ADVERTISEMENT

ಆಸ್ಪತ್ರೆ ನರಕದಂತಿದೆ, ಮನೆಗೆ ಕಳಿಸಿಕೊಡಿ: ಕೊರೊನಾ ಸೋಂಕಿತರ ಅಳಲು

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್‌-19 ರೋಗಿಗಳ ಆಕ್ರೋಶ* ಸ್ವಚ್ಛತೆ ಇಲ್ಲ, ಆಹಾರವೂ ಸರಿ ಇಲ್ಲ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 19:52 IST
Last Updated 26 ಜೂನ್ 2020, 19:52 IST
ಆರೋಪಿಗಳಿಬ್ಬರಿಗೆ ಕೊರೊನಾ ಸೋಂಕು ತಗುಲಿರುವುದರಿಂದ ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆ ಸೀಲ್‌ಡೌನ್‌ ಮಾಡಲಾಗಿದೆ
ಆರೋಪಿಗಳಿಬ್ಬರಿಗೆ ಕೊರೊನಾ ಸೋಂಕು ತಗುಲಿರುವುದರಿಂದ ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆ ಸೀಲ್‌ಡೌನ್‌ ಮಾಡಲಾಗಿದೆ   

ಬೆಂಗಳೂರು: ‘ಕೊರೊನಾ ಸೋಂಕಿತರು ಇರುವ ಈ ವಾರ್ಡ್‌ನಲ್ಲಿಯೇ ಸ್ವಚ್ಛತೆ ಇಲ್ಲ... ಇಲ್ಲಿ ನೀಡುತ್ತಿರುವ ಆಹಾರ ಸೇವಿಸಿದರೆ ರೋಗ ವಾಸಿಯಾಗುವ ಬದಲು, ಮತ್ತಷ್ಟು ರೋಗಗಳು ಅಂಟಿಕೊಳ್ಳುತ್ತವೆ...’

ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರು ಹೇಳುವ ಮಾತುಗಳಿವು.

‘ನಾನು ಚಿಕಿತ್ಸೆಗಾಗಿ ದಾಖಲಾಗಿ ಏಳು ದಿನಗಳಾಗಿವೆ. ಈವರೆಗೆ ಆರೋಗ್ಯ‍ಪರಿಸ್ಥಿತಿ ಸುಧಾರಿಸಿಲ್ಲ. ಮಲೇರಿಯಾ ಚಿಕಿತ್ಸೆಗೆ ನೀಡುವ ಮಾತ್ರೆಗಳನ್ನು ನೀಡುತ್ತಿದ್ದಾರೆ. ವೈದ್ಯರಿಗೂ ಯಾವ ಮಾತ್ರೆ ನೀಡಬೇಕು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಬಹಳಷ್ಟು ಜನರಿಗೆ ಭೇದಿ ಶುರುವಾಗಿದೆ’ ಎಂದು 55 ವರ್ಷದ ಮಹಿಳೆಯೊಬ್ಬರು ದೂರಿದರು.

ADVERTISEMENT

‘ಆಸ್ಪತ್ರೆಯ ಹೊರಗೆ ಔಷಧಿ ಹೊಡೆದು ಸ್ವಚ್ಛಗೊಳಿಸುತ್ತಾರೆ. ಆದರೆ, ಕೋವಿಡ್‌–19 ರೋಗಿಗಳಿರುವ ನಮ್ಮ ವಾರ್ಡ್‌ ಸ್ವಚ್ಛಗೊಳಿಸುವುದೇ ಇಲ್ಲ. ಒಂದು ವಾರ್ಡ್‌ನಲ್ಲಿ 13 ಜನರಿದ್ದೇವೆ. ನಾವೇ ಸ್ವಚ್ಛಗೊಳಿಸುತ್ತೇವೆ. ಶೌಚಾಲಯವೂ ಸ್ವಚ್ಛತೆಯಿಂದ ಕೂಡಿಲ್ಲ’ ಎಂದು ಅವರು ಹೇಳಿದರು.

