ADVERTISEMENT

ಸಿಎಂಆರ್‌ ಇನ್‌ಕ್ಯುಬೇಷನ್ ಸೆಂಟರ್‌ಗೆ ಚಾಲನೆ ನೀಡಿದ ಉಪ ರಾಷ್ಟ್ರಪತಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 15:56 IST
Last Updated 21 ಜನವರಿ 2026, 15:56 IST
ಸಿಎಂಆರ್‌ ಇನ್‌ಕ್ಯುಬೇಷನ್ ಸೆಂಟರ್‌ಗೆ ಸಿ.ಪಿ.ರಾಧಾಕೃಷ್ಣನ್ ಚಾಲನೆ ನೀಡಿದರು. ಸಬಿತಾ ರಾಮಮೂರ್ತಿ, ಸಿ.ಕೆ. ರಾಮಮೂರ್ತಿ, ಥಾವರಚಂದ್‌ ಗೆಹಲೋತ್ ಉಪಸ್ಥಿತರಿದ್ದರು
ಸಿಎಂಆರ್‌ ಇನ್‌ಕ್ಯುಬೇಷನ್ ಸೆಂಟರ್‌ಗೆ ಸಿ.ಪಿ.ರಾಧಾಕೃಷ್ಣನ್ ಚಾಲನೆ ನೀಡಿದರು. ಸಬಿತಾ ರಾಮಮೂರ್ತಿ, ಸಿ.ಕೆ. ರಾಮಮೂರ್ತಿ, ಥಾವರಚಂದ್‌ ಗೆಹಲೋತ್ ಉಪಸ್ಥಿತರಿದ್ದರು   

ಬೆಂಗಳೂರು: ‘ಭಾರತದ ನವೋದ್ಯಮಗಳು ಜಾಗತಿಕ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಹೊಂದಿವೆ’ ಎಂದು ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಹೇಳಿದರು.

ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯ 25 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಬುಧವಾರ ಆಯೋಜಿಸಿದ್ದ ‘ರಜತ ಮಹೋತ್ಸವ’ದಲ್ಲಿ ಇನ್‌ಕ್ಯುಬೇಷನ್ ಸೆಂಟರ್ ಮತ್ತು ಸಿಲ್ವರ್ ಜುಬಿಲಿ ಆಡಿಟೋರಿಯಂಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕಾಲೇಜುಗಳು ಕೇವಲ ಕಲಿಕಾ ಕೇಂದ್ರಗಳಲ್ಲ, ಅವು ನಾವೀನ್ಯಗಳ ಪ್ರಯೋಗಾಲಯಗಳಾಗಬೇಕು. ವಿದ್ಯಾರ್ಥಿಗಳಲ್ಲಿ ರೂಪುಗೊಳ್ಳುವ ಜವಾಬ್ದಾರಿಯುತ ನಾಯಕತ್ವ ಅವರ ಯಶಸ್ಸಿನ ಗುಟ್ಟು’ ಎಂದು ಹೇಳಿದರು.​

ADVERTISEMENT

‘ಹವಾಮಾನ ಬದಲಾವಣೆ ಮತ್ತು ಎಐ ನೈತಿಕ ಬಳಕೆಯಂತಹ ಸವಾಲುಗಳನ್ನು ಎದುರಿಸುವಲ್ಲಿ ಭಾರತೀಯ ನವೋದ್ಯಮಗಳು ಜಾಗತಿಕ ನಾಯಕರಾಗಿ ಹೊರಹೊಮ್ಮಲಿವೆ. 2047ರ ವೇಳೆಗೆ ದೇಶ ‘ವಿಕಸಿತ ಭಾರತ’ವಾಗುವ ಗುರಿ ಹೊಂದಿದೆ. ಯುವಶಕ್ತಿಯು ಈ ಕನಸನ್ನು ನನಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ’ ಎಂದು ಆಶಯ ವ್ಯಕ್ತಪಡಿಸಿದರು.​

ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಮಾತನಾಡಿ, ‘ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳ ಪಾತ್ರ ಪ್ರಮುಖವಾದದ್ದು. ಇಂದಿನ ಜಗತ್ತನ್ನು ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್ ಮತ್ತು ರೊಬೊಟಿಕ್ಸ್ ಪರಿವರ್ತಿಸುತ್ತಿವೆ’ ಎಂದರು.

ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳು ಮತ್ತು ಸಿಎಂಆರ್ ವಿಶ್ವವಿದ್ಯಾಲಯದ ಅಧ್ಯಕ್ಷ ಕೆ.ಸಿ.ರಾಮಮೂರ್ತಿ, ಎನ್‌ಪಿಎಸ್ ಸಮೂಹ ಸಂಸ್ಥೆಗಳು, ಎನ್‌ಎಎಫ್‌ಎಲ್ ಮತ್ತು ಟಿಐಎಸ್‌ಬಿ ಅಧ್ಯಕ್ಷ ಕೆ.ಪಿ.ಗೋಪಾಲಕೃಷ್ಣ ಅವರು ಪಾಲ್ಗೊಂಡಿದ್ದರು.

ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಸಿಎಂಆರ್ ಐಟಿಯಲ್ಲಿ ವ್ಯಾಸಂಗ ಮಾಡಿ ದೇಶ-ವಿದೇಶಗಳಲ್ಲಿ ನವೋದ್ಯಮಿಗಳಾಗಿ ಸಾಧನೆ ಮಾಡಿರುವ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಿಎಂಆರ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಸಬಿತಾ ರಾಮಮೂರ್ತಿ ಅವರು ‘ಮಾದಕ ದ್ರವ್ಯ ವ್ಯಸನಗಳನ್ನು ತ್ಯಜಿಸುವ ಜಾಗೃತಿ ಅಭಿಯಾನ’ದ ಪ್ರಮಾಣ ವಚನ ಬೋಧಿಸಿದರು.​

ಸಿಎಂಆರ್ ಜ್ಞಾನಧಾರ ಟ್ರಸ್ಟ್ ಕಾರ್ಯದರ್ಶಿ ‌ಕೆ.ಸಿ.ಜಗನ್ನಾಥ್ ರೆಡ್ಡಿ, ಸಿಇಒ ಹಾಗೂ ಸಮಕುಲಪತಿ ಜಯದೀಪ್ ಕೆ.ಆರ್.ರೆಡ್ಡಿ, ಏಕ್ಯಾ ಸಮೂಹ ಶಾಲೆಗಳ ಸಂಸ್ಥಾಪಕಿ ತ್ರಿಸ್ತಾ ರಾಮಮೂರ್ತಿ, ಪ್ರಾಂಶುಪಾಲ ಸಂಜಯ್ ಜೈನ್ ಹಾಗೂ ಉಪ ಪ್ರಾಂಶುಪಾಲ ಬಿ. ನರಸಿಂಹ ಮೂರ್ತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.