ADVERTISEMENT

ವಿಜಯನಗರದ ಪತನಕ್ಕೆ ಸುಲ್ತಾನರ ‘ಘಟ್‌ಬಂಧನ’ವೇ ಕಾರಣ: ಗಿರೀಶ್‌ ಕಾರ್ನಾಡ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2018, 20:33 IST
Last Updated 28 ಅಕ್ಟೋಬರ್ 2018, 20:33 IST
ಸಂವಾದದಲ್ಲಿ ಭಾಗವಹಿಸಲು ಬಂದ ಗಿರೀಶ್‌ ಕಾರ್ನಾಡ ಅವರೊಂದಿಗೆ ನಟಿಯರಾದ ಪದ್ಮಾವತಿ ರಾವ್‌, ಅರುಂಧತಿ ನಾಗ್‌
ಸಂವಾದದಲ್ಲಿ ಭಾಗವಹಿಸಲು ಬಂದ ಗಿರೀಶ್‌ ಕಾರ್ನಾಡ ಅವರೊಂದಿಗೆ ನಟಿಯರಾದ ಪದ್ಮಾವತಿ ರಾವ್‌, ಅರುಂಧತಿ ನಾಗ್‌    

ಬೆಂಗಳೂರು: ವಿಜಯನಗರದ ಪತನಕ್ಕೆ ನಾಲ್ಕು ಸುಲ್ತಾನರ ‘ಘಟ್‌ ಬಂಧನ’ವೇ ಕಾರಣ ಮತ್ತು ಸಾಮ್ರಾಜ್ಯದ ನಾಶಕ್ಕೆ ಮುಸ್ಲಿಮರು ಕಾರಣರಲ್ಲ ಎಂದು ನಾಟಕಕಾರ ಗಿರೀಶ್‌ ಕಾರ್ನಾಡ ಹೇಳಿದರು.

ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ‘ರಾಕ್ಷಸ ತಂಗಡಿ’ ನಾಟಕದ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

1565 ರಲ್ಲಿ ಬಿಜಾಪುರ, ಅಹಮದ್‌ನಗರ, ಗೋಲ್ಕಂಡ ಮತ್ತು ಬೀದರ್‌ಸುಲ್ತಾನರ ಮಹಾಮೈತ್ರಿಯೇ ವಿಜಯನಗರ ಪತನಕ್ಕೆ ಕಾರಣವಾಯಿತು. ವಿಜಯನಗರದ ರಾಮರಾಯನ ಸೇನೆ ಮತ್ತು ಸುಲ್ತಾನರ ಸೇನೆ ಕೃಷ್ಣಾನದಿಯಿಂದ ಆಚೆಗೆ ಯುದ್ಧ ನಡೆಯಿತು. ಸುಲ್ತಾನರ ಸೇನೆ ವಿಜಯನಗರ(ಹಂಪಿ)ವನ್ನು ತಲುಪುದಕ್ಕೆ ಮೊದಲೇ ಅಂದರೆ ಅರ್ಧ ದಿನದಲ್ಲೇ ನಾಶ ಮಾಡಲಾಯಿತು. ಇದು ಹೇಗೆ ಸಾಧ್ಯವಾಯಿತು? ಮುಸ್ಲಿಮರು ನಾಶ ಮಾಡಲಿಲ್ಲ ಹಾಗಿದ್ದರೆ ವಿಜಯ ನಗರ ನಾಶ ಮಾಡಿದ್ದು ಯಾರು ಎಂದು ಪ್ರಶ್ನಿಸಿದರು.

ADVERTISEMENT

ಈ ನಾಟಕ ಬರೆಯುವುದಕ್ಕೆ ಮೊದಲೇ ಸುಲ್ತಾನರ ಇತಿಹಾಸಕಾರರು ಪರ್ಷಿಯನ್‌ ಭಾಷೆಯಲ್ಲಿ ಬರೆದಿರುವ ಇತಿಹಾಸವನ್ನು ಓದಿದ್ದೇನೆ. ಯುದ್ಧಕ್ಕೆ ಸಂಬಂಧಿಸಿದ ಪ್ರತಿ ದಿನದ ದಾಖಲೆಗಳಿವೆ. ಆಗ ಏನೆಲ್ಲ ಆಯಿತು ಎಂಬ ಮಾಹಿತಿಗಳಿವೆ ಎಂದು ಕಾರ್ನಾಡ ಹೇಳಿದರು.

