ADVERTISEMENT

ಯಲಹಂಕ: 12 ಕಟ್ಟಡಗಳ ವ್ಯತಿರಿಕ್ತ ಭಾಗ ತೆರವು

ಯಲಹಂಕದಲ್ಲಿ ನಕ್ಷೆ ಉಲ್ಲಂಘಿಸಿದವರಿಗೆ ದಂಡ: ವಲಯ ಆಯುಕ್ತ ಕರೀಗೌಡ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 15:27 IST
Last Updated 16 ಜೂನ್ 2025, 15:27 IST
ಯಲಹಂಕದಲ್ಲಿ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಕಟ್ಟಡವನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದರು
ಯಲಹಂಕದಲ್ಲಿ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಕಟ್ಟಡವನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದರು   

ಬೆಂಗಳೂರು: ಯಲಹಂಕ ವಲಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ವ್ಯತಿರಿಕ್ತ ಭಾಗ ಅಥವಾ ಹೆಚ್ಚುವರಿ ಅಂತಸ್ತುಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ವಲಯ ಆಯುಕ್ತ ಕರೀಗೌಡ ತಿಳಿಸಿದ್ದಾರೆ.

ಯಲಹಂಕ ಹಾಗೂ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಮಂಜೂರಾತಿ ನಕ್ಷೆ ಉಲ್ಲಂಘನೆ, ಹೆಚ್ಚುವರಿ ಅಂತಸ್ತುಗಳನ್ನು ನಿರ್ಮಾಣ ಮಾಡುತ್ತಿರುವ 12 ಕಟ್ಟಡಗಳ ತೆರವು ಕಾರ್ಯ ಸೋಮವಾರ ಆರಂಭವಾಯಿತು.

ಯಲಹಂಕ ಉಪ ವಿಭಾಗದ ಕೆಂಪೇಗೌಡ ವಾರ್ಡ್‌ನ ಸುರಭಿ ಬಡಾವಣೆಯಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಿಸಲಾಗುತ್ತಿದ್ದ ಒಂದು ಅಂತಸ್ತನ್ನು ತೆರವುಗೊಳಿಸಲಾಯಿತು. ಅಟ್ಟೂರು ವಾರ್ಡ್‌ನ ಮುನೇಶ್ವರ ಬಡಾವಣೆಯ ಒಂದು ಮತ್ತು ಐದನೇ ಅಡ್ಡರಸ್ತೆಯಲ್ಲಿ ಬಿ ಖಾತಾ ನಿವೇಶನದಲ್ಲಿ ಜಿ+3 ಅಂತಸ್ತನ್ನು ನಿರ್ಮಿಸಲಾಗುತ್ತಿದ್ದು, ಅದನ್ನು ತೆರವುಗೊಳಿಸುವ ಕಾರ್ಯ ಆರಂಭವಾಯಿತು.

ADVERTISEMENT

ಯಲಹಂಕ ನ್ಯೂಟೌನ್ ವಾರ್ಡ್‌ನ ಎ ಸೆಕ್ಟರ್‌ನಲ್ಲಿ ಹೆಚ್ಚುವರಿಯಾಗಿ ನಿರ್ಮಿಸುತ್ತಿದ್ದ ಒಂದು ಅಂತಸ್ತು, ಚಿಕ್ಕಬೊಮ್ಮಸಂದ್ರ ನಂಜುಂಡಪ್ಪ ಬಡಾವಣೆಯಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಿಸುತ್ತಿದ್ದ ಜಿ+2 ಕಟ್ಟಡ ತೆರವು ಕಾರ್ಯ ಆರಂಭವಾಗಿದೆ ಎಂದು ಕರೀಗೌಡ ತಿಳಿಸಿದರು.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶ್ರೀರಾಂಪುರದಲ್ಲಿ ಜಿ+2ಗೆ ನಕ್ಷೆ ಮಂಜೂರಾಗಿದ್ದರೂ, ಮಾಲೀಕರು ಎರಡು ಅಂತಸ್ತನ್ನು ಹೆಚ್ಚುವರಿಯಾಗಿ ನಿರ್ಮಿಸುತ್ತಿದ್ದು, ಅದನ್ನು ತೆರವು ಮಾಡಲಾಗುತ್ತಿದೆ. ಜಕ್ಕೂರು ವ್ಯಾಪ್ತಿಯ ಎಂಸಿಇಸಿಎಚ್‌ಎಸ್ ಬಡಾವಣೆ, ಕೊಡಿಗೇಹಳ್ಳಿಯ ಬಾಲಾಜಿ ಲೇಔಟ್‌, ಟೆನ್ನಿಸ್ ವಿಲೇಜ್ ಬಡಾವಣೆ, ಹೆಬ್ಬಾಳ ಕೆಂಪಾಪುರದ ಯೋಗೇಶ್ ನಗರ,  ಹೊಸಟ್ಟಿ ಬಡಾವಣೆ, ವಿದ್ಯಾರಣ್ಯಪುರ ವಾರ್ಡ್‌ನ ಎಚ್‌ಎಂಟಿ ಬಡಾವಣೆಯಲ್ಲಿ ನಕ್ಷೆ ಮಂಜೂರಾತಿಯನ್ನು ಉಲ್ಲಂಘಿಸಿ ಹೆಚ್ಚುವರಿಯಾಗಿ ನಿರ್ಮಿಸುತ್ತಿದ್ದ ಕಟ್ಟಡಗಳ ವ್ಯತಿರಿಕ್ತ ಭಾಗಗಳನ್ನು ತೆರವುಗೊಳಿಸಲಾಗುತ್ತಿದೆ ಎಂದರು.

ಯಲಹಂಕ ವಲಯ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ನಕ್ಷೆ ಮಂಜೂರಾತಿ ಪಡೆದು, ಅದನ್ನು ಉಲ್ಲಂಘಿಸಿ ನಿರ್ಮಿಸುವ ಹಾಗೂ ಹೆಚ್ಚುವರಿ ಮಹಡಿಗಳನ್ನು ನಿರ್ಮಾಣ ಮಾಡುತ್ತಿರುವವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕೆಲ ಕಟ್ಟಡ ಮಾಲೀಕರು ಸ್ವಯಂಪ್ರೇರಿತವಾಗಿ ತೆರವುಗೊಳಿಸುತ್ತಿದ್ದಾರೆ. ಇನ್ನು ಕೆಲವರು ತೆರವುಗೊಳಿಸಿರುವುದಿಲ್ಲ. ಅಂತಹ ಕಟ್ಟಡಗಳ ವ್ಯತಿರಿಕ್ತ ಭಾಗ ಹಾಗೂ ಹೆಚ್ಚುವರಿ ಮಹಡಿಗಳನ್ನು ಪಾಲಿಕೆ ಅಧಿಕಾರಿಗಳ ಸಮ್ಮುಖದಲ್ಲಿ ತೆರವುಗೊಳಿಸಲಾಗುತ್ತಿದ್ದು, ತೆರವು ಕಾರ್ಯಚರಣೆಗೆ ತಗಲುವ ವೆಚ್ಚವನ್ನು ಕಟ್ಟಡದ ಮಾಲೀಕರಿಂದಲೇ ವಸೂಲಿ ಮಾಡಲಾಗುವುದು. ದಂಡವನ್ನೂ ವಿಧಿಸಲಾಗುವುದು ಎಂದು ಕರೀಗೌಡ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.