ADVERTISEMENT

ವೈರಾಣು ಜ್ವರಕ್ಕೆ ಜನತೆ ಹೈರಾಣ

ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 19:45 IST
Last Updated 11 ಸೆಪ್ಟೆಂಬರ್ 2019, 19:45 IST
   

ಬೆಂಗಳೂರು: ಡೆಂಗಿ ಜ್ವರದಿಂದ ಹೈರಾಣಾಗಿದ್ದ ನಗರದ ಜನತೆಯನ್ನು ಇದೀಗ ವೈರಾಣು ಜ್ವರ (ವೈರಲ್ ಫೀವರ್) ಕಾಡಲಾರಂಭಿಸಿದೆ.

ವಾತಾವರಣದಲ್ಲಿ ಏರುಪೇರು, ಕಲುಷಿತ ನೀರು ಮತ್ತು ಆಹಾರ ಸೇವನೆಯೇ ಈ ಜ್ವರಕ್ಕೆ ಪ್ರಮುಖ ಕಾರಣಗಳಾಗಿದ್ದು, ಒಂದು ವಾರದಲ್ಲಿ ಸಾವಿರಕ್ಕೂ ಅಧಿಕ ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಾರಂಭಿಸಿದೆ. ನಗರದಲ್ಲಿ ಗರಿಷ್ಠ ತಾಪಮಾನ 27.9 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20.6 ಡಿಗ್ರಿ ಸೆಲ್ಸಿಯಸ್‌ ಇದ್ದು, ಸಾಧಾರಣ ಮಳೆಯಾಗುತ್ತಿದೆ. ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ಜ್ವರ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮಕ್ಕಳು ಹಾಗೂ ವೃದ್ಧರು ಹೆಚ್ಚಾಗಿ ಘಾಸಿಗೊಳ್ಳುತ್ತಿದ್ದಾರೆ. ಜಯನಗರದ ಜನರಲ್‌ ಆಸ್ಪತ್ರೆ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ,ಕೆ.ಸಿ. ಜನರಲ್‌ ಆಸ್ಪತ್ರೆ, ವಿಕ್ಟೋರಿಯಾ, ವಾಣಿವಿಲಾಸ ಸೇರಿದಂತೆ ಪ್ರಮುಖ ಆಸ್ಪತ್ರೆಗಳಿಗೆ ಪ್ರತಿನಿತ್ಯ ಸರಾಸರಿ 50 ಜನ ಜ್ವರಪೀಡಿತರು ಭೇಟಿ ನೀಡುತ್ತಿದ್ದಾರೆ. ಅದೇ ರೀತಿ, ವಿವಿಧ ಕ್ಲಿನಿಕ್‌ಗಳಲ್ಲಿ ಸಹ ರೋಗಿಗಳ ದಟ್ಟಣೆ ಹೆಚ್ಚಾಗಿದೆ.

ADVERTISEMENT

ಜ್ವರದಿಂದಾಗಿ ಒಂದು ವಾರದಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡುವವರ ಸಂಖ್ಯೆ ಶೇ 10 ರಷ್ಟು ಹೆಚ್ಚಳವಾಗಿದೆ. ಸಾಮಾನ್ಯ
ವಾಗಿ ಮಳೆಗಾಲ ಆರಂಭವಾದ ಬಳಿಕ ಈ ಜ್ವರ ಕಾಣಿಸಿಕೊಳ್ಳುತ್ತದೆ.

‘ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹಾಗಾಗಿ, ಸಾಮಾನ್ಯವಾಗಿ ಜ್ವರ ಮೊದಲು ಮಕ್ಕಳಿಗೆ ಬರುತ್ತದೆ. ಬಳಿಕ ಮನೆಮಂದಿಗೆಲ್ಲ ಹರಡುತ್ತದೆ. ನೆಗಡಿ, ಕೆಮ್ಮು, ಮೈ ಕೈ ನೋವಿನಿಂದ ಪ್ರಾರಂಭವಾಗಿ ಐದಾರು ದಿನ ಬಾಧಿಸುತ್ತದೆ. ತಣ್ಣನೆ ವಾತಾವರಣದಿಂದಾಗಿ ಮನುಷ್ಯರ ದೇಹದಲ್ಲಿ ರೋಗನಿರೋಧಕ ಶಕ್ತಿ ಕುಗ್ಗುತ್ತದೆ. ಇದರಿಂದ ಸುಲಭವಾಗಿ ಸೋಂಕು ಹರಡುತ್ತದೆ. ಜ್ವರ ಗಂಭೀರ ಸ್ವರೂಪ ಪಡೆದಾಗ ನ್ಯೂಮೋನಿಯಾ ಆಗುವ ಸಾಧ್ಯತೆಗಳಿವೆ. ಆಗ ಆಸ್ಪತ್ರೆಗಳಲ್ಲಿಯೇ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ’ ಎಂದು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ಅಧೀಕ್ಷಕ ಡಾ.ಕೆ.ಎಸ್. ಸಂಜಯ್ ತಿಳಿಸಿದರು.

