ADVERTISEMENT

ಬಿಬಿಎಂಪಿ | ಇನ್ನೂ ಪರಿಷ್ಕರಣೆ ಆಗಿಲ್ಲ ಮತದಾರರ ಪಟ್ಟಿ

ಬಿಬಿಎಂಪಿಯ ಈಗಿನ ಕೌನ್ಸಿಲ್‌ ಅಧಿಕಾರಾವಧಿ ಇನ್ನು 28 ದಿನಗಳಷ್ಟೇ ಬಾಕಿ

ಪ್ರವೀಣ ಕುಮಾರ್ ಪಿ.ವಿ.
Published 11 ಆಗಸ್ಟ್ 2020, 21:54 IST
Last Updated 11 ಆಗಸ್ಟ್ 2020, 21:54 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಬಿಬಿಎಂಪಿಯ ಈಗಿನ ಚುನಾಯಿತ ಕೌನ್ಸಿಲ್‌ಗೆ 28 ದಿನಗಳ ಅಧಿಕಾರಾವಧಿ ಮಾತ್ರ ಬಾಕಿ ಉಳಿದಿದೆ. ಆದರೆ, ಚುನಾವಣೆ ನಡೆಸಲು ಅಗತ್ಯವಾದ ಮತದಾರರ ಪಟ್ಟಿಯೇ ಇನ್ನೂ ಸಿದ್ಧವಾಗಿಲ್ಲ!

ಪಾಲಿಕೆ ವಾರ್ಡ್‌ಗಳನ್ನು 2011ರ ಜನಗಣತಿ ಆಧಾರದಲ್ಲಿ ಮರುವಿಂಗಡಣೆ ಮಾಡಿರುವುದರಿಂದ ಬಹುತೇಕ ವಾರ್ಡ್‌ಗಳ ಗಡಿಗಳು ಬದಲಾಗಿವೆ. ಹಲವೆಡೆ ಮತಗಟ್ಟೆಗಳೂ ಬದಲಾಗಿವೆ. ಕೆಲವು ವಾರ್ಡ್‌ಗಳಿಗೆ ಹೊಸ ಪ್ರದೇಶಗಳು ಸೇರ್ಪಡೆಯಾಗಿರುವುದರಿಂದ ಹಾಗೂ ಮತ್ತೆ ಕೆಲವು ವಾರ್ಡ್‌ಗಳ ವ್ಯಾಪ್ತಿ ಕಡಿಮೆಯಾಗಿರುವುದರಿಂದ ಮತಗಟ್ಟೆಗಳ ವ್ಯಾಪ್ತಿಗೆ ಬರುವ ಒಟ್ಟು ಮತದಾರರ ಸಂಖ್ಯೆಗಳೂ ಬದಲಾಗಿವೆ. ಹಾಗಾಗಿ ಇಡೀ ಬಿಬಿಎಂಪಿ ವ್ಯಾಪ್ತಿಯ ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕಾಗುತ್ತದೆ. ಆದರೆ, ಈ ಕಾರ್ಯ ಇನ್ನೂ ಆರಂಭ ಆಗಿಲ್ಲ.

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಏನಿಲ್ಲವೆಂದರೂ ಒಂದೂವರೆ ತಿಂಗಳು ಕಾಲಾವಕಾಶ ಬೇಕು. ಈ ಕಾರ್ಯವನ್ನು ಬಿಬಿಎಂಪಿ ತಕ್ಷಣ ಆರಂಭಿಸಿದರೂ ಈಗಿನ ಕೌನ್ಸಿಲ್‌ನ ಅಧಿಕಾರಾವಧಿ ಮುಗಿಯುವುದಕ್ಕೆ ಮುನ್ನ ಮತದಾರರ ಪರಿಷ್ಕೃತ ಪಟ್ಟಿ ಸಿದ್ಧಪಡಿಸುವುದು ಕಷ್ಟಸಾಧ್ಯ. ಹಾಗಾಗಿ ಕೌನ್ಸಿಲ್‌ ಅವಧಿ ಮುಗಿಯುವ ಸೆ.10ಕ್ಕೆ ಮುನ್ನ ಚುನಾವಣೆ ನಡೆಯುವ ಸಾಧ್ಯತೆ ಇಲ್ಲವೇ ಇಲ್ಲ.

