ADVERTISEMENT

ಅಂತಿಮಯಾನಕ್ಕೆ ಝೀರೊ ಟ್ರಾಫಿಕ್‌: ವಾಹನಕ್ಕೆ ಪುಷ್ಪಮಾಲೆ ಅರ್ಪಣೆ

ಭದ್ರತೆಗೆ 700ಕ್ಕೂ ಸಿಬ್ಬಂದಿ ನಿಯೋಜನೆ ‌

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 23:04 IST
Last Updated 29 ಡಿಸೆಂಬರ್ 2019, 23:04 IST
ಶ್ರೀಗಳ ಪಾರ್ಥಿವ ಶರೀರವಿದ್ದ ವಿಶೇಷ ವಾಹನ ಝೀರೊ ಟ್ರಾಫಿಕ್‌ನಲ್ಲಿ ಸಾಗಿತು
ಶ್ರೀಗಳ ಪಾರ್ಥಿವ ಶರೀರವಿದ್ದ ವಿಶೇಷ ವಾಹನ ಝೀರೊ ಟ್ರಾಫಿಕ್‌ನಲ್ಲಿ ಸಾಗಿತು    

ಬೆಂಗಳೂರು: ಉಡುಪಿಯಿಂದ ನಗರದ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ತರಲಾದ ಪೇಜಾವರಶ್ರೀಗಳ ಪಾರ್ಥಿವ ಶರೀರವನ್ನು ರಸ್ತೆ ಮೂಲಕ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನಕ್ಕೆ ಕೊಂಡೊಯ್ಯಲಾಯಿತು. ಮಾರ್ಗದ ಇಕ್ಕೆಲಗಳಲ್ಲಿ ಸೇರಿದ್ದ ಸಾವಿರಾರು ಭಕ್ತರು ವಿಶೇಷ ವಾಹನದಲ್ಲಿದ್ದ ಶ್ರೀಗಳ ಮುಖ ದರ್ಶನ ಪಡೆದರು. ದೂರದಿಂದಲೇ ಕೈ ಮುಗಿದು ಅಂತಿಮ ನಮನ ಸಲ್ಲಿಸಿದರು.

ಪಾರ್ಥಿವ ಶರೀರವಿದ್ದ ವಾಹನ ಹಾದು ಹೋಗುವ ರಸ್ತೆಯುದ್ದಕ್ಕೂ ಸಾವಿರಾರು ಭಕ್ತರು ಸೇರಿದ್ದರು. ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಕೆಲವರು ಶ್ರೀಗಳ ಪರ ಘೋಷಣೆ ಕೂಗಿದರು. ಇನ್ನು ಕೆಲವರು ಭಜನೆ ಮಾಡಿದರು. ಕೆಲವು ರಸ್ತೆಯಲ್ಲಿ ಕಸಗೂಡಿಸಿ, ನೀರು ಸಿಂಪಡಿಸಿ ಸ್ವಚ್ಛಗೊಳಿಸಲಾಗಿತ್ತು. ಅದೇ ರಸ್ತೆಯಲ್ಲಿ ವಾಹನ ಹಾದು ಹೋಯಿತು. ಕೆಲವರು ವಾಹನದ ಮೇಲೆಯೇ ಹೂವಿನ ಮಾಲೆ ಎಸೆದು ನಮಿಸಿದರು.

ಶ್ರೀಗಳ ಪಾರ್ಥಿವ ಶರೀರವಿದ್ದ ವಿಶೇಷ ವಾಹನದ ಸಂಚಾರಕ್ಕೆ ಝೀರೊ ಟ್ರಾಫಿಕ್‌ ವ್ಯವಸ್ಥೆ ಮಾಡಿಕೊಡಲಾಗಿತ್ತು. ಸಂಚಾರ ಪೊಲೀಸರ ಗಸ್ತು ವಾಹನ ಮುಂದೆ ಸಾಗಿದರೆ, ವಿಶೇಷ ವಾಹನ ಅದನ್ನು ಹಿಂಬಾಲಿಸಿತು. ಅದರ ಜೊತೆ ಗಣ್ಯರ ಹಾಗೂ ಅಧಿಕಾರಿಗಳ ವಾಹನಗಳೂ ಸಾಗಿದವು.

ADVERTISEMENT

ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಹೊರಟ ವಾಹನ ಮಣಿಪಾಲ್ ಆಸ್ಪತ್ರೆ ಜಂಕ್ಷನ್, ದೊಮ್ಮಲೂರು ಮೇಲ್ಸೇತುವೆ, ಕಮಾಂಡ್ ಆಸ್ಪತ್ರೆ, ಎಎಸ್‌ಸಿ ಸೆಂಟರ್, ಕಬ್ಬನ್ ರಸ್ತೆ, ಅನಿಲ್ ಕುಂಬ್ಳೆ ಜಂಕ್ಷನ್, ಸುಬ್ಬಯ್ಯ ವೃತ್ತ, ಕೃಂಬಿಗಲ್ ರಸ್ತೆ ಹಾಗೂ ಶೇಷಮಹಲ್ ವೃತ್ತದ ಮೂಲಕ ಮೈದಾನಕ್ಕೆ ಸಾಗಿತು.

