ಬೆಂಗಳೂರು: ಅಖಿಲ ಹವ್ಯಕ ಮಹಾಸಭಾ ಇದೇ 27 ರಿಂದ 29ರವರೆಗೆ ಅರಮನೆ ಮೈದಾನದ (ಗೇಟ್ ಸಂಖ್ಯೆ 6) ರಾಯಲ್ ಸೆನೆಟ್ ಹಾಗೂ ಗ್ರ್ಯಾಂಡ್ ಕ್ಯಾಸಲ್‌ನಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನ ಹಮ್ಮಿಕೊಂಡಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭೆ ಅಧ್ಯಕ್ಷ ಡಾ. ಗಿರಿಧರ ಕಜೆ, ‘ಸಮ್ಮೇಳನದ ಮೂರೂ ದಿನಗಳು ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಕೃಷಿ, ಶಿಕ್ಷಣ, ಸಮಾಜಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮುದಾಯದ 567 ಮಂದಿಯನ್ನು ಗೌರವಿಸಲಾಗುತ್ತದೆ. ಇದರಲ್ಲಿ 81 ಹವ್ಯಕ ಯೋಧರೂ ಸೇರಿದ್ದಾರೆ. ‘ಹವ್ಯಕ ಸಾಧಕ ರತ್ನ, ‘ಹವ್ಯಕ ಕೃಷಿ ರತ್ನ’, ‘ಹವ್ಯಕ ಶಿಕ್ಷಕ ರತ್ನ’ ಸೇರಿ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಯಕ್ಷಗಾನ, ಸುಗಮ ಸಂಗೀತ, ಭಕ್ತಿ ಭಜನೆ, ನಾಟಕ ಪ್ರದರ್ಶನ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, 300ಕ್ಕೂ ಅಧಿಕ ಕಲಾವಿದರು ಪಾಲ್ಗೊಳ್ಳುತ್ತಾರೆ’ ಎಂದು ತಿಳಿಸಿದರು.
‘ಉದ್ಘಾಟನಾ ಸಮಾರಂಭ 27ರ ಬೆಳಿಗ್ಗೆ 9ಕ್ಕೆ ನಡೆಯಲಿದೆ. ವಿವಿಧ ಮಠಾಧೀಶರು ಸಮಾರಂಭದಲ್ಲಿ ಸಾನ್ನಿಧ್ಯವಹಿಸುತ್ತಾರೆ. ಡಿ.28ರಂದು ಬೆಳಿಗ್ಗೆ 9ಕ್ಕೆ ಸಾಕ್ಷಾತ್ಕಾರ ಸಭಾ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಸಾಕ್ಷಾತ್ಕಾರ’ ಕೃತಿ ಬಿಡುಗಡೆ ಮಾಡುತ್ತಾರೆ. ಮೂರು ದಿನಗಳ ಸಮ್ಮೇಳನದಲ್ಲಿ ವಿವಿಧ ಮಠಾಧೀಶರು, ಕೇಂದ್ರ ಹಾಗೂ ರಾಜ್ಯ ಸಚಿವರು, ವಿವಿಧ ಕ್ಷೇತ್ರಗಳ ಪ್ರಮುಖರು ಪಾಲ್ಗೊಳ್ಳುತ್ತಾರೆ’ ಎಂದರು.
1.5 ಲಕ್ಷ ಜನ: ‘ಹವ್ಯಕರ ಜೀವನಶೈಲಿ, ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆ, ನವೋದ್ಯಮ ಸೇರಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಎಂಟು ಗೋಷ್ಠಿಗಳು ನಡೆಯಲಿವೆ. ‘ಸಹಸ್ರಚಂದ್ರ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಗುತ್ತದೆ. ಹಳ್ಳಿ ಸೊಗಡಿನ ಆಲೆಮನೆ, ವಾಣಿಜ್ಯ, ಕರಕುಶಲ ಹಾಗೂ ಹವ್ಯಕ ಖಾದ್ಯಗಳ ಮಳಿಗೆಗಳು ಸಮ್ಮೇಳನದಲ್ಲಿ ಇರಲಿವೆ. 6,000 ಹವ್ಯಕ ಪುಸ್ತಕಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಸಮ್ಮೇಳನದಲ್ಲಿ 1.5 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ’ ಎಂದು ತಿಳಿಸಿದರು.
ಮಹಾಸಭೆ ಉಪಾಧ್ಯಕ್ಷ ಶ್ರೀಧರ ಜೆ. ಭಟ್ಟ ಕೆಕ್ಕಾರು, ಪ್ರಧಾನ ಕಾರ್ಯದರ್ಶಿ ವೇಣುವಿಘ್ನೇಶ ಸಂಪ, ಕಾರ್ಯದರ್ಶಿ ಪ್ರಶಾಂತ ಭಟ್ಟ ಹಾಗೂ ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.