ದಪ್ಪ ಚಪಾತಿ, ಅರೆ ಬೆಂದ ಅನ್ನ

‘ಮೊದಲಿಗೆ ನನಗೆ ಜ್ವರ ಮಾತ್ರ ಇತ್ತು. ಇಲ್ಲಿಗೆ ಬಂದ ನಂತರವೇ ಕೆಮ್ಮು ಶುರುವಾಗಿದೆ. ಈ ವಾರ್ಡ್‌ನಲ್ಲಿ ದಾಖಲಾಗಿರುವ ಬಹುತೇಕ ರೋಗಿಗಳಿಗೆ ಕೊರೊನಾ ಸೋಂಕಿನ ಲಕ್ಷಣವೇ ಇಲ್ಲ’ ಎಂದು ಮತ್ತೊಬ್ಬ ರೋಗಿ ಹೇಳಿದರು.

‘ಆಹಾರ ಸರಿ ಇರುವುದಿಲ್ಲ. ಅನ್ನ ಅರೆಬೆಂದಂತಿರುತ್ತದೆ. ದಪ್ಪ ಚಪಾತಿಯನ್ನು ತಿನ್ನುವುದಕ್ಕೆ ಕಷ್ಟವಾಗುತ್ತಿದೆ’ ಎಂದು ಅವರು ಅಳಲು ತೋಡಿಕೊಂಡರು.

’ಆಸ್ಪತ್ರೆಯಲ್ಲಿ ಕ್ಯಾಂಟೀನ್‌ ಇದೆ. ಆದರೆ, ನಮಗೆ ಹೋಟೆಲ್‌ನಿಂದ ಪಾರ್ಸೆಲ್‌ ತಂದು ಕೊಡುತ್ತಾರೆ. ಆ ಆಹಾರ ಕಳಪೆ ಗುಣಮಟ್ಟದ್ದು‘ ಎಂದು ರೊಗಿಯೊಬ್ಬರು ದೂರಿದರು.

ಕೆಟ್ಟಿರುವ ಲಿಫ್ಟ್‌

‘ಮೆಟ್ಟಿಲುಗಳನ್ನೆಲ್ಲ ಮುಚ್ಚಿರುವುದರಿಂದ ಅವುಗಳನ್ನು ಬಳಸಲು ಆಗುವುದಿಲ್ಲ. ಲಿಫ್ಟ್‌ನಲ್ಲಿಯೇ ಹೋಗಬೇಕು. ನಮ್ಮ ವಾರ್ಡ್‌ ಇರುವುದು ಮೂರನೇ ಮಹಡಿಯಲ್ಲಿ. ವೈದ್ಯರನ್ನು ಕಾಣಲು ಐದನೇ ಮಹಡಿಗೆ ಹೋಗಬೇಕು. ಲಿಫ್ಟ್‌ ಕೆಟ್ಟು ಹೋಗಿದೆ. ವೈದ್ಯರನ್ನು ಕಾಣಲು ಸಾಧ್ಯವಾಗುತ್ತಿಲ್ಲ‘ ಎಂದು ಕೊರೊನಾ ಸೋಂಕಿತ ಮಹಿಳೆಯೊಬ್ಬರು ದೂರಿದರು.

‘ಆಸ್ಪತ್ರೆಗೆ ಸೇರಿದ ನಂತರವೇ ನಮ್ಮಲ್ಲಿ ಆತಂಕ ಹೆಚ್ಚಾಗುತ್ತಿದೆ. ಮಾನಸಿಕವಾಗಿ ತುಂಬಾ ಒತ್ತಡಕ್ಕೆ ಒಳಗಾಗುತ್ತಿದ್ದೇವೆ. ಆಸ್ಪತ್ರೆ ಎನ್ನುವುದು ಜೈಲು, ನಾವೆಲ್ಲರೂ ಕಳ್ಳರೇನೋ ಎಂಬ ಭಾವನೆ ಮೂಡುತ್ತಿದೆ. ಮನೆಗೆ ಕಳಿಸಿಕೊಟ್ಟರೆ ಸಾಕು ಎನ್ನುವಂತಾಗಿದೆ’ ಎಂದು ಅವರು ಹೇಳಿದರು.

