ADVERTISEMENT

‘ರೆಮ್‌ಡಿಸಿವಿರ್’ ಕದ್ದು ಮಾರಾಟ: ವಿಕ್ಟೋರಿಯಾ ಆಸ್ಪತ್ರೆ ವಾರ್ಡ್‌ಬಾಯ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 18 ಮೇ 2021, 19:48 IST
Last Updated 18 ಮೇ 2021, 19:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಪೂರೈಸಲಾದ ರೆಮ್‌ಡಿಸಿವಿರ್ ಚುಚ್ಚುಮದ್ದುಗಳನ್ನು ಕಳವು ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪಶ್ಚಿಮ ವಿಭಾಗ ಪೊಲೀಸರು ಪತ್ತೆ ಮಾಡಿದ್ದಾರೆ.

ಕಳವು ಮಾಡಿದ್ದ ಚುಚ್ಚುಮದ್ದುಗಳನ್ನು ಕೆ.ಪಿ. ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಮಾರಾಟ ಮಾಡಲು ಬಂದಿದ್ದ ಬಾಲಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತ ಜಾಲದ ಮಾಹಿತಿ ಬಾಯ್ಬಿಟ್ಟಿದ್ದಾನೆ.

‘ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಬಾಲಕ, ಕೊರೊನಾ ಸೋಂಕಿತ ಸಂಬಂಧಿಯೊಬ್ಬರಿಗೆ ದುಬಾರಿ ಬೆಲೆಗೆ ಚುಚ್ಚುಮದ್ದು ಮಾರಲು ಬಂದಾಗ ಸಿಕ್ಕಿಬಿದ್ದಿದ್ದಾನೆ. ಆತನಿಂದ ಚುಚ್ಚುಮದ್ದಿನ 8 ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ. ಆತನ ಜೊತೆ ಹಲವರು ಕೃತ್ಯದಲ್ಲಿ ಭಾಗಿಯಾಗಿರುವ ಅನುಮಾನವಿದ್ದು, ತನಿಖೆ ಮುಂದುವರಿದಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

ಆಸ್ಪತ್ರೆ ಲಿಫ್ಟ್‌ನಲ್ಲಿ ಕಳವು: ‘ವಿಕ್ಟೋರಿಯಾ ಆಸ್ಪತ್ರೆಗೆ ಬರುವ ಔಷಧಿಗಳನ್ನು ಲಿಫ್ಟ್‌ ಮೂಲಕ ಪ್ರತಿಯೊಂದು ಕೊಠಡಿಗೂ ಸರಬರಾಜು ಮಾಡಲಾಗುತ್ತದೆ. ಔಷಧಿಗಳನ್ನು ತೆಗೆದುಕೊಂಡು ಹೋಗುವ ವೇಳೆ ಸಂಬಂಧಪಟ್ಟ ಅಧಿಕಾರಿ ಹಾಗೂ ವಾರ್ಡ್‌ ಬಾಯ್ ಲಿಫ್ಟ್‌ನಲ್ಲಿ ಇರುತ್ತಾರೆ’ ಎಂದು ಮೂಲಗಳು ಹೇಳಿವೆ.

‘ಔಷಧಿ ಸರಬರಾಜು ಮಾಡುವ ಕೆಲಸಕ್ಕೆ ಬಾಲಕನನ್ನು ನಿಯೋಜಿಸಲಾಗಿತ್ತು. ಮೇ 13ರಂದು ಲಿಫ್ಟ್‌ನಲ್ಲಿ ಹೋಗುವಾಗಲೇ ಆತ, ರೆಮ್‌ಡಿಸಿವಿರ್ ಚುಚ್ಚುಮದ್ದು 8 ಬಾಟಲಿ ಇದ್ದ ಬಾಕ್ಸ್‌ ಕದ್ದಿದ್ದ. ಅದನ್ನೇ ಹೊರಗಡೆ ತಂದು ಕಾಳಸಂತೆಯಲ್ಲಿ ಮಾರುತ್ತಿದ್ದ ಎಂದು ಗೊತ್ತಾಗಿದೆ.’

