ADVERTISEMENT

ಕೆಪಿಸಿಸಿ ಸದಸ್ಯ– ಕಾನ್‌ಸ್ಟೆಬಲ್ ಜಟಾಪಟಿ: ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 20:17 IST
Last Updated 5 ಜುಲೈ 2018, 20:17 IST

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸದಸ್ಯ ಪಿ.ಎನ್‌.ಕೃಷ್ಣಮೂರ್ತಿ ಹಾಗೂ ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಕಾನ್‌ಸ್ಟೆಬಲ್‌ ನಡುವೆ ಜಟಾಪಟಿ ನಡೆದಿದ್ದು,ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಗುರುವಾರ ವೈರಲ್ ಆಗಿದೆ.

ಠಾಣೆಯ ಪೊಲೀಸರು, ಬುಧವಾರ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಅದೇ ವೇಳೆ ಕಾರಿನಲ್ಲಿ ಸ್ಥಳಕ್ಕೆ ಹೋಗಿದ್ದ ಕೃಷ್ಣಮೂರ್ತಿ ಹಾಗೂ ಕಾನ್‌ಸ್ಟೆಬಲ್‌ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳದಲ್ಲಿ ಸೇರಿದ ಸಾರ್ವಜನಿಕರು, ಅವರಿಬ್ಬರ ಜಗಳ ಬಿಡಿಸಿದರು. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ಘಟನೆ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಕೃಷ್ಣಮೂರ್ತಿ, ‘ಹೆಲ್ಮೆಟ್‌ ಧರಿಸದ ಬೈಕ್‌ ಸವಾರರಿಬ್ಬರನ್ನು ಕಾನ್‌ಸ್ಟೆಬಲ್‌ ಬೆನ್ನಟ್ಟಿದ್ದರು. ಆ ಸವಾರರು, ನನ್ನ ಕಾರಿನ ಎದುರು ಬಂದು ಬಿದ್ದರು. ಆ ಬಗ್ಗೆ ಪ್ರಶ್ನಿಸುತ್ತಿದ್ದಂತೆ ಕಾನ್‌ಸ್ಟೆಬಲ್‌ ನನ್ನ ಜೊತೆಗೆ ಜಗಳ ತೆಗೆದರು’ ಎಂದು ಹೇಳಿದರು.

ADVERTISEMENT

‘ಅಕಸ್ಮಾತ್‌, ಆ ಸವಾರರು ಕಾರಿನ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದರೆ ಯಾರು ಹೊಣೆ’ ಎಂದು ಕಾನ್‌ಸ್ಟೆಬಲ್‌ರನ್ನು ಪ್ರಶ್ನಿಸಿದ್ದೆ. ಆಗ ಅವರು, ‘ಮೃತಪಟ್ಟರೆ ನಮಗೇನು’ ಎಂದರು. ಅವಾಗಲೇ ನನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಬೆಂಬಲಿಗರೊಬ್ಬರು, ಅವರನ್ನು ತರಾಟೆಗೆ ತೆಗೆದುಕೊಂಡರು. ಅದೇ ದೃಶ್ಯವನ್ನು ಚಿತ್ರೀಕರಿಸಿಕೊಂಡ ಕಾನ್‌ಸ್ಟೆಬಲ್‌, ಅದನ್ನು ವೈರಲ್‌ ಮಾಡಿದ್ದಾರೆ’ ಎಂದು ಹೇಳಿದರು.

ಕಾಮಾಕ್ಷಿಪಾಳ್ಯ ಪೊಲೀಸರು, ‘ಕೆಪಿಸಿಸಿ ಸದಸ್ಯ ಪಿ.ಎನ್.ಕೃಷ್ಣಮೂರ್ತಿ, ‘ನಾನು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ’ ಎಂದು ಹೇಳಿಕೊಂಡು ಕಾನ್‌ಸ್ಟೆಬಲ್‌ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಅದನ್ನು ಪ್ರಶ್ನಿಸಿದ್ದಕ್ಕೆ, ಕೆಲಸದಿಂದ ಕಿತ್ತುಹಾಕಿಸುವುದಾಗಿ ಬೆದರಿಕೆಯನ್ನೂ ಹಾಕಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ’ ಎಂದರು.

ಸಂಚಾರ ವಿಭಾಗದ ಡಿಸಿಪಿ ಶಿವಕುಮಾರ್, ‘ನಾನು ಹೊರ ಊರಿನಲ್ಲಿರುವುದರಿಂದ ಘಟನೆ ಬಗ್ಗೆ ಗೊತ್ತಾಗಿಲ್ಲ. ಶುಕ್ರವಾರ ಬೆಂಗಳೂರಿಗೆ ಬಂದ ನಂತರ ಅಧಿಕಾರಿಗಳಿಂದ ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.