‘ಆಸ್ಪತ್ರೆಯ ಹೊರ ರೋಗ ವಿಭಾಗಕ್ಕೆ ಪ್ರತಿನಿತ್ಯ 300 ಪ್ರಕರಣಗಳು ಬರುತ್ತಿವೆ. ಇದರಲ್ಲಿ 50ರಿಂದ 60 ಜ್ವರದ ಪ್ರಕರಣಗಳಾಗಿವೆ. 10ರಿಂದ 15 ಜನರಲ್ಲಿ ನ್ಯುಮೋನಿಯಾ ಇರುವುದು ದೃಢಪಡುತ್ತಿದೆ’ ಎಂದು ಮಾಹಿತಿ ನೀಡಿದರು.

ಕೆ.ಸಿ. ಜನರಲ್ ಆಸ್ಪತ್ರೆಯ ಡಾ. ಭಾನುಮೂರ್ತಿ, ‘ಈ ಜ್ವರ ಗಾಳಿಯಲ್ಲಿ ಹರಡುತ್ತದೆ. ಹಾಗಾಗಿ, ಮಳೆಗಾಲದಲ್ಲಿ ಮುಂಜಾಗ್ರತೆ ವಹಿಸಬೇಕು. ಜ್ವರದ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ. ಅಷ್ಟೇ ಅಲ್ಲ, ಜ್ವರ ಗುಣ ಆಗುವವರೆಗೂ ಹೊರಗಡೆ ಪ್ರಯಾಣ ಮಾಡಬಾರದು. ಗಾಳಿ, ಚಳಿಗೆ ಜ್ವರ ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.ಅಕ್ಕಪಕ್ಕದಲ್ಲಿ ಇದ್ದವರಿಗೆ ಈ ಸೋಂಕು ಹರಡಲಿದೆ. ಬಿಸಿಯಾದ ನೀರು ಹಾಗೂ ಪೌಷ್ಟಿಕ ಆಹಾರ ಸೇವಿಸಬೇಕು’ ಎಂದು ಸಲಹೆ ನೀಡಿದರು.

ಮುಂಜಾಗ್ರತೆ ಕ್ರಮಕೈಗೊಳ್ಳಿ

* ತಾಜಾ ಹಾಗೂ ಪೌಷ್ಟಿಕ ಆಹಾರ ಸೇವಿಸಬೇಕು

* ನೀರಿನ ಶುದ್ಧತೆಯ ಬಗ್ಗೆ ಗಮನಹರಿಸಬೇಕು

* ಕಾಯಿಸಿ ಆರಿಸಿದ ನೀರನ್ನೇ ಕುಡಿಯುವುದು ಉತ್ತಮ

* ಊಟ–ತಿಂಡಿಗೆ ಮುನ್ನ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ

* ತೆರೆದಿಟ್ಟ ತಿನಿಸು ಮತ್ತು ಕತ್ತರಿಸಿಟ್ಟಿರುವ ಹಣ್ಣುಗಳ ಸೇವನೆ ಅಪಾಯ

* ರಸ್ತೆ ಬದಿಯಲ್ಲಿನ ಕ್ಯಾಂಟಿನ್‌ಗಳಲ್ಲಿ ಆಹಾರ ಸೇವಿಸುವ ಮುನ್ನ ಅಲ್ಲಿನ ಸ್ವಚ್ಛತೆ ಪರಿಶೀಲಿಸಿಕೊಳ್ಳಿ

ಜ್ವರದ ಲಕ್ಷಣಗಳು

* ತೀವ್ರ ಆಯಾಸ, ದಣಿವು

* ಮೈ ಕೈ ನೋವು

* ತಲೆನೋವು

* ನೆಗಡಿ, ಜ್ವರ

* ಕೆಮ್ಮು

* ಮೂಗು ಕಟ್ಟುವುದು

* ಕಣ್ಣುಗಳಲ್ಲಿ ಅಸ್ವಸ್ಥತೆ

* ಗಂಟಲು ಉರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.