ಬೆಂಗಳೂರು: ಗುರುಕುಮಾರ ಪಂಚಾಕ್ಷರೇಶ್ವರ ಸಂಗೀತ ಕಲಾ ವೇದಿಕೆ ನೀಡುವ ‘ಪಂಚಾಕ್ಷರ ಕೃಪಾಭೂಷಣ ಪ್ರಶಸ್ತಿ’ಗೆ ಹಿಂದೂಸ್ತಾನಿ ಗಾಯಕ ಎಂ. ವೆಂಕಟೇಶ್ ಕುಮಾರ್ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯು ₹25 ಸಾವಿರ ನಗದು ಒಳಗೊಂಡಿದೆ. ವೇದಿಕೆಯು ಇದೇ ಭಾನುವಾರ ಮಧ್ಯಾಹ್ನ 3 ಗಂಟೆಗೆ ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಪಂಡಿತ್ ಶೇಷಾದ್ರಿ ಗವಾಯಿ ಸಂಗೀತೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದೆ.
ಬಸವ ಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದೇವರು ಅವರು ಸಮಾರಂಭದ ಸಾನ್ನಿಧ್ಯ ವಹಿಸುತ್ತಾರೆ. ಬೀದರ್ ಜಿಲ್ಲೆಯ ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದೇವರು ಸಮಾರಂಭ ಉದ್ಘಾಟಿಸುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ಅವರು ಪ್ರಶಸ್ತಿ ಪ್ರದಾನ ಮಾಡುತ್ತಾರೆ. ತಬಲಾ ವಾದಕ ಸತೀಶ್ ಹಂಪಿಹೊಳಿ ಅವರು ಅಧ್ಯಕ್ಷತೆ ವಹಿಸುತ್ತಾರೆ. ಪ್ರಶಸ್ತಿ ಪ್ರದಾನದ ಬಳಿಕ ವೆಂಕಟೇಶ್ ಕುಮಾರ್ ಅವರಿಂದ ಗಾಯನ ನಡೆಯಲಿದೆ ಎಂದು ವೇದಿಕೆ ಅಧ್ಯಕ್ಷ ನಾಗೇಂದ್ರ ಟಿ. ರಾಣಾಪೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.