ರಾಮರಾಯನ ಸರ್ವಾಧಿಕಾರವೇ ಪತನಕ್ಕೆ ಕಾರಣ: ರಾಮರಾಯನ ಸರ್ವಾಧಿಕಾರವೇ ಪತನಕ್ಕೆ ಕಾರಣ ಎಂದು ವಿಮರ್ಶಕ ಸಿ.ಎನ್‌.ರಾಮಚಂದ್ರನ್‌ ಹೇಳಿದರು.

ರಾಮರಾಯ ಕ್ರೂರ ಆಗಿದ್ದ, ಸುಲ್ತಾನರನ್ನು ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿ ಕಟ್ಟುತ್ತಿದ್ದ, ತನ್ನ ಜತೆಗಿದ್ದವರನ್ನೇ ನಂಬುತ್ತಿರಲಿಲ್ಲ. ರಾಮರಾಯ ಜಹಾಂಗೀರ್‌ ಖಾನನ ರುಂಡವನ್ನು ಕತ್ತರಿಸಿದ, ಇಂತಹ ರಾಮರಾಯನನ್ನು ಸುಲ್ತಾನರ ಮಹಾಮೈತ್ರಿ ಸೆರೆ ಹಿಡಿದು ರುಂಡ ಕತ್ತರಿಸಿ ಹಾಕಿತು. ವಿಜಯನಗರವನ್ನು ದರೋಡೆಕೋರರು, ಲೂಟಿಕೋರರು ನಾಶ ಮಾಡಿದರು. ಸುಲ್ತಾನರ ಸೇನೆ ಅಲ್ಲಿಗೆ ಬರುವುದರಲ್ಲಿ ಹಂಪಿ ನಾಶವಾಗಿ ಹೋಯಿತು ಎಂದರು.

ಹಿಂದು–ಮುಸ್ಲಿಮರನ್ನು ಒಡೆದಾಳುವ ನೀತಿ ಅನುಸರಿಸಿದ ವಸಹಾತುಶಾಹಿ ಶಕ್ತಿಗಳು ವಿಜಯನಗರಕ್ಕ ಸಂಬಂಧಿಸಿದಂತೆ ಹಿಂದೂ ಮುಸ್ಲಿಮರ ನಡುವಿನ ಯುದ್ಧ ಎಂಬಂತೆ ಬಣ್ಣಿಸಿ, ವಿಜಯನಗರವನ್ನು ವೈಭವೀಕರಿಸಲಾಗಿದೆ. ಅದನ್ನು ಎಲ್ಲರೂ ಒಪ್ಪಿಕೊಂಡರು ಎಂದು ರಾಮಚಂದ್ರನ್‌ ಹೇಳಿದರು.

ಆಕ್ಸಿಜನ್‌ ಟ್ಯೂಬ್‌ ಧರಿಸಿಯೇ ಭಾಷಣ

‘ರಾಕ್ಷಸ ತಂಗಡಿ’ ನಾಟಕದ ಕುರಿತು ಸಂವಾದಕ್ಕೆ ಬಂದಿದ್ದ ಕಾರ್ನಾಡ್‌ ಆಮ್ಲಜನಕ ಪೂರೈಕೆಯ ಟ್ಯೂಬ್‌ ಮೂಗಿಗೆ ಹಾಕಿಕೊಂಡೇ ಮಾತನಾಡಿದರು.

‘ನೀವೆಲ್ಲ ಬೆಂಗಳೂರಿನ ಕಲುಷಿತ ಹವೆಯನ್ನು ಉಸಿರಾಡುತ್ತೀರಿ. ಆದರೆ, ನಾನು ಶುದ್ಧ ಆಮ್ಲಜನಕವನ್ನೇ ಉಸಿರಾಡುತ್ತಿದ್ದೇನೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ನಟಿ ಅರುಂಧತಿನಾಗ್‌ ಅವರು ‘ರಾಕ್ಷಸ ತಂಗಡಿ’ ನಾಟಕದ ಇಂಗ್ಲಿಷ್‌ ಆವೃತ್ತಿ ‘ತಾಳಿಕೋಟಾ’ದ ಕೆಲವು ಭಾಗವನ್ನು ಓದಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.