ನೆಲಮಂಗಲ: ‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭೂಮಿಪೂಜೆ ನೆರವೇರಿಸಿದ ವೃಷಭಾವತಿ ಏತ ನೀರಾವರಿ ಯೋಜನೆಗೆ ವಿರೋಧ ಇಲ್ಲ. ಆದರೆ ಆ ನೀರನ್ನು ಎರಡು ಹಂತದ ಬದಲು ಮೂರು ಹಂತಗಳಲ್ಲಿ ಸಂಸ್ಕರಿಸಿ ಕೆರೆಗಳಿಗೆ ಹರಿಸಬೇಕು’ ಎಂದು ಜಾಗೃತ ನಾಗರಿಕ ವೇದಿಕೆಯ ಸಂಚಾಲಕ ಗಂಗಾಧರ್ ಕಾಸರಘಟ್ಟ ಮನವಿ ಮಾಡಿದರು.
‘ಎರಡು ಹಂತಗಳಲ್ಲಿ ಸಂಸ್ಕರಿಸಿದ ನೀರು ಕೃಷಿ ಹಾಗೂ ಮಾನವ ಉಪಯೋಗಕ್ಕೂ ಯೋಗ್ಯವಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಇತರೆ ವೈಜ್ಞಾನಿಕ ಸಂಸ್ಥೆಗಳು ವರದಿ ನೀಡಿವೆ. ಹೀಗಾಗಿ ಮೂರು ಹಂತದ ಸಂಸ್ಕರಣೆ ಅಗತ್ಯ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ನೆಲಮಂಗಲ, ತುಮಕೂರು ಸುತ್ತಮುತ್ತಲಿನ ಕೆರೆಗಳಿಗೆ ಸಂಸ್ಕರಿಸಿದ ನೀರು ಹರಿಸುವ ಮೊದಲು ವೈಜ್ಞಾನಿಕ ವರದಿ ತರಿಸಿಕೊಳ್ಳಲಿ. ಕೋಲಾರ-ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ ಇದರ ದುಷ್ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ. ರೋಗಗಳನ್ನು ತಂದೊಡ್ಡುವ ಈ ನೀರು ನಮಗೆ ಬೇಡ. ಬಿಡುವುದೇ ಆದರೆ, ಮೂರನೆ ಹಂತದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ಸಂಸ್ಕರಿಸಿ, ಪರೀಕ್ಷಿಸಿ ಬಿಡಿ’ ಎಂದರು.
‘ಪ್ರಕೃತಿದತ್ತವಾಗಿ ಹೇಮಾವತಿ ನೀರು ಶಿವಗಂಗೆ ಹಿಂಭಾಗದ ದೇವರಕೆರೆವರೆಗೂ ಬಂದಿದೆ. ಇಲ್ಲಿಂದ ಒಂದು ಪಂಪ್‌ಲಿಫ್ಟ್ ಮಾಡಿದರೆ ಸಾಕು, ಪ್ರಾಕೃತಿಕ ಇಳಿಜಾರಿನ ಮೂಲಕ ಸುಮಾರು 15 ಕೆರೆಗಳಿಗೆ ಹಾಗೂ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರು ಹರಿಯಲಿದೆ. ಇದನ್ನು ಶುದ್ಧೀಕರಿಸಿ ನೆಲಮಂಗಲಕ್ಕೆ ಕುಡಿಯುವ ನೀರನ್ನು ಪೂರೈಸಬಹುದು, ಸೋಂಪುರ ಕೈಗಾರಿಕಾ ಪ್ರದೇಶಕ್ಕೂ ಕೊಡಬಹುದು’ ಎಂದರು.
ವಿಜ್ಞಾನಿ ಜಿ.ಬೈರೇಗೌಡ ಮಾತನಾಡಿ, ‘ವೃಷಭಾವತಿ ವ್ಯಾಲಿ ನೀರು ಕುಡಿಯಲು ಯೋಗ್ಯವಲ್ಲ, ಕೃಷಿಗೆ ಬಳಸಬಹುದು ಎಂದು ಸರ್ಕಾರ ತಿಳಿಸಿದೆ. ಈ ನೀರಿನಲ್ಲಿ ಅಧಿಕ ರಾಸಾಯನಿಕ ಪೋಷಕಾಂಶಗಳಿರುವುದರಿಂದ ಬೆಳೆ ಚೆನ್ನಾಗಿಯೇ ಬರುತ್ತದೆ. ರಾಸಾಯನಿಕಗಳು ಹಣ್ಣು ತರಕಾರಿಗಳಲ್ಲಿ ಸೇರಿ ಮನುಷ್ಯನ ದೇಹ ಸೇರುತ್ತದೆ. ಮನುಷ್ಯರು ಈ ನೀರನ್ನು ಕುಡಿಯದೆ ಇರಬಹುದು, ಆದರೆ ಪ್ರಾಣಿ ಪಕ್ಷಿಗಳು ಕುಡಿಯುವುದನ್ನು ಹೇಗೆ ತಪ್ಪಿಸುತ್ತಾರೆ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.