ADVERTISEMENT

ಕಚೇರಿಗೆ ನುಗ್ಗಿ ವ್ಯಾಪಾರಿ ಹತ್ಯೆ

* ಡಿ.ವಿ.ಆರ್ ಇಲ್ಲದ ಸಿ.ಸಿ.ಟಿ.ವಿ ಕ್ಯಾಮೆರಾ * ಪರಿಚಯಸ್ಥರಿಂದಲೇ ಕೃತ್ಯ ಶಂಕೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 9:21 IST
Last Updated 8 ಜುಲೈ 2020, 9:21 IST

ಬೆಂಗಳೂರು: ವಿಜಯನಗರ ಠಾಣೆ ವ್ಯಾಪ್ತಿಯ ಹಂಪಿನಗರದಲ್ಲಿ ಹನುಮೇಶ್‌ ಗೌಡ (30) ಎಂಬುವರನ್ನು ಚಾಕುವಿನಿಂದ ಇರಿದು ಮಂಗಳವಾರ ಸಂಜೆ ಕೊಲೆ ಮಾಡಲಾಗಿದೆ.

’ಮದ್ದೂರು ಕೆ.ಎಂ.ದೊಡ್ಡಿಯ ಹನುಮೇಶ್ ಗೌಡ ಅವರು ಕೀಟನಾಶಕ ವ್ಯಾಪಾರ ಮಾಡುತ್ತಿದ್ದು, ಹಂಪಿನಗರ ಬಸ್ ನಿಲ್ದಾಣ ಬಳಿ ಕಚೇರಿ ತೆರೆದಿದ್ದರು. ಅಲ್ಲಿಯೇ ಅವರನ್ನು ಕೊಲೆ ಮಾಡಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಇತ್ತೀಚೆಗಷ್ಟೇ ತಮ್ಮೂರಿಗೆ ಹೋಗಿದ್ದ ಹನುಮೇಶ್, ಮಂಗಳವಾರ ಬೆಳಿಗ್ಗೆ ನಗರಕ್ಕೆ ವಾಪಸ್‌ ಬಂದಿದ್ದರು. ಸ್ನೇಹಿತನೊಬ್ಬ ತನ್ನ ವಾಹನದಲ್ಲೇ ಹನುಮೇಶ್ ಅವರನ್ನು ಕರೆದುಕೊಂಡು ಬಂದು ಕಚೇರಿಯಲ್ಲಿ ಬಿಟ್ಟು ಹೋಗಿದ್ದ. ಆತ ಪುನಃ ಸಂಜೆ ಹೊತ್ತಿಗೆ ಕಚೇರಿಗೆ ಬಂದ ರಕ್ತಸಿಕ್ತಾಗ ಸ್ಥಿತಿಯಲ್ಲಿ ಹನುಮೇಶ್ ಮೃತದೇಹ ಕಂಡಿತ್ತು’ ಎಂದರು.

ADVERTISEMENT

‘ಮಧ್ಯಾಹ್ನದ ವೇಳೆ ದುಷ್ಕರ್ಮಿಗಳು ಕಚೇರಿಗೆ ನುಗ್ಗಿ ಹನುಮೇಶ್‌ ಜೊತೆ ಜಗಳ ಮಾಡಿದ್ದಾರೆ. ನಂತರ, ಚಾಕುವಿನಿಂದ ನಾಲ್ಕೈದು ಬಾರಿ ಹೊಟ್ಟೆಗೆ ಇರಿದು ಕೊಂದಿದ್ದಾರೆ ಎಂಬುದು ಪ‍್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದೂ ತಿಳಿಸಿದರು.

‘ಕೀಟನಾಶಕ ಮಾರಾಟದ ಜೊತೆಗೆಯೇ ಹನುಮೇಶ್, ಫೈನಾನ್ಸ್ ವ್ಯವಹಾರ ಮಾಡುತ್ತಿದ್ದರೆಂಬ ಮಾಹಿತಿ ಇದೆ. ಅವರ ಕೊಲೆಗೆ ಕಾರಣವೇನು ಹಾಗೂ ಆರೋಪಿಗಳು ಯಾರು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ’ ಎಂದೂ ತಿಳಿಸಿದರು.

ಡಿವಿಆರ್ ಇಲ್ಲದ ಕ್ಯಾಮೆರಾ: ‘ಬೆಸ್ಟ್ ಕಂಟ್ರೋಲ್’ ಹೆಸರಿನ ಕೀಟನಾಶಕ ಕಚೇರಿಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಇದೆ. ಆದರೆ, ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಿಡಲು ಡಿವಿಆರ್ ಇರಲಿಲ್ಲ’ ಎಂದು ಅಧಿಕಾರಿ ಹೇಳಿದರು.

‘ಕೇವಲ ನೇರಪ್ರಸಾರದ ವೀಕ್ಷಣೆಗೆ ಮಾತ್ರ ಕ್ಯಾಮೆರಾ ಅಳವಡಿಸಲಾಗಿತ್ತು. ಹೀಗಾಗಿ, ಕೃತ್ಯದ ದೃಶ್ಯಗಳು ಎಲ್ಲಿಯೂ ಸಂಗ್ರಹವಾಗಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.