ADVERTISEMENT

ರಾಜರಾಜೇಶ್ವರಿನಗರ: ಅನ್ಯರ ಮತದಾರರ ಗುರುತಿನ ಚೀಟಿ ಸಂಗ್ರಹಿಸಿದರೆ ಕಠಿಣ ಕ್ರಮ

ರಾಜರಾಜೇಶ್ವರಿನಗರ ಕ್ಷೇತ್ರದ ಉಪ ಚುನಾವಣೆ: ಜಿಲ್ಲಾ ಚುನಾವಣಾಧಿಕಾರಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 12:59 IST
Last Updated 19 ಅಕ್ಟೋಬರ್ 2020, 12:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ಕೆಲವರು ಮತದಾರರ ಗುರುತಿನ ಚೀಟಿ ಸಂಗ್ರಹಿಸುತ್ತಿರುವ ಹಾಗೂ ಕರೆ ಮಾಡಿ ಗುರುತಿನ ಚೀಟಿಯ ಸಂಖ್ಯೆಯನ್ನು ಪಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿದೆ. ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷಗಳು ಇಂತಹ ಅಕ್ರಮ ನಡೆಸಿದರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುನಾಥ ಪ್ರಸಾದ್‌ ಎಚ್ಚರಿಕೆ ನೀಡಿದರು.

ಚುನಾವಣಾ ಸಿದ್ಧತೆ ಬಗ್ಗೆ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಬೇರೆ ಮತದಾರರ ಗುರುತಿನ ಚೀಟಿಯ ಬಗ್ಗೆ ಮಾಹಿತಿ ಕೇಳುವುದು, ಬೇರೆಯವರಿಗೆ ಮಾಹಿತಿ ಒದಗಿಸುವುದು, ಮಾಹಿತಿ ನೀಡುವಂತೆ ಪ್ರೇರೇಪಿಸುವುದನ್ನು ಚುನಾವಣಾ ಅಕ್ರಮ ಎಂದೇ ಪರಿಗಣಿಸಬೇಕಾಗುತ್ತದೆ. ಇಂತಹ ತಪ್ಪೆಸಗುವವರಿಗೆ 1951ರ ಪ್ರಜಾಪ್ರತಿನಿಧಿ ಕಾಯ್ದೆ ಅಡಿ ದಂಡ ವಿಧಿಸಲು ಹಾಗೂ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವುದಕ್ಕೂ ಅವಕಾಶ ಇದೆ’ ಎಂದು ಸ್ಪಷ್ಟ ಪಡಿಸಿದರು.

‘ಮತದಾರರು ಯಾವುದೇ ಆಮಿಷಕ್ಕೆ ಒಳಗಾಗಬಾರದು. ಚುನಾವಣಾ ಅಕ್ರಮಗಳು ಕಂಡುಬಂದರೆ ದೂರು ನೀಡಬೇಕು’ ಎಂದು ಮನವಿ ಮಾಡಿದರು.

ADVERTISEMENT

2018ರ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದ ವ್ಯಾಪ್ತಿಯ ಜಾಲಹಳ್ಳಿಯ ಎಸ್‌ಎಲ್‌ವಿ ಪಾರ್ಕ್‌ ವ್ಯೂ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ 9,564 ಮತದಾರರ ಚೀಟಿಗಳು ಪತ್ತೆಯಾಗಿದ್ದವು. ಈ ಸಂಬಂಧ, ಆಗ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಮುನಿರತ್ನ ಸೇರಿದಂತೆ 14 ಮಂದಿ ವಿರುದ್ಧ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಚುನಾವಣಾ ಆಯೋಗವು 801 ಮಂದಿಯಿಂದ ಹೇಳಿಕೆ ಪಡೆದಿತ್ತು. ಆಮಿಷಕ್ಕೆ ಬಲಿಯಾಗಿ ಗುರುತಿನ ಚೀಟಿ ನೀಡಿದ್ದಾಗಿ ಮತದಾರರು ಹೇಳಿಕೆ ನೀಡಿದ್ದರು. ಬಳಿಕ ಚುನಾವಣಾ ಆಯೋಗವು ಈಕ್ಷೇತ್ರದ ಚುನಾವಣೆಯನ್ನು ಮೇ 28ಕ್ಕೆ ಮುಂದೂಡಿತ್ತು. ಮೇ 31ರಂದು ಮತ ಎಣಿಕೆ ನಡೆದಿತ್ತು.

79 ಸೂಕ್ಷ ಹಾಗೂ 11 ಅತಿ ಸೂಕ್ಷ್ಮ ಮತಗಟ್ಟೆ

ಆರ್‌.ಆರ್‌.ನಗರ ಕ್ಷೇತ್ರದಲ್ಲಿ ಒಟ್ಟು 79 ಸೂಕ್ಷ ಹಾಗೂ 11 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಈ ಹಿಂದೆ ಅತಿ ಹೆಚ್ಚು ಹಾಗೂ ಅತಿ ಕಡಿಮೆ ಮತದಾನ ಆಗಿರುವ ಮತಗಟ್ಟೆಗಳನ್ನು ಹಾಗೂ ಈ ಹಿಂದೆ ನಡೆದ ಘಟನೆಗಳು ಹಾಗೂ ಈಗಿ ಸ್ಥಿತಿಗತಿಯನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

‘ಈ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ 20 ಅಧಿಕಾರಿಗಳನ್ನು ಚುನಾವಣೆಯ ಸಂದರ್ಭದಲ್ಲಿ ವರ್ಗಾವಣೆ ಮಾಡಲಾಗಿದೆ. 55 ವರ್ಷ ಮೇಲ್ಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳುತ್ತಿಲ್ಲ. ಅನಿವಾರ್ಯ ಕಾರಣಗಳು ಇದ್ದರೆ ಚುನಾವಣಾ ಕರ್ತವ್ಯದಿಂದ ಸಿಬ್ಬಂದಿಗೆ ವಿನಾಯಿತಿ ನೀಡಲು ಅವಕಾಶ ಇದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮತಯಂತ್ರಗಳನ್ನು ಹಲಗೆವಡೇರಹಳ್ಳಿಯ ಕೆಂಚೇನಹಳ್ಳಿಯ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಇಡಲಾಗಿದೆ.

ಅಂಕಿ ಅಂಶ

*ಆರ್‌.ಆರ್‌.ನಗರ ಕ್ಷೇತ್ರದ ಒಟ್ಟು ಮತಗಟ್ಟೆಗಳು:678
* ಚುನಾವಣೆಗೆ ಬಳಸುತ್ತಿರುವ ವಿ.ವಿ.ಪ್ಯಾಟ್‌ ಯಂತ್ರಗಳು:1017
* ಚುನಾವಣೆಗೆ ಬಳಸುತ್ತಿರುವ ಮತಯಂತ್ರಗಳು:950

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.