
ಪ್ರಜಾವಾಣಿ ವಾರ್ತೆಬೆಂಗಳೂರು: ನಗರದ ವಿಭೂತಿಪುರ ಸಂಸ್ಥಾನ ಮಠವು ನೀಡುವ 2025ನೇ ಸಾಲಿನ ಸುವರ್ಣಶ್ರೀ ರಾಷ್ಟ್ರೀಯ ಪ್ರಶಸ್ತಿ ಹಾಗೂ ಜಾನಪದ ವಿಭೂತಿ ರಾಷ್ಟ್ರೀಯ ಪ್ರಶಸ್ತಿಗೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ.
ಬೆಂಗಳೂರು ಗಾಂಧಿಭವನದ ಅಧ್ಯಕ್ಷರಾದ ವೂಡೇ ಪಿ.ಕೃಷ್ಣ ಅವರನ್ನು ‘ಸುವರ್ಣಶ್ರೀ ರಾಷ್ಟ್ರೀಯ ಪ್ರಶಸ್ತಿ’ಗೆ ಹಾಗೂ ಗದಗ ಜಿಲ್ಲೆ ರೋಣ ತಾಲ್ಲೂಕು ಕೊತಬಾಳ ಗ್ರಾಮದ ಜೋಗತಿ ನೃತ್ಯ ಕಲಾವಿದ ರಾಚಯ್ಯ ವೀರಭದ್ರಯ್ಯ ಮುಧೋಳ ಅವರನ್ನು ‘ಜಾನಪದ ವಿಭೂತಿ ರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.
ಸುವರ್ಣಶ್ರೀ ರಾಷ್ಟ್ರೀಯ ಪ್ರಶಸ್ತಿಯು ₹50 ಸಾವಿರ, ಫಲಕವನ್ನು ಒಳಗೊಂಡಿದೆ. ನ.17ರಂದು ಮಠದಲ್ಲಿ ನಡೆಯುವ ವೀರಭದ್ರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಪ್ರದಾನ ಮಾಡಲಾಗುತ್ತದೆ.
ಜಾನಪದ ವಿಭೂತಿ ರಾಷ್ಟ್ರೀಯ ಪ್ರಶಸ್ತಿಯು ₹25 ಸಾವಿರ ನಗದು, ಫಲಕ ಒಳಗೊಂಡಿದೆ. ನ.16ರಂದು ಮಠದಲ್ಲಿ ನಡೆಯುವ ಜಾನಪದೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಮಠದ ಕಾರ್ಯದರ್ಶಿ ಸಿ.ಬಸವರಾಜು ತಿಳಿಸಿದ್ದಾರೆ.