ಸಮಾರಂಭದಲ್ಲಿ ಸಿದ್ಧಾಂತಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿದರು. ಅನಿತಾ ಸುರೇಂದ್ರ ಕುಮಾರ್, ಎಸ್. ಜಿತೇಂದ್ರ ಕುಮಾರ್, ಹಾಗೂ ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಧರ್ಮಸ್ಥಳದ ವಿರೇಂದ್ರ ಹೆಗ್ಗಡೆ ಅವರಿಗೆ ಅನೇಕ ಮಂದಿ ಅನೇಕ ರೀತಿಯ ತೊಂದರೆ ನೀಡುತ್ತಿದ್ದಾರೆ. ಆದರೆ, ಅವರು ಮಾತ್ರ ಸಂಯಮದಿಂದ ಇದ್ದು, ಧರ್ಮ ಕಾರ್ಯ ಮಾಡುತ್ತಿದ್ದಾರೆ. ಕ್ಷಮಾ ಗುಣಕ್ಕೆ ಅವರು ಉತ್ತಮ ಉದಾಹರಣೆ’ ಎಂದು ಆರತಿಪುರದ ಸಿದ್ಧಾಂತಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಕರ್ನಾಟಕ ಜೈನ್ ಅಸೋಷಿಯೇಷನ್ ಹಮ್ಮಿಕೊಂಡಿದ್ದ ಸಾಮೂಹಿಕ ಕ್ಷಮಾವಳಿ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು. ‘ಕಷ್ಟಗಳು, ತೊಂದರೆಗಳು ಎಲ್ಲರಿಗೂ ಬರುತ್ತವೆ. ವಿರೇಂದ್ರ ಹೆಗ್ಗಡೆ ಅವರು ಅನೇಕ ಲೋಕ ಕಲ್ಯಾಣ ಕಾರ್ಯಗಳನ್ನು ಮಾಡಿದ್ದಾರೆ. ಆದರೆ, ದುರುದ್ದೇಶದಿಂದ ಅವರಿಗೆ ತೊಂದರೆ ಮಾಡುತ್ತಿದ್ದಾರೆ. ಹೆಗ್ಗಡೆ ಅವರು ಭಗವಾನ್ ಪಾರ್ಶ್ವನಾಥರ ಚರಿತ್ರೆಯನ್ನು ಅಧ್ಯಯನ ಮಾಡಿದ್ದು, ಭಗವಾನ್ ಪಾರ್ಶ್ವನಾಥರ ರೀತಿಯೇ ಸಂಯಮದಿಂದ ಇದ್ದಾರೆ. ಭಟ್ಟಾರಕರೆಲ್ಲರೂ ಅವರ ಬಳಿ ಚರ್ಚಿಸಿದಾಗಲೂ, ಒಳ್ಳೆಯ ದಾರಿಯಲ್ಲಿ ಸಾಗುತ್ತಾ ಧರ್ಮಕಾರ್ಯ ಕೈಗೊಂಡಿರುವುದಾಗಿ ಹೇಳಿದರು. ಎಷ್ಟೇ ಕಷ್ಟ ಬಂದರೂ, ಯಾರು ಏನೇ ತೊಂದರೆ ಮಾಡಿದರೂ ನಾವು ಕ್ಷಮಾ ಗುಣವನ್ನು ಧಾರಣೆ ಮಾಡಬೇಕು ಎಂಬುದನ್ನು ಅವರು ಪಾಲಿಸುತ್ತಿದ್ದಾರೆ’ ಎಂದರು.
ತ್ಯಾಗಿ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಸುರೇಂದ್ರ ಕುಮಾರ್, ‘ಕ್ಷಮಾವಳಿಗೆ ವಿಶೇಷ ಮಹತ್ವ ಇದೆ. ಹಿಂದೆ ಜಗಳವಾದರೆ ರಾಜಿಯಾಗಲು ಈ ಕ್ಷಮಾವಳಿ ಆಚರಣೆ ಅವಕಾಶ ಮಾಡಿಕೊಡುತ್ತಿತ್ತು. ನಮ್ಮ ಆಚಾರ ವಿಚಾರಗಳು ಹೆಚ್ಚು ಪ್ರಚಾರವಾಗಬೇಕು’ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಜಿತೇಂದ್ರ ಕುಮಾರ್, ‘ಅನ್ಯ ಧರ್ಮೀಯರು ಎಲ್ಲ ಜನರು ಸುಖವಾಗಿ ಇರಲಿ ಎನ್ನುತ್ತಾರೆ. ಆದರೆ, ಜೈನ ಧರ್ಮೀಯರು ಮಾತ್ರ ಎಲ್ಲ ಜೀವಗಳು ಸುಖವಾಗಿ, ನೆಮ್ಮದಿಯಾಗಿ ಇರಲಿ ಎಂದು ಬಯಸುತ್ತಾರೆ’ ಎಂದು ಹೇಳಿದರು.
ಪತ್ರಕರ್ತ ಪದ್ಮರಾಜ ದಂಡಾವತಿ ಅವರು ಕ್ಷಮಾವಳಿ ಬಗ್ಗೆ ಉಪನ್ಯಾಸ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.