ADVERTISEMENT

ಆರೋಗ್ಯ ಕ್ಷೇತ್ರದ ಸುಧಾರಣೆಗೆ ವಿಷನ್ ಗ್ರೂಪ್ ರಚನೆ

ನಿಮ್ಹಾನ್ಸ್‌ ನಿರ್ದೇಶಕ ಡಾ.ಜಿ. ಗುರುರಾಜ್ ಅಧ್ಯಕ್ಷರಾಗಿ ನೇಮಕ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 21:58 IST
Last Updated 31 ಡಿಸೆಂಬರ್ 2020, 21:58 IST

ಬೆಂಗಳೂರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಸಂಬಂಧಿಸಿದಂತೆ ಕಾಲ ಕಾಲಕ್ಕೆ ತಜ್ಞರ ಸಲಹೆ ಹಾಗೂ ಶಿಫಾರಸನ್ನು ಪಡೆಯಲು ಸರ್ಕಾರವು ನಿಮ್ಹಾನ್ಸ್‌ ನಿರ್ದೇಶಕ ಡಾ.ಜಿ. ಗುರುರಾಜ್ ಅಧ್ಯಕ್ಷತೆಯಲ್ಲಿ ವಿಷನ್‌ ಗ್ರೂಪ್ ರಚಿಸಿದೆ.

ಈ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳು, ಆವಿಷ್ಕಾರಗಳನ್ನು ವಿಷನ್‌ ಗ್ರೂಪ್ ಸರ್ಕಾರದ ಗಮನಕ್ಕೆ ತರಲಿದೆ. ವಿವಿಧ ಆರೋಗ್ಯ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಅಧ್ಯಯನ ನಡೆಸಿ, ಗುಣಾತ್ಮಕ ಬದಲಾವಣೆಗೆ ತಜ್ಞರು ಸಲಹೆ ನೀಡಲಿದ್ದಾರೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನಡುವೆ ಉತ್ತಮ ಸಂಯೋಜನೆ ರಚಿಸುವ ಜತೆಗೆ ಗುಣಮಟ್ಟದ ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ಶಿಫಾರಸುಗಳನ್ನು ಮಾಡಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹೃದಯ, ಎದೆರೋಗ, ನರವಿಜ್ಞಾನ ಸೇರಿದಂತೆ ವಿವಿಧ ವಿಭಾಗಗಳ ತಜ್ಞರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ. ಅಂತಃಸ್ರಾವ ತಜ್ಞ ಡಾ. ಸತೀಶ್ ಅವರು ಸಂಯೋಜಕರಾಗಿದ್ದಾರೆ. 38 ಮಂದಿ ಸದಸ್ಯರ ವಿಷನ್‌ ಗ್ರೂಪ್‌ನಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಕೂಡ ಸೇರಿದ್ದಾರೆ.

ADVERTISEMENT

ವಿಷನ್‌ ಗ್ರೂಪ್‌ನ ಸದಸ್ಯರು: ಸಾರ್ವಜನಿಕ ಆರೋಗ್ಯ ವಿಭಾಗದಲ್ಲಿ ಡಾ. ಸುದರ್ಶನ್, ಡಾ. ಗಿರಿಧರ್ ಬಾಬು, ಹೃದ್ರೋಗ ಶಾಸ್ತ್ರದಲ್ಲಿ ಡಾ.ಸಿ.ಎನ್. ಮಂಜುನಾಥ್, ಡಾ. ವಿವೇಕ್ ಜವಳಿ, ಖಾಸಗಿ ಆರೋಗ್ಯ ಉದ್ದಿಮೆ ವಿಭಾಗದಲ್ಲಿ ಡಾ. ಸುದರ್ಶನ್ ಬಲ್ಲಾಳ್, ಡಾ. ಮುರಳಿ, ಡಾ. ಶರಣ್ ಪಾಟೀಲ್, ಗ್ರಂಥಿ ವಿಜ್ಞಾನ ವಿಭಾಗದಲ್ಲಿ ಡಾ.ಬಿ.ಎಸ್. ಶ್ರೀನಾಥ್, ಅಂತಃಸ್ರಾವಶಾಸ್ತ್ರ ವಿಭಾಗದಲ್ಲಿ ಡಾ. ಸತೀಶ್, ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಯಲ್ಲಿ ಡಾ. ಸವಿತಾ, ಡಾ. ಅರವಿಂದ ಶೆಣೈ, ನೇತ್ರ ಶಾಸ್ತ್ರ ವಿಭಾಗದಲ್ಲಿ ಡಾ. ಭುಜಂಗ ಶೆಟ್ಟಿ, ಎದೆರೋಗ ವಿಭಾಗದಲ್ಲಿ ಡಾ. ರವಿ, ಡಾ. ಶಶಿಭೂಷಣ್, ಡಾ. ಆನಂದ್ ಆರ್., ಟ್ರಾಮಾ ಸೇವೆ ವಿಭಾಗದಲ್ಲಿ ಡಾ. ಪ್ರದೀಪ್ ರಂಗಪ್ಪ, ಡಾ. ಗುರುರಾಜ್, ಡಾ. ವಿದ್ಯಾಧರ್ ಎಸ್. ಸದಸ್ಯರಾಗಿದ್ದಾರೆ.

ನರವಿಜ್ಞಾನ ವಿಭಾಗದಲ್ಲಿ ಡಾ. ಮುರಳೀಧರ್, ನೆಪ್ರೋ ಸೇವೆಗಳ ವಿಭಾಗದಲ್ಲಿ ಡಾ.ಜಿ. ವೆಂಕಟೇಶ್, ಸಾಂಕ್ರಾಮಿಕ ರೋಗಗಳು ವಿಭಾಗದಲ್ಲಿ ಡಾ. ರವಿ, ಯೋಗ ವಿಭಾಗದಲ್ಲಿ ಡಾ.ಎಚ್.ಆರ್. ನಾಗೇಂದ್ರ, ಹೋಮಿಯೋಪಥಿಗೆ ಡಾ. ಮುನೀರ್ ಅಹಮ್ಮದ್ ಆರ್., ಆಯುಷ್ ವಲಯದಲ್ಲಿ ಡಾ. ಅಮಿತ್ ಅಗರ್‌ವಾಲ್, ಯುನಾನಿಯಲ್ಲಿ ಡಾ. ಮೊಹ್ಮದ್ ಸಯೀದ್, ಆಯುರ್ವೇದದಲ್ಲಿ ಡಾ. ಅಹಲ್ಯಾ ಶರ್ಮಾ, ಡಾ.ಬಿ.ಟಿ. ಚಿದಾನಂದಮೂರ್ತಿ, ಔಷಧ ತಯಾರಿಕಾ ವಲಯದಲ್ಲಿ ಡಾ. ರಾಕೇಶ್ ಬೊಂಜೈ, ಉತ್ತಮ ಆರೋಗ್ಯ ಸೌಲಭ್ಯಕ್ಕೆ ಸಂಬಂಧಿಸಿದಂತೆ ಡಾ. ವೀರಭದ್ರಯ್ಯ, ಡಾ.ಸ್ವಾತಿ, ಡಾ. ರವೀಂದ್ರ ಹಾಗೂ ಡಾ.ಎಸ್.ಡಿ. ಚಂದ್ರಶೇಖರ್ ಅವರು ಸದಸ್ಯರಾಗಿ ನೇಮಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.