ADVERTISEMENT

ಕಾವೇರಿ ನೀರು ಪೂರೈಕೆಗೆ ವಿಳಂಬ | ಮತದಾನ ಬಹಿಷ್ಕಾರಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 20:39 IST
Last Updated 1 ಮಾರ್ಚ್ 2023, 20:39 IST
   

ಬೆಂಗಳೂರು: ಐದು ವರ್ಷದ ಹಿಂದೆ ಕೊಳವೆ ಮಾರ್ಗ ನಿರ್ಮಿಸಿದ್ದರೂ ನಿಯ ಮಿತವಾಗಿ ಕಾವೇರಿ ನೀರು ಪೂರೈಸದೇ ಇರುವುದನ್ನು ಖಂಡಿಸಿ ಮುಂಬರುವ ವಿಧಾನಸಭೆ ಚುನಾವ ಣೆಯನ್ನು ಬಹಿಷ್ಕರಿಸಲು ನಗರದ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂಪಿಗೆಹಳ್ಳಿಯ ಬಾಲಾಜಿ ಕೃಪಾ ಬಡಾ ವಣೆ ನಿವಾಸಿಗಳು ತೀರ್ಮಾನಿಸಿದ್ದಾರೆ.

‘ವಾರಕ್ಕೊಮ್ಮೆ ನೀರು ಬಿಡುವು ದಾಗಿ ಭರವಸೆ ನೀಡಿದ್ದ ಜಲ ಮಂಡಳಿ ಅಧಿಕಾರಿಗಳು ಮಾತಿನಂತೆ ನಡೆದುಕೊಂಡಿಲ್ಲ. ಸಂಬಂಧಿಸಿದ ಸಹಾ ಯಕ ಕಾರ್ಯಪಾಲಕ ಎಂಜಿನಿಯರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನೀರು ಸಿಗುವುದೆಂಬ ಆಸೆಯಿಂದ ಲಕ್ಷಾಂತರ ರೂಪಾಯಿ ತೆತ್ತು ಸಂಪರ್ಕ ಪಡೆದ ತಪ್ಪಿಗೆ ಮೂರ್ನಾಲ್ಕು ವರ್ಷಗಳಿಂದ ಸುಮ್ಮನೆ ಬಿಲ್ ಪಾವತಿಸಬೇಕಾಗಿದೆ’ ಎಂದು ಬಡಾವಣೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕಳೆದ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಮುನ್ನ ಕ್ಷೇತ್ರದ ಶಾಸಕ ಕೃಷ್ಣ ಬೈರೇಗೌಡ ಅವರು ಬಡಾವಣೆಗೆ ಕಾವೇರಿ ನೀರು ಪೂರೈಕೆಗೆ ಚಾಲನೆ ನೀಡಿದರು. ಆ ನಂತರ, ಶಾಸಕರು ಮತ್ತು ಜಲಮಂಡಳಿ ಮುಖ್ಯ ಎಂಜಿನಿಯರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಉಪಸ್ಥಿತಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಪ್ರತಿ ಶನಿವಾರ ನೀರು ಪೂರೈಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ನಾಲ್ಕು ವರ್ಷಗಳಲ್ಲಿ ಒಂದು ತಿಂಗಳು ಸಹ ನಾಲ್ಕೂ ವಾರ ನೀರು ಪೂರೈಸಿಲ್ಲ’ ಎಂದು ದೂರಿದ್ದಾರೆ.

ADVERTISEMENT

‘ಕೆಲವು ಸಲ ತಿಂಗಳಿಗೊಮ್ಮೆ ನೀರು ಪೂರೈಸಿದ್ದೂ ಇದೆ. ಕೊಳವೆ ಒಡೆದಿದೆ, ಪಂಪಿಂಗ್ ಸ್ಟೇಶನ್‌ನಲ್ಲಿ ವಿದ್ಯುತ್ ಇಲ್ಲ ಎಂದು ಮುಂತಾದ ನೆಪ ಹೇಳುತ್ತಿದ್ದಾರೆ. ಬಡಾವಣೆಯಲ್ಲಿ 300ಕ್ಕಿಂತ ಹೆಚ್ಚು ಮನೆಗಳು ಸಂಪರ್ಕ ಪಡೆದರೆ ವಾರಕ್ಕೆ ಎರಡು ಸಲ ಸಾಕಷ್ಟು ಪ್ರಮಾಣದಲ್ಲಿ ನೀರು ನೀಡುವುದಾಗಿ ಅಧಿಕಾರಿಗಳು ತಿಳಿಸಿದರು. ಬಡಾವಣೆಯಲ್ಲಿನ 380 ಮನೆಗಳ ಪೈಕಿ 302 ಮನೆಗಳು ಅಗತ್ಯ ಶುಲ್ಕ ಪಾವತಿಸಿ ಸಂಪರ್ಕ ಪಡೆದಿವೆ. ಈಗ, ಉಳಿದ ಮನೆಗಳು ಅನಧಿಕೃತವಾಗಿವೆ. ‌ ಈ ಮನೆಗಳು ಸಂಪರ್ಕ ಪಡೆದರೆ ನೀರು ಪೂರೈಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಅನಧಿಕೃತ ಮನೆಗಳ ಸಂಪರ್ಕ ಕಡಿತಗೊಳಿಸಿ, ಅಧಿಕೃತ ಸಂಪರ್ಕ ಪಡೆದವರಿಗೆ ನಿಯಮಿತವಾಗಿ ನೀರು ಪೂರೈಸಿ ಎಂದು ಮನವಿ ಮಾಡಿದರೆ ಅದಕ್ಕೂ ಸ್ಪಂದಿಸುತ್ತಿಲ್ಲ’ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.