ADVERTISEMENT

‘ಹೊಸ ವಾರ್ಡ್‌ಗಳ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿದ ಬಳಿಕ ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕಾಗುತ್ತದೆ. ಪರಿಷ್ಕೃತ ಪಟ್ಟಿಯ ಪ್ರಕಾರ ಮತದಾರರು ಯಾವ ಮತಗಟ್ಟೆಯ ವ್ಯಾಪ್ತಿಗೆ ಬರುತ್ತಾರೆ ಎಂಬುದನ್ನು ಅವರಿಗೆ ತಿಳಿಸಬೇಕಾಗುತ್ತದೆ. ನಂತರವಷ್ಟೇ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಬಹುದು’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಕಾರ್ಯಕ್ಕೆ ಶೀಘ್ರವೇ ಚಾಲನೆ ನೀಡಲಿದ್ದೇವೆ. ಮತದಾರರ ಪರಿಷ್ಕೃತ ಪಟ್ಟಿಯನ್ನು ತಯಾರಿಸಲು ಒಂದು ವಾರ ಸಾಕು. ಆದರೆ, ಅದರ ಕರಡನ್ನು ಸಾರ್ವಜನಿಕವಾಗಿ ಪ್ರಕಟಿಸಿ ಅದಕ್ಕೆ ಸಲಹೆ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಕನಿಷ್ಠ 30 ದಿನಗಳ ಅವಕಾಶ ನೀಡಬೇಕಾಗುತ್ತದೆ. ಈ ಪ್ರಕ್ರಿಯೆಗೆ ಏನಿಲ್ಲವೆಂದರೂ ಒಂದರಿಂದ ಒಂದೂವರೆ ತಿಂಗಳ ಕಾಲಾವಕಾಶ ಬೇಕು’ ಎಂದು ಆಯುಕ್ತರು ವಿವರಿಸಿದರು.

‘ವಾರ್ಡ್‌ ಮರುವಿಂಗಡಣೆ ಆದ ಬಳಿಕ ಪ್ರತಿ ವಿಧಾನಸಭಾ ಕ್ಷೇತ್ರವಾರು ಯಾರು ಚುನಾವಣಾಧಿಕಾರಿಯಾಗಿದ್ದಾರೆ, ಅವರ ಅಧೀನ ಎಷ್ಟು ವಾರ್ಡ್‌ಗಳು ಬರಲಿವೆ ಎಂಬ ಮಾಹಿತಿಯನ್ನು ರಾಜ್ಯ ಚುನಾವಣಾ ಆಯೋಗ ಕೇಳಿತ್ತು. ಈ ಮಾಹಿತಿಯನ್ನು ಜುಲೈ 3ರಂದೇ ಕಳುಹಿಸಿದ್ದೇವೆ’ ಎಂದರು.

ಮುಖ್ಯಾಂಶಗಳು

* ವಾರ್ಡ್‌ಗಳ ವ್ಯಾಪ್ತಿ ಬದಲಾಗಿದ್ದರಿಂದ ಮತದಾರರ ಪಟ್ಟಿಯೂ ಬದಲಾಗಲಿದೆ

* ಪರಿಷ್ಕೃತ ಪಟ್ಟಿಯ ಮಾಹಿತಿಯನ್ನು ಮತದಾರರಿಗೆ ನೀಡುವುದು ಕಡ್ಡಾಯ

* ಪರಿಷ್ಕೃತ ಪಟ್ಟಿಗೆ ಆಕ್ಷೇಪ ಸಲ್ಲಿಸಲು 30 ದಿನ ಕಾಲಾವಕಾಶ ನೀಡಬೇಕು

* ಈಗಿನ ಕೌನ್ಸಿಲ್‌ ಅವಧಿಗೆ ಮುನ್ನ ಚುನಾವಣೆ ಕಷ್ಟಸಾಧ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.