ADVERTISEMENT

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ಯಾರಿಗೆ ಮತ? ಬ್ರಾಹ್ಮಣರ ವಾಗ್ವಾದ

ಹರಿಪ್ರಸಾದ್‌ ಪರ ಸಭೆ; ಮೋದಿ ಪರ ಘೋಷಣೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 13:38 IST
Last Updated 30 ಏಪ್ರಿಲ್ 2019, 13:38 IST
ಬಿ.ಕೆ. ಹರಿಪ್ರಸಾದ್ ಪರ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆ ಕೂಗಿದ ಬ್ರಾಹ್ಮಣ ಸಮುದಾಯದ ಮುಖಂಡರು
ಬಿ.ಕೆ. ಹರಿಪ್ರಸಾದ್ ಪರ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆ ಕೂಗಿದ ಬ್ರಾಹ್ಮಣ ಸಮುದಾಯದ ಮುಖಂಡರು   

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಬೆಂಬಲಿಗ ಬ್ರಾಹ್ಮಣ ಸಮುದಾಯದ‌ವರು ಸೋಮವಾರ ಪರಸ್ಪರ ವಿರುದ್ಧ ಘೋಷಣೆಗಳನ್ನು ಕೂಗಿದ್ದರಿಂದ ಕೆಲಹೊತ್ತು ‌ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಬನಶಂಕರಿ 2ನೇ ಹಂತದ ಬನಗಿರಿ ವರಸಿದ್ಧಿ ವಿನಾಯಕ ದೇಗುಲದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್ ಪರ ಬ್ರಾಹ್ಮಣ ಸಮುದಾಯದ ಸಭೆ ನಡೆಯುತ್ತಿತ್ತು. ಈ ಸಭೆಯಲ್ಲಿ ಕಾಂಗ್ರೆಸ್‌ನ ಮಂಜುಳಾ ನಾಯ್ಡು ಕೂಡ ಭಾಗವಹಿಸಿದ್ದರು.

‘ತೇಜಸ್ವಿನಿ ಅನಂತಕುಮಾರ್ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿಸಿರುವುದು ಸರಿಯಲ್ಲ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವುದು ಸೂಕ್ತ ಎಂಬ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಮುಖಂಡ ಸುದರ್ಶನ್ ಹೇಳಿದರು.

ADVERTISEMENT

‘ಮೋದಿ ಅವರಿಗಿಂತ ಮೊದಲು ಬಿಜೆಪಿಯಲ್ಲಿ ಇದ್ದವರು ಅನಂತಕುಮಾರ್, ಅವರ ಪತ್ನಿಗೆ ಟಿಕೆಟ್ ನೀಡದಿರುವುದು ಅವರಿಗೆ ಮಾಡಿದ ಅವಮಾನ’ ಎಂದು ಎಸ್. ಮುರಳಿ ತಿಳಿಸಿದರು.

ಸಭೆ ಇನ್ನೇನು ಮುಗಿಯುವ ಹೊತ್ತಿಗೆ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಬೆಂಬಲಿಗ ಬ್ರಾಹ್ಮಣ ಸಮುದಾಯದ ಕೆಲವರು ‘ಮೋದಿ ಮೋದಿ’ ಎಂದು ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪರ ಇದ್ದವರು ‘ರಾಹುಲ್ ರಾಹುಲ್’ ಎಂದು ಕೂಗಿದರು. ಎರಡೂ ಕಡೆಯವರು ಪೈಪೋಟಿಗೆ ಬಿದ್ದವರಂತೆ ಕೆಲಹೊತ್ತು ಘೋಷಣೆ ಮೊಳಗಿಸಿದರು.

ಹರಿಪ್ರಸಾದ್‌ಗೆ ಬೆಂಬಲ: ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಸುದರ್ಶನ್‌, ಶಂಕರ ಶಾಸ್ತ್ರಿ ಅವರು, ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್‌ ಕೊಡದೇ ಇರುವುದು ಖಂಡನೀಯ. ಈ ಕಾರಣದಿಂದಾಗಿ ವಿಪ್ರ ಸಮುದಾಯ ಹರಿಪ್ರಸಾದ್ ಅವರನ್ನು ಬೆಂಬಲಿಸಲು ನಿರ್ಧರಿಸಿದೆ ಎಂದರು.

‘ಬ್ರಾಹ್ಮಣರನ್ನೇ ಬೆಂಬಲಿಸಿ’

ಈ ನಡುವೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷಕೆ.ಎನ್. ವೆಂಕಟನಾರಾಯಣ, ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳಿಗೇ ಮತ ಹಾಕುವಂತೆ ಮನವಿ ಮಾಡಿದ್ದಾರೆ.

‘ಪ್ರಮುಖ ರಾಜಕೀಯ ಪಕ್ಷಗಳಿಂದ ವಿಪ್ರ ಸಮಾಜದವರು ಅಭ್ಯರ್ಥಿಗಳಾಗಿದ್ದರೆ ಅವರಿಗೇ ಮತ ಹಾಕಿ. ಇಬ್ಬರು ಅಭ್ಯರ್ಥಿ
ಗಳಿದ್ದರೆ ಅವರಲ್ಲಿ ಸಮಾಜದ ಕಾರ್ಯಗಳಿಗೆ ಸ್ಪಂದಿಸುವವರಿಗೆ ಮತ ನೀಡಿ. ಸಮುದಾಯದ ಅಭ್ಯರ್ಥಿಗಳು ಇಲ್ಲದಿದ್ದರೆ ಸಮಾಜದ ಕಾರ್ಯಗಳಿಗೆ ಸಹಕಾರ ನೀಡುವವರನ್ನು ಬೆಂಬಲಿಸಿ. ಎಲ್ಲರೂ ಮತದಾನದಲ್ಲಿ ತಪ್ಪದೇ ಭಾಗವಹಿಸಿ’ ಎಂದು ತಿಳಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.