ADVERTISEMENT

ಪುಣ್ಯಕೋಟಿಯಾಗದೆ ಹಕ್ಕಿಗಾಗಿ ಧ್ವನಿಯೆತ್ತಿ: ಒಕ್ಕಲಿಗ ಸಮುದಾಯಕ್ಕೆ ಅಶೋಕ ಕರೆ

ಒಕ್ಕಲಿಗ ಸಮುದಾಯಕ್ಕೆ ಆರ್‌.ಅಶೋಕ ಕರೆ *ಸಮುದಾಯದ ಸಾಧಕರಿಗೆ ‘ಒಕ್ಕಲಿಗ ರತ್ನ ಪ್ರಶಸ್ತಿ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 14:49 IST
Last Updated 2 ಆಗಸ್ಟ್ 2025, 14:49 IST
ಸಮಾರಂಭದಲ್ಲಿ ಜಯರಾಮ್ ರಾಯಪುರ, ಬಿ. ವೀರಪ್ಪ ಹಾಗೂ ಜಗ್ಗೇಶ್ ಅವರಿಗೆ ‘ಒಕ್ಕಲಿಗ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಆರ್. ಅಶೋಕ, ಸೌಮ್ಯನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ನಿಚ್ಚಲಾನಂದನಾಥ ಸ್ವಾಮೀಜಿ ಮತ್ತು ಸಂಘದ ರಾಜ್ಯಾಧ್ಯಕ್ಷ ಎನ್. ಮುನಿರಾಜುಗೌಡ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಸಮಾರಂಭದಲ್ಲಿ ಜಯರಾಮ್ ರಾಯಪುರ, ಬಿ. ವೀರಪ್ಪ ಹಾಗೂ ಜಗ್ಗೇಶ್ ಅವರಿಗೆ ‘ಒಕ್ಕಲಿಗ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಆರ್. ಅಶೋಕ, ಸೌಮ್ಯನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ನಿಚ್ಚಲಾನಂದನಾಥ ಸ್ವಾಮೀಜಿ ಮತ್ತು ಸಂಘದ ರಾಜ್ಯಾಧ್ಯಕ್ಷ ಎನ್. ಮುನಿರಾಜುಗೌಡ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಒಕ್ಕಲಿಗರು ಪುಣ್ಯಕೋಟಿಯಾಗದೆ ನ್ಯಾಯಯುತ ಹಕ್ಕಿಗಾಗಿ ಧ್ವನಿಯೆತ್ತಬೇಕು. ಜಾತಿ ಸಮೀಕ್ಷೆಯಂತಹ ಸಂದರ್ಭದಲ್ಲಿ ಅನ್ಯಾಯವಾದಾಗ ಒಗ್ಗಟ್ಟಿನಿಂದ ಪ್ರತಿಭಟಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಹೇಳಿದರು. 

ರಾಜ್ಯ ಒಕ್ಕಲಿಗ ಜಾಗೃತಿ ಸಂಘವು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಸಮಾರಂಭದಲ್ಲಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ, ನಟರೂ ಆದ ರಾಜ್ಯಸಭಾ ಸದಸ್ಯ ಜಗ್ಗೇಶ್ ಮತ್ತು ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತ ಜಯರಾಮ್ ರಾಯಪುರ ಅವರಿಗೆ ‘ಒಕ್ಕಲಿಗ ರತ್ನ ಪ್ರಶಸ್ತಿ’ ಹಾಗೂ ಐಎಎಸ್ ಅಧಿಕಾರಿ ಕೆ. ಜ್ಯೋತಿ ಅವರಿಗೆ ‘ತ್ಯಾಗಿ ಲಕ್ಷ್ಮೀದೇವಿ ಪ್ರಶಸ್ತಿ’ ಪ್ರದಾನ ಮಾಡಿ, ಮಾತನಾಡಿದರು. 

