ಬೆಂಗಳೂರು: ನಗರದೆಲ್ಲೆಡೆ ಸಂಭ್ರಮ, ಸಡಗರದಿಂದ ವಿಜಯದಶಮಿ ಹಬ್ಬವನ್ನು ಗುರುವಾರ ಆಚರಿಸಲಾಯಿತು.
ಹಬ್ಬದ ಪ್ರಯುಕ್ತ ಮುಂಜಾನೆಯಿಂದಲೇ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು. ಭಕ್ತಾದಿಗಳು ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ದೇವಾಲಯಗಳಲ್ಲಿ ದೇವಿಗೆ ಮಾಡಲಾದ ಅಲಂಕಾರ ಗಮನಸೆಳೆದರೆ, ಸಂಘ–ಸಂಸ್ಥೆಗಳು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಧಾರ್ಮಿಕ ಉಪನ್ಯಾಸಗಳನ್ನು ಹಮ್ಮಿಕೊಂಡಿದ್ದವು.
ಬೆಂಗಾಲಿ ಸಮುದಾಯದ ಜನರು ನವರಾತ್ರಿ ಆಚರಣೆ ಸಂದರ್ಭದಲ್ಲಿ ಪ್ರತಿಷ್ಠಾಪಿಸಿದ್ದ ದುರ್ಗಾ ಮೂರ್ತಿಗಳನ್ನು ಹಲಸೂರು ಕೆರೆಯಲ್ಲಿ ವಿಸರ್ಜಿಸಿದರು. ಮೆರವಣಿಗೆಯಲ್ಲಿ ಸಾಗಿದ ಜನರು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ರಜಪೂತ್ ಸಭಾ ವತಿಯಿಂದ ರಜಪೂತ ಭವನದಲ್ಲಿ ವಿಜಯದಶಮಿ ಆಚರಿಸಲಾಯಿತು. ರಜಪೂತ ಸಮುದಾಯದವರು ದುರ್ಗಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಮಧ್ಯಾಹ್ನದ ಬಳಿಕ ಮೂರ್ತಿಯ ಮೆರವಣಿಗೆ ನಡೆಸಿದರು.
ಇಸ್ಕಾನ್‌ನಲ್ಲಿಯೂ ಶ್ರದ್ಧಾಭಕ್ತಿಯಿಂದ ವಿಜಯದಶಮಿ ಆಚರಿಸಲಾಯಿತು. ಕೃಷ್ಣ–ಬಲರಾಮ ದೇವರಿಗೆ ವಿಶೇಷ ಅಲಂಕಾರ ಮತ್ತು ಪೂಜೆಗಳನ್ನು ನೆರವೇರಿಸಲಾಯಿತು. ವಿಜಯದಶಮಿ ಹಬ್ಬದ ಕುರಿತು ಪ್ರವಚನ ನಡೆಯಿತು.
ವಿಜಯನಗರದ ಶನಿಮಹಾತ್ಮ ದೇವಾಲಯದಲ್ಲಿ ಶನೇಶ್ವರಸ್ವಾಮಿ ಮತ್ತು ಚಾಮುಂಡೇಶ್ವರಿಯ ಮೂರ್ತಿಗಳ ಮೆರವಣಿಗೆ ನಡೆಸಲಾಯಿತು. ಈ ವೇಳೆ ನಾದಸ್ವರ, ಡೊಳ್ಳು ಕುಣಿತ, ವೀರಗಾಸೆ, ಪೂಜಾ ಕುಣಿತ, ತಮಟೆ ಸೇರಿ ವಿವಿಧ ಜಾನಪದ ನೃತ್ಯಗಳು ನಡೆದವು. ಮಲ್ಲೇಶ್ವರದ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ದೇವಿಗೆ ಆಭರಣ ಅಲಂಕಾರ ಮಾಡಲಾಯಿತು. ಸಂಜೆಯ ಬಳಿಕ ಗಣಪತಿ ಮತ್ತು ದೇವಿಯ ಪಲ್ಲಕಿ ಉತ್ಸವವು ನಡೆಯಿತು. ಜಾನಪದ ಕಲಾ ತಂಡಗಳು ಉತ್ಸವದ ಮೆರಗು ಹೆಚ್ಚಿಸಿದವು.
ನಾಗರಬಾವಿ ರಸ್ತೆಯ ಕೆನರಾ ಬ್ಯಾಂಕ್ ಕಾಲೊನಿಯಲ್ಲಿರುವ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ದುರ್ಗಾ ಪರಮೇಶ್ವರಿ ದೇವಿಗೆ ಬೆಳ್ಳಿ ಅಲಂಕಾರ ಮಾಡಲಾಯಿತು. ವರಸಿದ್ಧಿ ವಿನಾಯಕ ಭಜನಾ ಮಂಡಳಿ ಸದಸ್ಯರು ಭಜನೆ ಮಾಡಿದರು. ರಾಜರಾಜೇಶ್ವರಿ ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಹಮ್ಮಿಕೊಳ್ಳಲಾದ ನವರಾತ್ರಿ ಉತ್ಸವದಲ್ಲಿ ‘ಶ್ರೀನಿವಾಸ ಕಲ್ಯಾಣದಲ್ಲಿ ಅನುಸಂಧಾನ’ ವಿಷಯದ ಬಗ್ಗೆ ವಿದ್ಯಾಧೀಶಚಾರ್ಯ ಗುತ್ತಲ್ ಅವರು ಉಪನ್ಯಾಸ ನೀಡಿದರು.
