ಬೆಂಗಳೂರು: ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಆರಂಭಿಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಒಕ್ಕಲಿಗರು ಸೇರಿದಂತೆ ಎಲ್ಲ ತಳಸಮುದಾಯದವರು ಧರ್ಮದ ಕಾಲಂನಲ್ಲಿ ‘ವಿಶ್ವಮಾನವ ಧರ್ಮ’ ಎಂದು ನಮೂದಿಸುವಂತೆ ವಿಶ್ವಮಾನವ ಧರ್ಮ ಆಂದೋಲನ ಸಮಿತಿ ತಿಳಿಸಿದೆ.
‘ಒಕ್ಕಲಿಗರು ಇತರೆ ಕೆಳ ಸಮುದಾಯಗಳು ಮೂಲತಃ ಹಿಂದೂಗಳಲ್ಲ. ಮೂಲ ನಿವಾಸಿಗಳು. ಒಕ್ಕಲಿಗರನ್ನು 11ನೇ ಶತಮಾನದಿಂದ ಈಚೆಗೆ ಅಂದರೆ ರಾಮಾನುಜಾಚಾರ್ಯರು ವೈಷ್ಣವ ಧರ್ಮ ದೀಕ್ಷೆ ನೀಡಿ, ಬಿಟ್ಟಿದೇವನೆಂಬ ನಮ್ಮ ಸಮುದಾಯದ ರಾಜನನ್ನು ವಿಷ್ಣುವರ್ಧನ ಎಂದು ಹೆಸರಿಸಿ, ಅವನ ಪ್ರಜೆಗಳಾಗಿದ್ದ ನಮ್ಮ ಪೂರ್ವಜರನ್ನು ಹಿಂದುಗಳೆಂದು ನಂಬಿಸಲಾಗಿದೆ’ ಎಂದು ವಿಶ್ವಮಾನವ ಧರ್ಮ ಜಾಗೃತಿ ವೇದಿಕೆಯ ಸಮನ್ವಯ ಸಮಿತಿ ಸದಸ್ಯರಾದ ನಾದಾನಂದನಾಥ ಸ್ವಾಮೀಜಿ, ತಲಕಾಡು ಚಿಕ್ಕರಂಗೇಗೌಡ, ಮುಕುಂದರಾಜ್, ಹನುಮೇಗೌಡ ನಂಜಪ್ಪ, ಅರಳುಕುಪ್ಪೆ ನಾಗೇಶ್, ಭೈರೇಗೌಡ ಎಸ್., ನೀಲಕಂಠಗೌಡ, ನಾಡಪ್ರಭು ನಾಗರಾಜು, ರವೀಂದ್ರಗೌಡ, ಮಂಜುನಾಥ ಅದ್ದೆ, ಜಯರಾಮ ಸಿ.ವಿ., ವ.ನಂ. ಶಿವರಾಮು, ಪ್ರಭಾಕರ ರೆಡ್ಡಿ ತಿಳಿಸಿದ್ದಾರೆ.
‘ಮಹಾಕವಿ ಕುವೆಂಪು ವಿಶ್ವಮಾನವ ಧರ್ಮವನ್ನು ಪ್ರತಿಪಾದಿಸಿ ಕೊಟ್ಟಿದ್ದಾರೆ. ಮುಂದಿನ ಪೀಳಿಗೆ ಹೇಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎನ್ನುವ ಕನಸನ್ನು ಕುವೆಂಪು ಕಂಡಿದ್ದರು. ಪುರೋಹಿತಶಾಹಿ ವೈದಿಕರ ಕಪಿಮುಷ್ಟಿಗೆ ಸಿಲುಕಿದರೆ ಒಕ್ಕಲಿಗ ಜನಾಂಗದ ಭವಿಷ್ಯ ನಾಶವಾಗುವುದೆಂಬ ಅರಿವು ಅವರಿಗಿತ್ತು. ಕುವೆಂಪು ತೋರಿಸಿಕೊಟ್ಟ ವಿಶ್ವಮಾನವ ಧರ್ಮವನ್ನು ಅನುಸರಿಸಬೇಕಾದ ಅಗತ್ಯವಿದೆ’ ಎಂದು ಹೇಳಿದ್ದಾರೆ.
ಧರ್ಮದ ಹೆಸರು ಬರೆಯುವ ಎಂಟನೇ ಕಾಲಂನಲ್ಲಿ ಮೇಲಿನ ಏಳು ಧರ್ಮಗಳಲ್ಲದವರು ಅಥವಾ ಯಾವುದೇ ಧರ್ಮಕ್ಕೆ ಸೇರಲು ಇಷ್ಟಪಡದವರು ತಾವು ಇತರೆ ಎಂದು ಬರೆಯಬಹುದು. ಇದರ ಬದಲಿಗೆ ವಿಶ್ವಮಾನವ ಧರ್ಮ ಎಂದು ಬರೆಸಬೇಕು ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.