‘ಸಮುದಾಯದ ಯುವಕರಿಗೆ ಉದ್ಯೋಗ, ತಾಯಂದಿರಿಗೆ ಸಮಾಜದಲ್ಲಿ ಗೌರವ ಸಿಗಲು ನಮ್ಮ ಹಕ್ಕನ್ನು ಪ್ರತಿಪಾದಿಸಬೇಕು. ನಮ್ಮ ಮೂಲ ಕಸುಬು ಒಕ್ಕಲುತನವಾದ್ದರಿಂದ ನಾವು ಪುಣ್ಯಕೋಟಿಯಂತೆ ಆಗಿದ್ದೇವೆ. ನ್ಯಾಯಯುತ ಹಕ್ಕುಗಳಿಗೆ ಸಮುದಾಯ ಹೋರಾಟ ಮಾಡುವುದರಲ್ಲಿ ತಪ್ಪಿಲ್ಲ. ಎಲ್ಲ ಸಮುದಾಯಗಳೂ ತಮ್ಮ ಹಕ್ಕಿಗಾಗಿ ಹೋರಾಟ ಮಾಡಿ, ಸೌಲಭ್ಯಗಳನ್ನು ಪಡೆಯುತ್ತಿವೆ. ನಾವು ಸುಮ್ಮನಿದ್ದ ಪರಿಣಾಮ, ಕೆಂಪೇಗೌಡರ ಪ್ರತಿಮೆ ವಿಧಾನಸೌಧದ ಮುಂದೆ ಸ್ಥಾಪನೆಯಾಗಲು ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆಯಬೇಕಾಯಿತು’ ಎಂದರು. 

ADVERTISEMENT

ರಾಜ್ಯಸಭಾ ಸದಸ್ಯ ಜಗ್ಗೇಶ್, ‘ಒಕ್ಕಲಿಗ ಎಂದೊಡನೆ ರೈತ ವರ್ಗ ಕಣ್ಣ ಮುಂದೆ ಬರುತ್ತದೆ. ಈಗ ಸಮುದಾಯದವರು ವಿವಿಧ ಕ್ಷೇತ್ರಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ಆದರೆ, ನಮ್ಮ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆಯಿದೆ. ನಮ್ಮವರಿಗೆ ಅನ್ಯಾಯವಾದಾಗ ಪಕ್ಷಬೇಧ ಮರೆತು ನಾವು ಒಂದಾಗಬೇಕು’ ಎಂದು ಹೇಳಿದರು. 

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಸ್ಪಟಿಕಪುರಿ ಮಹಾ ಸಂಸ್ಥಾನದ ಪೀಠಾಧಿಪತಿ ನಂಜಾವಧೂತ ಸ್ವಾಮೀಜಿ, ‘ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುತ್ತಿರುವ ಪದವೀಧರರು, ತಂದೆ–ತಾಯಿಯನ್ನು ಕಡೆಗಣಿಸುತ್ತಿರುವುದು ಈ ಕಾಲದ ವಿಪರ್ಯಾಸ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕಾದ ಶಿಕ್ಷಣ ಸಂಸ್ಥೆಗಳು, ಯಂತ್ರ ಮಾನವರನ್ನು ತಯಾರಿಸುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು. 

ಇದೇ ವೇಳೆ ಸಮುದಾಯದ ಸಾಧಕರಿಗೆ ‘ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಬೆಂಗಳೂರು ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.  

ಮಕ್ಕಳಿಗೆ ವಿದ್ಯೆಯ ಜತೆಗೆ ಉತ್ತಮ ಸಂಸ್ಕಾರವನ್ನೂ ಒದಗಿಸಬೆಕು. ಅಧಿಕಾರ ಮತ್ತು ಸಂಪತ್ತಿಗಾಗಿ ಅಡ್ಡದಾರಿ ಹಿಡಿಯದೆ ನಿರಂತರ ಪರಿಶ್ರಮದಿಂದ ಸಾಧಿಸಬೇಕು
ಬಿ. ವೀರಪ್ಪ ಉಪ ಲೋಕಾಯುಕ್ತ ನ್ಯಾಯಮೂರ್ತಿ
ಸಮುದಾಯದ ಪದವೀಧರರು ಉದ್ಯೋಗಕ್ಕೆ ಸೀಮಿತವಾಗದೆ ಉದ್ಯಮಿಯಾಗಿ ಹೊರಹೊಮ್ಮಬೇಕು. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರಿನಲ್ಲಿ ಸಾಕಷ್ಟು ಅವಕಾಶಗಳಿವೆ
ಜಯರಾಮ್ ರಾಯಪುರ ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.