ಮೈದಾನದಲ್ಲಿ ಅಂತಿಮ ದರ್ಶನದ ನಂತರ ಪಾರ್ಥಿವ ಶರೀರವನ್ನು ವಿದ್ಯಾಪೀಠದತ್ತ ತೆಗೆದುಕೊಂಡು ಹೋಗುವಾಗಲೂ ಝೀರೊ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.

700ಕ್ಕೂ ಸಿಬ್ಬಂದಿ ನಿಯೋಜನೆ: ಪಾರ್ಥಿವ ಶರೀರವನ್ನು ನಗರಕ್ಕೆ ತರುವ ಸುದ್ದಿ ತಿಳಿದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ ಹಾಗೂ ವಿದ್ಯಾಪೀಠದತ್ತ ಬರಲಾರಂಭಿಸಿದ್ದರು. ಅದೇ ಕಾರಣಕ್ಕೆ ಮೈದಾನ ಹಾಗೂ ವಿದ್ಯಾಪೀಠದ ಬಳಿ ಭದ್ರತೆಗಾಗಿ 700ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಬೆಳಿಗ್ಗೆಯೇ ಮೈದಾನ ಹಾಗೂ ವಿದ್ಯಾಪೀಠಕ್ಕೆ ಭೇಟಿ ನೀಡಿದ್ದ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್.ರವಿಕಾಂತೇಗೌಡ ಹಾಗೂ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸೆಪಟ್, ಭದ್ರತೆಗೆ ಬೇಕಾದ ಮಾರ್ಗದರ್ಶನ ಮಾಡಿದರು. ಪಾರ್ಥಿವ ಶರೀರ ಇಡುವ ಜಾಗಕ್ಕೆ ಭಕ್ತರು ಸಾಲಿನಲ್ಲಿ ಬರಲು ಬ್ಯಾರಿಕೇಡ್ ಅಳವಡಿಸಲಾಗಿತ್ತು. ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಿ ಮೈದಾನದೊಳಗೆ ಬಿಡಲಾಯಿತು.

ಪಿಎಂಕೆ ರಸ್ತೆಗೆ ಹೊಂದಿಕೊಂಡಿರುವ ಮೈದಾನದ ಮುಖ್ಯದ್ವಾರದ ಮೂಲಕ ಸಾರ್ವಜನಿಕರನ್ನು ಒಳಗೆ ಬಿಡಲಾಯಿತು. ದರ್ಶನದ ಬಳಿಕವೇ ಅದೇ ದ್ವಾರದ ಮೂಲಕ ಅವರನ್ನು ಹೊರಗೆ ಕಳುಹಿಸಲಾಯಿತು. ಗೇಟ್‌ 1ರಲ್ಲಿ ಗಣ್ಯರಿಗೆ ಪ್ರವೇಶ ಕಲ್ಪಿಸಲಾಗಿತ್ತು. ವಿದ್ಯಾಪೀಠದಲ್ಲೂ ಬಿಗಿ ಭದ್ರತೆ ಇತ್ತು.

ಹೆಚ್ಚುವರಿ ಪೊಲೀಸ್ ಕಮಿಷನರ್‌, ಇಬ್ಬರು ಡಿಸಿಪಿಗಳು, ಐವರು ಎಸಿಪಿಗಳು, 25 ಇನ್‌ಸ್ಪೆಕ್ಟರ್‌ಗಳು ಹಾಗೂ 40 ಪಿಎಸ್‌ಐಗಳು ಭದ್ರತೆ ಉಸ್ತುವಾರಿ ವಹಿಸಿಕೊಂಡಿದ್ದರು. ಯಾವುದೇ ಅಹಿತಕರ ಘಟನೆಗಳಿಗೂ ಆಸ್ಪದ ಸಿಗದಂತೆ ಸಿಬ್ಬಂದಿ ನೋಡಿಕೊಂಡರು.

ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ದರ್ಶನಕ್ಕೆ ಇರಿಸಲಾಗಿದ್ದ ಪೇಜಾವರಶ್ರೀಗಳ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜ ಹೊದಿಸಲಾಯಿತು – ಪ್ರಜಾವಾಣಿ ಚಿತ್ರಗಳು

ಅಂತಿಮ ಯಾತ್ರೆ

*ಮಧ್ಯಾಹ್ನ 3.45: ಉಡುಪಿಯಿಂದ ಎಚ್‌ಎಎಲ್‌ ವಿಮಾನನಿಲ್ದಾಣಕ್ಕೆ ಪಾರ್ಥಿವ ಶರೀರ

*ಮಧ್ಯಾಹ್ನ 4.10: ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ಆಗಮನ

*ಸಂಜೆ 6.15: ವಿದ್ಯಾಪೀಠಕ್ಕೆ ಪಾರ್ಥಿವ ಶರೀರ ರವಾನೆ

*ರಾತ್ರಿ 9.30: ಬೃಂದಾವನಸ್ಥರಾದ ಶ್ರೀಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.