ADVERTISEMENT

ವೋಲ್ವೊ: ವರ್ಷಕ್ಕೆ 20 ಸಾವಿರ ಬಸ್‌, ಟ್ರಕ್‌ ಸಿದ್ಧ

ವೋಲ್ವೊ: ಹೊಸಕೋಟೆ ಘಟಕ ವಿಸ್ತರಣೆಗೆ ₹1,400 ಕೋಟಿ ಹೂಡಿಕೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2025, 13:36 IST
Last Updated 13 ಫೆಬ್ರುವರಿ 2025, 13:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಸ್ವೀಡನ್‌ ಮೂಲದ ವೋಲ್ವೊ ಕಂಪನಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಘಟಕದಲ್ಲಿ ವರ್ಷಕ್ಕೆ 20 ಸಾವಿರ ಬಸ್‌ ಮತ್ತು ಟ್ರಕ್ ತಯಾರಿಸಲು ಯೋಜನೆ ರೂಪಿಸಿದೆ.

ರಾಜ್ಯದಲ್ಲಿ ವೋಲ್ವೊ ಕಂಪನಿಯು ಪೀಣ್ಯ, ಹೊಸಕೋಟೆ ಮತ್ತು ಧಾರವಾಡ ಸಮೀಪದ ಪೀತಂಪುರದಲ್ಲಿ ತಯಾರಿಕಾ ಘಟಕಗಳನ್ನು ಹೊಂದಿದ್ದು, ಇಲ್ಲಿ ಮೂರು ಸಾವಿರ ಬಸ್, ಟ್ರಕ್‌ ತಯಾರಿಸಲಾಗುತ್ತಿದೆ. ಹೊಸಕೋಟೆ ಘಟಕಗಳನ್ನು ವಿಸ್ತರಿಸುವ ಸಲುವಾಗಿ ₹1,400 ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿದೆ.

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸಕ್ರಿಯವಾಗಿರುವ ವೋಲ್ವೊ ಸಂಸ್ಥೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಗುರುವಾರ ಒಡಂಬಡಿಕೆ ಮಾಡಿಕೊಂಡಿತು. ಒಡಂಬಡಿಕೆಗೆ ಸರ್ಕಾರದ ಪರವಾಗಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ವೋಲ್ವೊ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಾಲಿ ಸಹಿ ಹಾಕಿದರು. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಈ ಸಂದರ್ಭಕ್ಕೆ ಸಾಕ್ಷಿಯಾದರು.

ವೋಲ್ವೊ ಸಿಇಒ ಮಾರ್ಟಿನ್‌ ಲಾಂಡ್ಸ್‌ಟೆಡ್ಟ್‌ ಮಾತನಾಡಿ, ‘ಹೊಸಕೋಟೆ ಘಟಕದ ವಿಸ್ತರಣೆಯಿಂದ ವರ್ಷಕ್ಕೆ 20 ಸಾವಿರ ಬಸ್, ಟ್ರಕ್ ತಯಾರಿಸಬಹುದು. ಇದರಿಂದ ಉದ್ಯೋಗಸೃಷ್ಟಿಯ ಜತೆಗೆ ಸ್ಥಳೀಯ ಮಾರುಕಟ್ಟೆ ಅಗತ್ಯಗಳನ್ನೂ ಸರಾಗವಾಗಿ ಪೂರೈಸಲು ಸಾಧ್ಯವಾಗಲಿದೆ’ ಎಂದು ಹೇಳಿದರು.

ADVERTISEMENT

‘ಬೆಂಗಳೂರು ನಗರವು ಕಂಪನಿಯ ಪಾಲಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ 4ನೇ ಅತಿದೊಡ್ಡ ತಾಣವಾಗಿದೆ. ಇಲ್ಲಿನ ಜಿಸಿಸಿ ಕೇಂದ್ರದಲ್ಲಿ 3,500ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದು, ಇಲ್ಲಿ ಆರ್‌ ಆ್ಯಂಡ್‌ ಡಿ, ಐ.ಟಿ, ಖರೀದಿ, ಲಾಜಿಸ್ಟಿಕ್ಸ್ ಮತ್ತು ಹಣಕಾಸು ಸೇವೆಗಳನ್ನು ನಿರ್ವಹಿಸಲಾಗುತ್ತಿದೆ. ಕಂಪನಿಯ ವಹಿವಾಟು ವರ್ಷಕ್ಕೆ 50 ಬಿಲಿಯನ್ ಡಾಲರ್ ದಾಟಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.