ADVERTISEMENT

ವಿನಯ್‌ ಆತ್ಮಹತ್ಯೆ: ಕಾಂಗ್ರೆಸ್ ಶಾಸಕರಿಗೆ ಕ್ಲೀನ್‌ ಚಿಟ್‌

‘ಕಿರುಕುಳ, ಬೆದರಿಕೆಗೆ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ’

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 23:30 IST
Last Updated 29 ಸೆಪ್ಟೆಂಬರ್ 2025, 23:30 IST
ವಿನಯ್‌ 
ವಿನಯ್‌    

ಬೆಂಗಳೂರು: ಕೊಡಗು ಜಿಲ್ಲೆಯ ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ (40) ಅವರ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ಹೆಣ್ಣೂರು ಠಾಣೆಯ ಪೊಲೀಸರು, ನ್ಯಾಯಾಲಯಕ್ಕೆ ಬಿ–ವರದಿ ಸಲ್ಲಿಸಿದ್ದಾರೆ.

ಕೊಡಗು ಜಿಲ್ಲೆಯ ಕಾಂಗ್ರೆಸ್‌ ಶಾಸಕರಾದ ಎ.ಎಸ್‌.ಪೊನ್ನಣ್ಣ (ವಿರಾಜಪೇಟೆ ಕ್ಷೇತ್ರ), ಮಂಥರ್‌ಗೌಡ (ಮಡಿಕೇರಿ ಕ್ಷೇತ್ರ) ಹಾಗೂ ರಾಜೀವ್‌ ಗಾಂಧಿ ಪಂಚಾಯತ್‌ ರಾಜ್ ಸಂಘಟನೆಯ ಕೊಡಗು ಜಿಲ್ಲಾ ಅಧ್ಯಕ್ಷ ತೆನ್ನೀರಾ ಮೈನಾ ಅವರು ವಿನಯ್‌ ಅವರಿಗೆ ಕಿರುಕುಳ ನೀಡಿ, ಬೆದರಿಕೆ ಹಾಕಿದ್ದರು ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂಬುದಾಗಿ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮೂವರಿಗೂ ತನಿಖಾಧಿಕಾರಿಗಳು ಕ್ಲೀನ್‌ ಚಿಟ್‌ ನೀಡಿದ್ದಾರೆ.

‘ಕಿರುಕುಳ ಹಾಗೂ ಬೆದರಿಕೆಯಿಂದ ವಿನಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ವಿನಯ್‌ ಅವರ ಸಹೋದರ ಕೆ.ಎಸ್‌.ಜೀವನ್ ದೂರು ನೀಡಿದ್ದರು. ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗಿದೆ. ಯಾವುದೇ ಪುರಾವೆಗಳು ಸಿಕ್ಕಿಲ್ಲ. ದೂರಿನಲ್ಲಿ ಉಲ್ಲೇಖಿಸಿದ್ದ ವ್ಯಕ್ತಿಗಳ ಮೊಬೈಲ್‌ ಕರೆಗಳ ವಿವರ ಪಡೆಯಲಾಗಿತ್ತು. ತಜ್ಞರ ಮೂಲಕವೂ ಕರೆಗಳ ವಿವರವನ್ನು ವಿಶ್ಲೇಷಣೆಗೆ ಒಳಪಡಿಸಲಾಗಿತ್ತು. ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ಮೊಬೈಲ್‌ ಸಂಖ್ಯೆಗೆ ಯಾವುದೇ ಬೆದರಿಕೆ ಕರೆಗಳು ಹೋಗಿಲ್ಲ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ವಿನಯ್‌ ಆತ್ಮಹತ್ಯೆಗೂ ಮುನ್ನ ಬರೆದಿದ್ದ ಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ತೆನ್ನೀರಾ ಮೈನಾ ಅವರ ವಿರುದ್ಧ ಹೆಣ್ಣೂರು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಪೊನ್ನಣ್ಣ, ಮಂಥರ್‌ಗೌಡ ಅವರ ಹೆಸರನ್ನೂ ಎಫ್‌ಐಆರ್‌ನಲ್ಲಿ ಸೇರಿಸುವಂತೆ ಬಿಜೆಪಿ ಮುಖಂಡರು ಪಟ್ಟು ಹಿಡಿದಿದ್ದರು. ವಿನಯ್‌ ಅವರ ಆತ್ಮಹತ್ಯೆ ಪ್ರಕರಣವು ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಸಂಘರ್ಷದ ಕಿಡಿ ಹೊತ್ತಿಸಿತ್ತು. ಕೊಡಗಿನ ಕುಶಾಲನಗರದಲ್ಲೂ ದೊಡ್ಡಮಟ್ಟದ ಪ್ರತಿಭಟನೆ ನಡೆದಿತ್ತು.

ತೆನ್ನೀರಾ ಮೈನಾ ಅವರ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ಅವರು ತಲೆಮರೆಸಿಕೊಂಡಿದ್ದರು. ಬಳಿಕ ತೆನ್ನೀರಾ ಮೈನಾ ಅವರನ್ನು ಹೆಣ್ಣೂರು ಠಾಣೆಯ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.

ಪೊನ್ನಣ್ಣ 
ಮಂಥರ್‌ಗೌಡ 
ತೆನ್ನೀರಾ ಮೈನಾ 

ವಾಟ್ಸ್‌ಆ್ಯಪ್‌ ಗ್ರೂಪ್‌ ಅಡ್ಮಿನ್‌ ಆಗಿದ್ದ ವಿನಯ್‌

ಸೋಮವಾರಪೇಟೆ ತಾಲ್ಲೂಕಿನ ಗೋಣಿಮರೂರು ಗ್ರಾಮದ ವಿನಯ್ ಅವರು ಪತ್ನಿ ಹಾಗೂ ಪುತ್ರಿಯ ಜತೆಗೆ ನಗರದ ಎಚ್‌ಬಿಆರ್ ಲೇಔಟ್‌ನಲ್ಲಿ ನೆಲಸಿದ್ದರು. ಕಂಪನಿಯೊಂದರಲ್ಲಿ ಕಾರ್ಯಾಚರಣೆ ವಿಭಾಗದ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ‘ಕೊಡಗಿನ ಸಮಸ್ಯೆಗಳು ಮತ್ತು ಪರಿಹಾರ’ ಹೆಸರಿನ ವಾಟ್ಸ್‌ಆ್ಯಪ್‌ ಗ್ರೂಪ್‌ ಅಡ್ಮಿನ್‌ ಆಗಿದ್ದರು. ಅದರಲ್ಲಿ ಪೋಸ್ಟ್‌ ಮಾಡಿದ್ದ ಸಂದೇಶವೊಂದರ ಸಂಬಂಧ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಸಂದೇಶ ಹಾಕಿದ್ದಕ್ಕೆ ಕೆಲವರ ಬೆದರಿಕೆ ಹಾಕಿದ್ದಾರೆ ಎಂದೂ ಆರೋಪಿಸಲಾಗಿತ್ತು. ನಾಗವಾರದ ಕಂಪನಿಯ ಗೋದಾಮಿನ ಫ್ಯಾನ್‌ಗೆ ನೇಣು ಬಿಗಿದುಕೊಂಡು ಏಪ್ರಿಲ್‌ 4ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.