ADVERTISEMENT

ಅಕ್ಷಯ ತದಿಗೆಯಂದು ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಕಾರ್ಯಾರಂಭ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 19:43 IST
Last Updated 10 ಅಕ್ಟೋಬರ್ 2019, 19:43 IST
ರಾಘವೇಶ್ವರ ಶ್ರೀ
ರಾಘವೇಶ್ವರ ಶ್ರೀ   

ಬೆಂಗಳೂರು: ಗೋಕರ್ಣದ ಅಶೋಕೆಯಲ್ಲಿ ನಿರ್ಮಿಸಲಾಗುತ್ತಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠವು ಮುಂಬರುವ ಅಕ್ಷಯ ತೃತೀಯದಂದು (2020 ಏ. 26) ಕಾರ್ಯಾರಂಭ ಮಾಡಲಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಸ್ವಾಮೀಜಿ ತಿಳಿಸಿದರು.

ಗುರುವಾರ ಇಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ತಕ್ಷಶಿಲಾ ವಿಶ್ವವಿದ್ಯಾಲಯದ ಮಾದರಿಯಲ್ಲೇ ಕಾರ್ಯನಿರ್ವಹಿಸಲಿರುವ ಈ ವಿದ್ಯಾಪೀಠವು ಎಲ್ಲ ಭಾರತೀಯ ವಿದ್ಯೆಗಳನ್ನು ಹಾಗೂ ಕಲೆಗಳನ್ನುಪರಿಪೂರ್ಣವಾಗಿ ಕಲಿಸುವ ಕೇಂದ್ರವಾಗಲಿದೆ. ಆತ್ಮವಿಶ್ವಾಸ ವೃದ್ಧಿಗಾಗಿ ಸಮರ ಕಲೆಗಳನ್ನೂ ಕಲಿಸಲಿದ್ದೇವೆ’ ಎಂದರು.

‘ಮೊದಲ ಎರಡು ವರ್ಷ ಎಲ್ಲ ವಿದ್ಯೆಗಳ ಸ್ಥೂಲ ಪರಿಚಯ ಮಾಡಿಕೊಡಲಾಗುವುದು. ನಂತರ ನಿರ್ದಿಷ್ಟ ವಿದ್ಯೆಯಲ್ಲಿ ಹೆಚ್ಚಿನ ಸಾಧನೆಗೆ ಅವಕಾಶ ಮಾಡಿಕೊಡಲಾಗುತ್ತದೆ. ದೇಶದ ಶ್ರೇಷ್ಠ ಆಚಾರ್ಯರನ್ನು ನೇಮಿಸಿಕೊಳ್ಳಲಿದ್ದೇವೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಮೊದಲ ವರ್ಷ 100 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಿದ್ದೇವೆ. ನಂತರ ಪ್ರತಿ ಕೋರ್ಸ್‌ಗೆ ತಲಾ 20 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುತ್ತೇವೆ. ವಿದೇಶಿ ವಿದ್ಯಾರ್ಥಿಗಳೂ ಸೇರಿದಂತೆ ಇಲ್ಲಿ ಎಲ್ಲರಿಗೂ ಮುಕ್ತ ಪ್ರವೇಶ. ಆದರೆ ಪ್ರವೇಶ ಪರೀಕ್ಷೆ ಇದ್ದೇ ಇರುತ್ತದೆ. ಪ್ರವೇಶಕ್ಕೆ ಕನಿಷ್ಠ 6 ವರ್ಷ ತುಂಬಿರಬೇಕು. 40 ವರ್ಷ ದಾಟಿದವರ ವ್ಯಾಸಂಗಕ್ಕೂ ‍ಪೂರಕ ಕೋರ್ಸ್‌ ಆರಂಭಿಸಲಿದ್ದೇವೆ’ ಎಂದರು.

‘ವಿದ್ಯಾರ್ಥಿಗಳಿಗೆ ಶುಲ್ಕ ವಿಧಿಸುತ್ತೇವೆ. ಶುಲ್ಕ ಪಾವತಿಸಲು ಸಾಧ್ಯವಾಗದವರಿಗೆ ವಿದ್ಯಾರ್ಥಿವೇತನಕ್ಕೆ ವ್ಯವಸ್ಥೆ ಮಾಡುತ್ತೇವೆ. ಮಠದ ನೆರವಿನಿಂದ ನಡೆಯುವ ಈ ವಿದ್ಯಾಪೀಠ ನಿರ್ವಹಣೆಗೆ ಭಕ್ತರೂ ಕೈಜೋಡಿಸಲಿದ್ದಾರೆ. ಈ ಯೋಜನೆಗೆ ಸರ್ಕಾರದಿಂದ ನಯಾಪೈಸೆಯನ್ನೂ ಕೇಳುವುದಿಲ್ಲ ಎಂದು ಸಂಕಲ್ಪ ಮಾಡಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

***

ಭಾರತೀಯ ವಿದ್ಯೆಗಳನ್ನು ಕಲಿತವರಿಗೆ ಉದ್ಯೋಗದ ಕೊರತೆ ಎದುರಾಗದು. ಭಾರತೀಯ ವಿದ್ಯೆಯಲ್ಲಿ ಈಗಲೂ ಸತ್ವವೂ ಇದೆ, ಅದನ್ನು ಅಧ್ಯಯನ ಮಾಡಿದವರಿಗೆ ಬೇಡಿಕೆಯೂ ಇದೆ.
-ರಾಘವೇಶ್ವರಭಾರತೀ ಸ್ವಾಮೀಜಿ, ರಾಮಚಂದ್ರಾಪುರ ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.