ADVERTISEMENT

ವಾರ್ಡ್‌ ಸಮಿತಿ ಬಲಪಡಿಸಲು ಮತ್ತಷ್ಟು ಅನುದಾನ

’ನನ್ನ ನಗರ, ನನ್ನ ಬಜೆಟ್‌‘: ₹60 ಲಕ್ಷ ಅನುದಾನ ಬಳಕೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 17:37 IST
Last Updated 22 ಜನವರಿ 2022, 17:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಬಿಬಿಎಂಪಿಯು 198 ವಾರ್ಡ್‌ ಸಮಿತಿಗಳಿಗೆ ಮಂಜೂರು ಮಾಡಿರುವ ತಲಾ ₹60 ಲಕ್ಷ ಅನುದಾನ ಏನಾಯಿತು, ವಾರ್ಡ್‌ ಸಮಿತಿಗಳು ಇವುಗಳನ್ನು ಸಮರ್ಥವಾಗಿ ಬಳಸಿಕೊಂಡಿವೆಯೇ, ಅವುಗಳನ್ನು ಬಳಸಿಕೊಳ್ಳಲು ಇರುವ ಅಡ್ಡಿ ಆತಂಕಗಳೇನು?

ಜನಾಗ್ರಹ ಸಂಸ್ಥೆಯು ‘ನನ್ನ ನಗರ, ನನ್ನ ಬಜೆಟ್‌‘ ಕುರಿತು ಶನಿವಾರ ಆಯೋಜಿಸಿದ್ದ ಈ ವೆಬಿನಾರ್‌ ಇಂತಹದ್ದೊಂದು ಚರ್ಚೆಗೆ ವೇದಿಕೆ ಕಲ್ಪಿಸಿತು. ಬಿಬಿಎಂಪಿ ಅಧಿಕಾರಿಗಳು, ನಗರ ಯೋಜನೆ ತಜ್ಞರು, ನಾಗರಿಕರು, ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಈ ಚರ್ಚೆಯಲ್ಲಿ ಪಾಲ್ಗೊಂಡರು.

ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ, ’ವಾರ್ಡ್ ಸಮಿತಿಗಳು ಗ್ರಾಮ ಸಭೆಗಳು ಇದ್ದ ಹಾಗೆ. ಪ್ರಸ್ತುತ, ಎಲ್ಲಾ ವಾರ್ಡ್‌ಗಳಲ್ಲಿ ನಿಯಮಿತವಾಗಿ ಸಭೆಗಳನ್ನು ನಡೆಸಲಾಗುತ್ತಿದೆ. ಪ್ರತಿ ವಾರ್ಡ್‌ಗೆ ₹60 ಲಕ್ಷ ಅನುದಾನ ನೀಡಲಾಗಿದೆ. ₹ 60 ಲಕ್ಷದಲ್ಲಿ ರಸ್ತೆಗಳಲ್ಲಿನ ಗುಂಡಿಗಳ ದುರಸ್ತಿಗೆ ₹20 ಲಕ್ಷ ಮೀಸಲಿಡಲಾಗಿದೆ‘ ಎಂದು ವಿವರಿಸಿದರು.

ADVERTISEMENT

‘ಜನಾಗ್ರಹ ಸಂಸ್ಥೆಯು ಪಾದಚಾರಿ ಮಾರ್ಗದ ಸ್ಥಿತಿಗತಿಗಳ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆ ಆಧಾರದಲ್ಲಿ ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ಪ್ರತಿ ವಾರ್ಡ್‌ಗೆ ತಲಾ ₹ 20 ಲಕ್ಷಗಳನ್ನು ವಾರ್ಡ್ ಸಮಿತಿ ಸದಸ್ಯರ ಸಲಹೆಯ ಮೇರೆಗೆ ಬಳಸಲಾಗುವುದು. ಬಿಬಿಎಂಪಿ ಸುಮಾರು 10 ಸಾವಿರ ಕೊಳವೆಬಾವಿಗಳನ್ನು ನಿರ್ವಹಿಸುತ್ತಿದೆ. ಇದಕ್ಕಾಗಿಯೇ ₹20 ಲಕ್ಷ ಮೀಸಲಿಡಲಾಗಿದೆ’ ಎಂದು ವಿವರಿಸಿದರು.

ಜನಾಗ್ರಹ ಸಂಸ್ಥೆಯ ನಾಗರಿಕ ವಿಭಾಗದ ಮುಖ್ಯಸ್ಥ ಶ್ರೀನಿವಾಸ್ ಅಲವಿಲ್ಲಿ, ‘ವಾರ್ಡ್ ಸಮಿತಿ ಸಭೆಗಳನ್ನು ನಡೆಸಬೇಕು. ಈ ಸಮಿತಿಗಳಿಗೆಂದೇ ಅನುದಾನವನ್ನು ನೀಡಿ ನಾಗರಿಕ ಸಹಭಾಗಿತ್ವವನ್ನು ಉತ್ತೇಜಿಸಬೇಕು. ಇದೊಂದು ಉತ್ತಮ ಆರಂಭ. ಇದು ಬೆಂಗಳೂರಿನಲ್ಲಿ ಮಾತ್ರವಲ್ಲ. ದೇಶದಾದ್ಯಂತ ನಡೆಯಬೇಕು’ ಎಂದು ಸಲಹೆ ನೀಡಿದರು.

ವಾರ್ಡ್‌ ಸಮಿತಿಗಳಿಗೆ ತಲಾ ₹60 ಲಕ್ಷ ಅನುದಾನವನ್ನು ಆಗಸ್ಟ್ 2021ರಲ್ಲಿ ಮಂಜೂರು ಮಾಡಲಾಗಿತ್ತು. ‘ನನ್ನ ನಗರ, ನನ್ನ ಬಜೆಟ್‌‘ ಕುರಿತಾದ ಸಮೀಕ್ಷೆಯಲ್ಲಿ ಸುಮಾರು ಒಂಬತ್ತು ಸಾವಿರ ನಾಗರಿಕರು ನೀಡಿದ ಸಲಹೆಗಳ ಆಧಾರದ ಮೇಲೆ ಅನುದಾನ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು.

ಅಹಮದಾಬಾದ್‌, ಮುಂಬೈ, ಭುವನೇಶ್ವರ, ಹೈದರಾಬಾದ್‌ ಮತ್ತು ಚೆನ್ನೈ ನಾಗರಿಕರು ಕೂಡ ವೆಬಿನಾರ್‌ನಲ್ಲಿ ಪಾಲ್ಗೊಂಡು, ಬೆಂಗಳೂರಿನಲ್ಲಿ ವಾರ್ಡ್ ಸಮಿತಿಗಳನ್ನು ಬಲಪಡಿಸಲು ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.