್ನೂ ಮಾಲೀಕರಿಂದ ವಸೂಲಿ ಮಾಡಿದ್ದಾರೆ.

ADVERTISEMENT

ಜಪ್ತಿ ವಾಹನಗಳನ್ನು ಮಾಲೀಕರಿಗೆ ಹಸ್ತಾಂತರಿಸುವ ಜವಾಬ್ದಾರಿಯನ್ನು ಆಯಾ ಠಾಣೆಯ ಪಿಎಸ್‌ಐ ನೇತೃತ್ವದ ತಂಡಕ್ಕೆ ವಹಿಸಲಾಗಿದೆ. ಆಯಾ ವಿಭಾಗದ ಡಿಸಿಪಿಗಳೇ ಸ್ಥಳಕ್ಕೆ ಭೇಟಿ ನೀಡಿ ವಾಹನಗಳ ಹಸ್ತಾಂತರ ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

‘ವಾಹನಗಳ ಹಸ್ತಾಂತರ ಆರಂಭವಾಗಲಿದೆ’ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಮಾಲೀಕರು ಶುಕ್ರವಾರ ಹಾಗೂ ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಆಯಾ ಠಾಣೆ ಬಳಿ ಬಂದಿದ್ದರು. ಎಲ್ಲ ಮಾಲೀಕರಿಗೂ ಅಂತರವನ್ನು ಕಾಯ್ದುಕೊಂಡು ಸರದಿಯಲ್ಲಿ ನಿಲ್ಲುವಂತೆ ಸೂಚಿಸಲಾಗಿತ್ತು. ಇದರಿಂದಾಗಿ ಪ್ರತಿ ಠಾಣೆ ವ್ಯಾಪ್ತಿಯಲ್ಲೂ ಮಾಲೀಕರ ಸರದಿ ಹೆಚ್ಚಿತ್ತು.

ಬೆಂಗಳೂರು ಒನ್ ಕೇಂದ್ರ ಹಾಗೂ ಆನ್‌ಲೈನ್ ಮೂಲಕ ದಂಡ ಪಾವತಿ ರಸೀತಿ, ವಾಹನಗಳ ನೋಂದಣಿ ಪುಸ್ತಕ, ಚಾಲನಾ ಪರನಾನಗಿ ಹಾಗೂ ವಿಳಾಸದ ದಾಖಲೆಗಳೊಂದಿಗೆ ಮಾಲೀಕರು ಠಾಣೆಗೆ ಬಂದಿದ್ದರು. ನಿಯೋಜಿತ ಪೊಲೀಸ್ ಸಿಬ್ಬಂದಿ, ಎಲ್ಲ ದಾಖಲೆಗಳನ್ನು ಪರಿಶೀಲಿಸಿ ವಾಹನಗಳ ಕೀಗಳನ್ನು ಮಾಲೀಕರಿಗೆ ನೀಡಿದರು.

ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದ ಹಾಗೂ ಸೂಕ್ತ ದಾಖಲೆ ನೀಡದ ಮಾಲೀಕರನ್ನು ಪೊಲೀಸರು ವಾಪಸು ಕಳುಹಿಸಿದರು. ವಾಹನ ಪಡೆಯಲು ಬಂದವರು ಮಾಸ್ಕ್ ಧರಿಸುವುದು ಹಾಗೂ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿತ್ತು.

‘ಲಾಕ್‌ಡೌನ್ ಜಾರಿಯಾದಾಗಿನಿಂದ ನಗರದ ಹಲವೆಡೆ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿತ್ತು. ಅನಗತ್ಯವಾಗಿ ಸಂಚರಿಸುತ್ತಿದ್ದ ಹಾಗೂ ನಿಯಮಗಳನ್ನು ಉಲ್ಲಂಘಿಸಿದ್ದ ಸಾರ್ವಜನಿಕರ ವಾಹನಗಳನ್ನು ಜಪ್ತಿ ಮಾಡಿ ಆಯಾ ಠಾಣೆ ಸುಪರ್ದಿಯಲ್ಲಿ ಇಟ್ಟುಕೊಳ್ಳಲಾಗಿತ್ತು. ಈಗ ಆಯಾ ಠಾಣೆಯಲ್ಲಿ ವಾಹನಗಳ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

5,429 ಪ್ರಕರಣಗಳಲ್ಲಿ ದಂಡ ವಸೂಲಿ: ‘ಸಂಚಾರ ನಿಯಮ ಉಲ್ಲಂಘಿಸಿದ್ದ ವಾಹನಗಳ ಮಾಲೀಕರು, ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದರು. ಆ ಪೈಕಿ ಕೆಲವರು ಲಾಕ್‌ಡೌನ್‌ ವೇಳೆಯೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಅವರಿಂದ ಹಳೇ ಪ್ರಕರಣಗಳ ದಂಡ ಸಂಗ್ರಹಿಸಲಾಗಿದೆ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್.ರವಿಕಾಂತೇಗೌಡ ಹೇಳಿದರು.

‘ಶುಕ್ರವಾರ ಬಿಡುಗಡೆ ಮಾಡಲಾದ 1,634 ವಾಹನಗಳ ಮೇಲೆ 5,429 ಪ್ರಕರಣಗಳು ಇದ್ದವು. ಅದರ ದಂಡದ ಮೊತ್ತ ₹ 14.10 ಲಕ್ಷವನ್ನು ಮಾಲೀಕರಿಗೆ ವಸೂಲಿ ಮಾಡಲಾಗಿದೆ’ ಎಂದೂ ಅವರು ತಿಳಿಸಿದರು.

‘ಲಾಕ್‌ಡೌನ್‌ ಜೊತೆ ಜಪ್ತಿಯೂ ಮುಂದುವರಿಕೆ’
’ಜನರ ಹಿತದೃಷ್ಟಿಯಿಂದ ಮೇ 17ರವರೆಗೆ ಲಾಕ್‌ಡೌನ್‌ ಮುಂದುವರಿದಿದೆ. ಈ ಹಿಂದೆ ಜಪ್ತಿ ಮಾಡಿದ್ದ ವಾಹನಗಳನ್ನು ಮಾಲೀಕರಿಗೆ ನೀಡಲಾಗುತ್ತಿದೆ. ಇನ್ನು ಮುಂದೆಯೂ ನಿಯಮ ಉಲ್ಲಂಘಿಸುವವರ ವಾಹನಗಳ ಜಪ್ತಿ ಪ್ರಕ್ರಿಯೆ ಮುಂದುವರಿಯಲಿದೆ. ಇದಕ್ಕೆ ಬೆಂಗಳೂರಿನ ಜನತೆ ಸಹಕರಿಸಬೇಕು’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.