ADVERTISEMENT

ಒಆರ್‌ಆರ್‌ ಮೆಟ್ರೊ ನಿಲ್ದಾಣದಲ್ಲಿ ವಾಕ್‌ ವೇಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2022, 20:17 IST
Last Updated 24 ಅಕ್ಟೋಬರ್ 2022, 20:17 IST
ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರ ಬುಧವಾರದಿಂದ ಪುನರಾರಂಭವಾಯಿತು. - ಪ್ರಜಾವಾಣಿ ಚಿತ್ರ. ಅನೂಪ್ ರಾಘ . ಟಿ.
ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರ ಬುಧವಾರದಿಂದ ಪುನರಾರಂಭವಾಯಿತು. - ಪ್ರಜಾವಾಣಿ ಚಿತ್ರ. ಅನೂಪ್ ರಾಘ . ಟಿ.   

ಬೆಂಗಳೂರು: ಹೊರವಲಯ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಮೆಟ್ರೊ ನಿಲ್ದಾಣಗಳಿಂದ ನೇರವಾಗಿ ಕಚೇರಿ ಬಾಗಿಲುಗಳಿಗೆ ಉದ್ಯೋಗಿಗಳು ತೆರಳಲು ಪಾದಚಾರಿ ಮಾರ್ಗ(ವಾಕ್‌ವೇ) ನಿರ್ಮಿಸಿಕೊಳ್ಳಲು ಐ.ಟಿ ಕಂಪನಿಗಳಿಗೆ ಬಿಎಂಆರ್‌ಸಿಎಲ್(ಬೆಂಗಳೂರು ಮೆಟ್ರೊ ರೈಲು ನಿಗಮ) ಅವಕಾಶ ಕಲ್ಪಿಸಿದೆ.

ಸಿಲ್ಕ್ ಬೋರ್ಡ್‌ ಜಂಕ್ಷನ್‌ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ತನಕ ಮೆಟ್ರೊ ರೈಲು ಮಾರ್ಗ ನಿರ್ಮಾಣವಾಗುತ್ತಿದೆ. ಇದರಲ್ಲಿ ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳ ತನಕ ನಿರ್ಮಾಣವಾಗುವ ನಿಲ್ದಾಣಗಳಿಂದ ಪ್ರತ್ಯೇಕ ಪಾದಚಾರಿ ಮಾರ್ಗಗಳನ್ನು ನಿರ್ಮಿಸಿಕೊಳ್ಳಲು ಕಂಪನಿಗಳು ಆಸಕ್ತಿ ವಹಿಸಿದರೆ ಅನುಮತಿ ನೀಡಲು ಬಿಎಂಆರ್‌ಸಿಎಲ್‌ ಸಮ್ಮತಿಸಿದೆ.

ಹೊರ ವರ್ತುಲ ರಸ್ತೆಯಲ್ಲಿನ ಕಂಪನಿಗಳ ಸಂಘದೊಂದಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಇತ್ತೀಚೆಗೆ ಸಭೆ ನಡೆಸಿದ್ದರು. ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆಯಾಗಿದೆ.

ADVERTISEMENT

‘ಪಾದಚಾರಿ ಮಾರ್ಗಗಳ ನಿರ್ಮಾಣದ ಬಗ್ಗೆ ಕಂಪನಿಗಳೇ ಯೋಜನೆ ಸಿದ್ಧಪಡಿಸಿ ಸಲ್ಲಿಸಬೇಕು. ಅದಕ್ಕೆ ತಗಲುವ ವೆಚ್ಚವನ್ನು ಆಯಾ ಕಂಪನಿಗಳೇ ಭರಿಸಿಕೊಳ್ಳಬೇಕು. ಸಾಧಕ–ಬಾಧಕ ಪರಿಶೀಲಿಸಿ ಅನುಮತಿ ನೀಡಲಾಗುವುದು’ ಎಂದು ಅಂಜುಂ ಪರ್ವೇಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳದ ತನಕ ಒಟ್ಟು 23 ನಿಲ್ದಾಣಗಳು ನಿರ್ಮಾಣವಾಗುತ್ತಿವೆ. ಈ ನಿಲ್ದಾಣಗಳಿಂದ ಪ್ರತ್ಯೇಕ ಪಾದಚಾರಿಗಳ ಮಾರ್ಗಗಳನ್ನು ನಿರ್ಮಿಸಿಕೊಳ್ಳಬಹುದು ಎಂದು ಅಧಿಕಾರಿಗಳು ವಿವರಿಸಿದರು.

‘ಮೆಟ್ರೊ ಪಿಲ್ಲರ್‌ಗಳಿಗೆ ಬಣ್ಣ ಬಳಿಯುವ ಮತ್ತು ರಸ್ತೆ ವಿಭಜಗಳ ಮಧ್ಯದಲ್ಲಿ ಕಿರು ಉದ್ಯಾನಗಳನ್ನು ಅಭಿವೃದ್ಧಿಪಡಿಸಲು ಅವಕಾಶ ಇದೆ. ಖಾಸಗಿ ಸಹಭಾಗಿತ್ವದಲ್ಲಿ ನಿರ್ವಹಣೆ ಮಾಡಬಹುದು. ಐ.ಟಿ ಕಂಪನಿಗಳು ಮುಂದೆ ಬಂದರೆ ಇದಕ್ಕೂ ಅವಕಾಶ ಕಲ್ಪಿಸುವ ಬಗ್ಗೆ ಬಿಎಂಆರ್‌ಸಿಎಲ್ ಚರ್ಚೆ ನಡೆಸಿದೆ’ ಎಂದು ಹೊರ ವರ್ತುಲ ರಸ್ತೆ ಕಂಪನಿಗಳ ಸಂಘದ ಪ್ರಧಾನ ವ್ಯವಸ್ಥಾಪಕ ಕೃಷ್ಣಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.