‘ಮನೆಯಲ್ಲಿಯೇ ಕ್ವಾರಂಟೈನ್ ಮಾಡಿ, ಔಷಧ ಎಲ್ಲ ನೀಡಿದರೆ ಅನುಕೂಲವಾಗುತ್ತದೆ. ಆಸ್ಪತ್ರೆ ಸಹವಾಸ ಬೇಡವೇ ಬೇಡ’ ಎಂದು ಅವರು ಹೇಳಿದರು.

ಊಟ, ಶುಚಿತ್ವದ ಹೊಣೆ ಹಂಚಿಕೆ ಮಾಡಿ

‘ಆಸ್ಪತ್ರೆಯ ಎಲ್ಲ ವಾರ್ಡ್‌ಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಗುಣಮಟ್ಟದ ಆಹಾರ ನೀಡಬೇಕು. ಊಟ ಮತ್ತು ಶುಚಿತ್ವದ ಕೊರತೆ ನಿಭಾಯಿಸಲು ಒಬ್ಬೊಬ್ಬ ಅಧಿಕಾರಿಗೆ ಒಂದೊಂದು ಹೊಣೆ ನೀಡಬೇಕು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಅಧಿಕಾರಿಗಳಿಗೆ ಸೂಚಿಸಿದರು.

ಆರೋಗ್ಯ, ವೈದ್ಯಶಿಕ್ಷಣ, ಬಿಬಿಎಂಪಿ ಹಿರಿಯ ಅಧಿಕಾರಿಗಳು, ವಿಕ್ಟೋರಿಯಾ, ಬೌರಿಂಗ್‌ ಮತ್ತು ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆ ನಿರ್ದೇಶಕರ ಜತೆ ಶುಕ್ರವಾರ ವಿಡಿಯೋ ಸಂವಾದ ನಡೆಸಿದ ಅವರು ಈ ಸೂಚನೆ ನೀಡಿದರು.

2 ಸಾವಿರದ ಗಡಿ ಸಮೀಪಿಸಿದ ಕೋವಿಡ್‌

ನಗರದಲ್ಲಿ ಶುಕ್ರವಾರ ಒಂದೇ ದಿನ 144 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ ಎರಡು ಸಾವಿರದ ಗಡಿ (1,935) ಸಮೀಪಿಸಿದೆ.

ಕೊರೊನಾ ಸೋಂಕಿಗೆ ಮತ್ತೆ ಮೂರು ಮಂದಿ ಮೃತಪಟ್ಟಿದ್ದಾರೆ. ಇದರಿಂದಾಗಿ ನಗರದಲ್ಲಿ ಕೋವಿಡ್‌ಗೆ ಸಾವಿಗೀಡಾದವರ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗುವ ರೋಗಿಗಳ ಸಂಖ್ಯೆ ಕೂಡ ಹೆಚ್ಚಳವಾಗುತ್ತಿದೆ. ಸದ್ಯ 123 ರೋಗಿಗಳಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,327ಕ್ಕೆ ತಲುಪಿದೆ. ‌ಈವರೆಗೆ 526 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಸಿಬ್ಬಂದಿಗೆ ಸೋಂಕು: ಕೋವಿಡ್ ಆಸ್ಪತ್ರೆಯಾದ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯ ಇಬ್ಬರು ವಾರ್ಡ್‌ ಸಹಾಯಕರು, ಆಡಳಿತಾಧಿಕಾರಿ ಹಾಗೂ ಕಚೇರಿ ಸಿಬ್ಬಂದಿಯೊಬ್ಬರಿಗೆ ಸೋಂಕು ತಗುಲಿದೆ. ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದ ಕಚೇರಿಯನ್ನು ಬಂದ್ ಮಾಡಲಾಗಿದೆ.

