ADVERTISEMENT

ವಿಕೆಒ ಶಾಲೆ ಬಂದ್‌: ರಸ್ತೆಗಿಳಿದು ಪ್ರತಿಭಟಿಸಿದ ಮಕ್ಕಳು, ಪೋಷಕರು

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 20:02 IST
Last Updated 19 ಜೂನ್ 2019, 20:02 IST
ವಿ.ಕೆ. ಒಬೇದುಲ್ಲಾ ಸರ್ಕಾರಿ ಶಾಲೆಯ ಮಕ್ಕಳು ಮತ್ತು ಪೋಷಕರು ಶಾಸಕ ರೋಷನ್‌ ಬೇಗ್‌ ಮನೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು
ವಿ.ಕೆ. ಒಬೇದುಲ್ಲಾ ಸರ್ಕಾರಿ ಶಾಲೆಯ ಮಕ್ಕಳು ಮತ್ತು ಪೋಷಕರು ಶಾಸಕ ರೋಷನ್‌ ಬೇಗ್‌ ಮನೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು   

ಬೆಂಗಳೂರು: ಐಎಂಎ ಸಮೂಹ ಸಂಸ್ಥೆ ದತ್ತು ಪಡೆದಿದ್ದ ಶಿವಾಜಿನಗರದ ವಿ.ಕೆ. ಒಬೇದುಲ್ಲಾ ಸರ್ಕಾರಿ ಶಾಲೆ (ವಿಕೆಒ ಶಾಲೆ) ಸಂಕಷ್ಟ ಸ್ಥಿತಿ ಎದುರಿಸುತ್ತಿದ್ದು, ಎಲ್‍ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಶಾಲಾ ಆಡಳಿತ ಮಂಡಳಿಯ ಈ ಕ್ರಮ ವಿರೋಧಿಸಿ ಹಾಗೂ ಶಾಲೆಗೆ ಹೊಸದಾಗಿ ಶಿಕ್ಷಕರನ್ನು ನೇಮಿಸುವಂತೆ ಆಗ್ರಹಿಸಿ ಶಾಲೆಯ ನೂರಾರು ಮಕ್ಕಳು ಮತ್ತು ಪೋಷಕರು ಶಾಸಕ ಆರ್‌.ರೋಷನ್ ಬೇಗ್ ಮನೆ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಕೋಲ್ಸ್‌ ಪಾರ್ಕ್ ಬಳಿಯ ಸ್ಪೆನ್ಸರ್ ರಸ್ತೆಯಲ್ಲಿರುವ ರೋಷನ್ ಬೇಗ್ ನಿವಾಸದ ಮುಂದೆ ಜಮಾಯಿಸಿದ ಪೋಷಕರು, ಐಎಂಎ ಸಂಸ್ಥೆ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಕೆಲಕಾಲ ಪ್ರತಿಭಟನಾಕಾರರು, ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದರು. ಈ ವೇಳೆ ಶಾಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ವಾಹನ ಚಾಲಕರು ಪರದಾಡಿದರು. ಮನವೊಲಿಸಲು ಪೊಲೀಸರು ಪ್ರಯತ್ನಿಸಿದರೂ ಪ್ರತಿಭಟನಾಕಾರರು ಜಗ್ಗಲಿಲ್ಲ.

‘ನಮ್ಮ ಮಕ್ಕಳು ಬೀದಿಯಲ್ಲಿ ನಿಲ್ಲುವಂತಾಗಿದೆ. ಯಾವ ಜನಪ್ರತಿನಿಧಿಗಳೂ ಇತ್ತ ತಿರುಗಿ ನೋಡಿಲ್ಲ. ಇದೇ ಶಾಲೆಯಲ್ಲಿ ನಮ್ಮ ಮಕ್ಕಳು ವ್ಯಾಸಂಗ ಮಾಡಲು ಸರ್ಕಾರ ಅವಕಾಶ ಕಲ್ಪಿಸಬೇಕು’ ಎಂದು ಪೋಷಕರು ಮನವಿ ಮಾಡಿದರು.

* ವಿಕೆಒ ಶಾಲೆಗೆ ಹೊಸದಾಗಿ 28 ಸರ್ಕಾರಿ ಶಿಕ್ಷಕರನ್ನು ನೇಮಿಸಲಾಗುವುದು. ವಿದ್ಯಾರ್ಥಿಗಳಿಗೆ ತೊಂದರೆ ಆಗುವುದಿಲ್ಲ. ಶಾಂತವಾಗಿದ್ದರೆ ಎಲ್ಲವೂ ಶೀಘ್ರ ಸರಿಹೋಗಲಿದೆ

-ರೋಷನ್ ಬೇಗ್, ಶಿವಾಜಿ ನಗರ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.