‘ಆಸ್ಪತ್ರೆಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಇದ್ದು, ಭದ್ರತಾ ಸಿಬ್ಬಂದಿ ಸಹ ಇದ್ದಾರೆ. ಅವರೆಲ್ಲರ ಕಣ್ಣು ತಪ್ಪಿಸಿ ಚುಚ್ಚುಮದ್ದುಗಳನ್ನು ಬಾಲಕ ಹೊರಗಡೆ ತಂದಿದ್ದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ಈತನ ಜೊತೆಯಲ್ಲಿ ಆಸ್ಪತ್ರೆಯ ಮತ್ತಷ್ಟು ಸಿಬ್ಬಂದಿ ಶಾಮೀಲಾಗಿರುವ ಶಂಕೆ ಇದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ರೈಲ್ವೆ ಆಸ್ಪತ್ರೆಯಲ್ಲೂ ಚುಚ್ಚುಮದ್ದು ಕದ್ದು ಮಾರಾಟ: ಬಂಧನ

ವಿಭಾಗೀಯ ರೈಲ್ವೆ ಆಸ್ಪತ್ರೆಯಿಂದ ರೆಮ್‌ಡಿಸಿವಿರ್ ಚುಚ್ಚುಮದ್ದು ಕದ್ದು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ನಾಲ್ವರು ನೌಕರರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

‘ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಲಾಗಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ರೈಲ್ವೆ ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿಗಳು ಗುತ್ತಿಗೆ ನೌಕರರು ಹಾಗೂ ಸಿ/ಡಿ ಗ್ರೂಪ್ ನೌಕರರು. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು, ಚುಚ್ಚುಮದ್ದು ಕದಿಯುತ್ತಿದ್ದರು. ಹೊರಗಡೆ ತಂದು ಕೊರೊನಾ ಸೋಂಕಿತರು ಹಾಗೂ ಅವರ ಸಂಬಂಧಿಕರಿಗೆ ದುಬಾರಿಗೆ ಬೆಲೆಗೆ ಮಾರುತ್ತಿದ್ದರು’ ಎಂದೂ ತಿಳಿಸಿವೆ.

ಕಾವೇರಿ ಆಸ್ಪತ್ರೆ ಶುಶ್ರೂಷಕ ಬಂಧನ

ರೆಮ್‌ಡಿಸಿವಿರ್ ಚುಚ್ಚುಮದ್ದು ಅಕ್ರಮವಾಗಿ ಮಾರುತ್ತಿದ್ದ ಆರೋಪದಡಿ ಕಾವೇರಿ ಆಸ್ಪತ್ರೆಯ ಶುಶ್ರೂಷಕ ಎನ್‌. ಮನು (26) ಎಂಬಾತನನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ಚಾಮರಾಜನಗರ ಜಿಲ್ಲೆಯ ಬಿಸಲವಾಡಿಯ ಮನು, ನಗರದ ಕೋನಪ್ಪನ ಅಗ್ರಹಾರದಲ್ಲಿರುವ ಕಾವೇರಿ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಆತನಿಂದ ಚುಚ್ಚುಮದ್ದಿನ 13 ಬಾಟಲಿ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬೈಯಪ್ಪನಹಳ್ಳಿ ಠಾಣೆ ವ್ಯಾಪ್ತಿಯ ಆಸ್ಪತ್ರೆಯೊಂದರ ಬಳಿ ರೆಮ್‌ಡಿಸಿವಿರ್ ಚುಚ್ಚುಮದ್ದು ಮಾರಲೆಂದು ಆರೋಪಿ ಬಂದಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿದರು.

‘ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಕೆಲಸ ಮಾಡುತ್ತಿದ್ದ ಆರೋಪಿ, ಅಲ್ಲಿಯ ಸೋಂಕಿತರಿಗೆ ವೈದ್ಯರ ಸಲಹೆಯಂತೆ ಚುಚ್ಚುಮದ್ದು ನೀಡುತ್ತಿದ್ದ. ಕೊರೊನಾ ಸೋಂಕಿತರಿಗೆ ರೆಮ್‌ಡಿವಿವಿರ್ ಎರಡು ಬಾಟಲಿ ಬದಲು ಒಂದೇ ಬಾಟಲಿ ಚುಚ್ಚುಮದ್ದು ಕೊಡುತ್ತಿದ್ದ. ಒಂದನ್ನು ಕದ್ದುಕೊಂಡು ಬಂದು ಹೊರಗಡೆ ಮಾರಾಟ ಮಾಡುತ್ತಿದ್ದ.’

‘ಕೊರೊನಾ ಸೋಂಕಿತರು ಹಾಗೂ ಅವರ ಸಂಬಂಧಿಕರನ್ನು ಸಂಪರ್ಕಿಸುತ್ತಿದ್ದ ಆರೋಪಿ, ಒಂದು ಬಾಟಲಿಗೆ ₹20 ಸಾವಿರದಿಂದ ₹ 25 ಸಾವಿರ ಪಡೆದು ಮಾರುತ್ತಿದ್ದ‍‍’ ಎಂದೂ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.