ಯಲಹಂಕದ ದೇಶದಪೇಟೆ ರಸ್ತೆಯಲ್ಲಿರುವ ಯಲ್ಲಮ್ಮ ದೇವಿ ದೇವಾಲಯದಲ್ಲಿ ದೇವಿಗೆ ಬೆಳ್ಳಿ ಕವಚ ಅಲಂಕಾರ ಮಾಡಲಾಯಿತು. ಹಬ್ಬದ ಸಂಭ್ರಮದಿಂದ ಮಾರುಕಟ್ಟೆ ಪ್ರದೇಶಗಳು ಸಹ ಕಳೆಗಟ್ಟಿದ್ದವು. ನಗರದ ಕೆ.ಆರ್.ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ ಮುಂತಾದ ಪ್ರದೇಶಗಳಲ್ಲಿ ಮುಂಜಾನೆ ಜನಜಂಗುಳಿ ಕಂಡುಬಂದಿತು.
ಅದ್ದೂರಿ ದಸರಾ ಮೆರವಣಿಗೆ
ಜೆ.ಸಿ.ನಗರ ದಸರಾ ಮಹೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ದಸರಾ ಮೆರವಣಿಗೆ ಸಂಭ್ರಮದಿಂದ ನಡೆಯಿತು. ಅಲಂಕೃತ ರಥಗಳಲ್ಲಿ ಸಾಲು ಸಾಲಾಗಿ ಬಂದ ಮೂರ್ತಿಗಳನ್ನು ಕಂಡು ಭಕ್ತರು ಸಂಭ್ರಮಿಸಿದರು.
ಶಿವಾಜಿನಗರ ಆರ್.ಟಿ. ನಗರ ಲಕ್ಷ್ಮೀದೇವಮ್ಮ ಬ್ಲಾಕ್ ಸಿಬಿಐ ರಸ್ತೆ ಮಠದಹಳ್ಳಿ ಮೋತಿನಗರ ಗಂಗೇನಹಳ್ಳಿ ಸುಲ್ತಾನ್‌ಪಾಳ್ಯ ಯಶವಂತಪುರ ಹೆಬ್ಬಾಳ ಗಂಗಾನಗರದ ದೇವರ ಮೂರ್ತಿಗಳು ಅಲಂಕೃತಗೊಂಡ ರಥಗಳಲ್ಲಿ ಜೆ.ಸಿ. ನಗರದ ದಸರಾ ಮೈದಾನದತ್ತ ಗುರುವಾರ ರಾತ್ರಿ ಸಾಗಿ ಬಂದವು.
ಮೈದಾನಕ್ಕೆ ವಿವಿಧೆಡೆಯ ರಥಗಳು ಬಂದು ತಲುಪಿದ ನಂತರ ಬನ್ನಿಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆ ಕಣ್ತುಂಬಿಕೊಳ್ಳಲು ಜೆ.ಸಿ. ನಗರ ಮುಖ್ಯರಸ್ತೆ ಹಾಗೂ ಅರಮನೆ ರಸ್ತೆಯ ಇಕ್ಕೆಲಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಹೂವಿನ ಪಲ್ಲಕ್ಕಿ ಪೂಜಾ ಕುಣಿತ ಕೀಲು ಕುದುರೆ ಕರಡಿ ಮೇಳ ಗೊರವರ ಕುಣಿತ ಪಟ ಕುಣಿತ ಡೊಳ್ಳು ಕುಣಿತ ಸೇರಿ ಹಲವು ಜಾನಪದ ಕಲಾ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದ್ದವು. ಪಂಜಿನ ಕವಾಯತುಗಳು ನಾನಾ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ರಂಜಿಸಿದವು.
ವಾಹನಗಳಿಗೆ ಪೂಜೆ
ಆಯುಧ ಪೂಜೆಯ ದಿನವಾದ ಬುಧವಾರ ವಾಹನಗಳಿಗೆ ಬಾಳೆ ಕಂದು ಹೂವಿನ ಮಾಲೆಯೊಂದಿಗೆ ಅಲಂಕರಿಸಿ ಪೂಜೆ ಸಲ್ಲಿಸುವ ದೃಶ್ಯ ನಗರದಲ್ಲಿ ಸಾಮಾನ್ಯವಾಗಿತ್ತು. ದೇವಾಲಯಗಳಲ್ಲಿ ವಾಹನಗಳ ಪೂಜೆಗಾಗಿ ವಿಶೇಷ ಏರ್ಪಾಡು ಮಾಡಲಾಗಿತ್ತು. ಸರದಿಯಲ್ಲಿ ನಿಂತು ವಾಹನಗಳಿಗೆ ಪೂಜೆ ಮಾಡಿಸಿಕೊಂಡರು. ಆಯುಧಪೂಜೆ ದಿನ ವಾಹನಕ್ಕೆ ಪೂಜೆ ಮಾಡಿಸಲು ಸಾಧ್ಯವಾಗದವರು ಗುರುವಾರ ಪೂಜೆ ಮಾಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.