ಆಸ್ಪತ್ರೆಗೆ ಮರಳಿದ ರೋಗಿ

ಒಂದೇ ಹೆಸರಿನ ಇಬ್ಬರು ರೋಗಿಗಳಿದ್ದ ಪರಿಣಾಮ ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸಾ ಅವಧಿ ಮುಗಿಯವ ಮುನ್ನವೇ ರೋಗಿರೊಬ್ಬರನ್ನು ಮನೆಗೆ ಕಳುಹಿಸಿದ ಘಟನೆ ನಡೆದಿದೆ. ಗುಣಮುಖರಾಗಿದ್ದ 54 ವರ್ಷದ ವ್ಯಕ್ತಿಯನ್ನು ಮನೆಗೆ ಕಳುಹಿಸಲು ಅವರ ಹೆಸರನ್ನು ಸಿಬ್ಬಂದಿ ಕರೆದಿದ್ದರು. ಈ ವೇಳೆ ಅದೇ ಹೆಸರಿನ 58 ವರ್ಷದ ರೋಗಿ ಹೋಗಿದ್ದರು. ಆತುರದಲ್ಲಿ ಸಿಬ್ಬಂದಿ ಅವರನ್ನೇ ಮನೆಗೆ ಕಳುಹಿಸಿದ್ದಾರೆ.

ನಗರದಲ್ಲಿ ಕೋವಿಡ್‌ ಪ್ರಕರಣಗಳು...

* ದೀಪಾಂಜಲಿ ನಗರದಲ್ಲಿ ಕೆಲಸ ಮಾಡುವ 23 ಪೌರ ಕಾರ್ಮಿಕರಿಗೆ ಸೋಂಕಿರುವುದು ದೃಢಪಟ್ಟಿದೆ.

* ‘ನಗರದ ಪ್ರಮುಖ ಹೋಟೆಲ್‍ಗಳ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದು, ಸಾರ್ವಜನಿಕರು ಈ ಸ್ಥಳಗಳಿಂದ ದೂರವಿರಿ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕ್ರಮಕ್ಕೆ ಹೋಟೆಲ್‌ಗಳ ಸಂಘವು ಸೈಬರ್ ಕ್ರೈಂಗೆ ಶುಕ್ರವಾರ ದೂರು ನೀಡಿದೆ.

* ಕೊರೊನಾ ಹರಡುವಿಕೆ ತಡೆಗಾಗಿ ಜಾರಿಗೊಳಿಸಿರುವ ನಿಯಮ ಪಾಲಿಸದ ಕಾರಣಕ್ಕೆ ಮಲ್ಲೇಶ್ವರದ 5 ಅಂಗಡಿ
ಗಳಿಗೆ ಪಾಲಿಕೆ ಅಧಿಕಾರಿಗಳು ಬೀಗ ಹಾಕಿದರು.

* ಸೋಂಕು ತಗುಲಿದ್ದರಿಂದಾಗಿ ಕೆ.ಸಿ.ಜನರಲ್ ಆಸ್ಪತ್ರೆಯ ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಯೊಬ್ಬರು, ಖಿನ್ನತೆಗೆ ಒಳಗಾಗಿ ಶುಕ್ರವಾರ ನಸುಕಿನಲ್ಲಿ ವಾರ್ಡ್‌ನ ಶೌಚಾಲಯದಲ್ಲೇ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

* ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಹಿರಿಯ ಅಧಿಕಾರಿಯೊಬ್ಬರ ಅಂಗರಕ್ಷಕನಿಗೂ ಕೊರೊನಾ ಇರುವುದು ದೃಢಪಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ರೇಸ್‌ಕೋರ್ಸ್‌ ರಸ್ತೆಯ ಖನಿಜ ಭವನದಲ್ಲಿರುವ ಎಸಿಬಿ ಕಚೇರಿಯನ್ನು ತಾತ್ಕಾಲಿಕವಾಗಿ ಸೀಲ್‌ಡೌನ್ ಮಾಡಲಾಗಿದೆ.

* ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದ ಇಬ್ಬರು ಆರೋಪಿಗಳಲ್ಲಿ ಕೊರೊನಾ ಸೋಂಕು ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ದರೋಡೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

* ಬಿಎಂಟಿಸಿಯ ಮತ್ತೆ 6 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

* ಸಿ.ಟಿ.ಮಾರ್ಕೆಟ್ ಠಾಣೆಯ ನಾಲ್ವರು ಪೊಲೀಸರಿಗೂ, ಚಾಮರಾಜಪೇಟೆ ಠಾಣೆ ಸಿಬ್ಬಂದಿಯೊಬ್ಬರಲ್ಲೂ ಕೊರೊನಾ ಸೋಂಕು ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.