ಬೆಂಗಳೂರು: ಐದು ನಗರ ಪಾಲಿಕೆಗಳ ವಾರ್ಡ್ ಮರುವಿಂಗಡಣೆಗೆ ನಿಗದಿಪಡಿಸಿದ್ದ ಗಡುವು ಮೀರಿದ್ದು, ಮುಂದಿನವಾರ ಕರಡು ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಐದು ನಗರ ಪಾಲಿಕೆಗಳನ್ನು ರಚಿಸಿ ಸೆಪ್ಟೆಂಬರ್ 2ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ನೇತೃತ್ವದಲ್ಲಿ ‘ವಾರ್ಡ್‌ಗಳ ಪುನರ್ ವಿಂಗಡಣಾ ಆಯೋಗ’ವನ್ನು ರಚಿಸಿ, ಸೆಪ್ಟೆಂಬರ್ 23ರಂದು ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿತ್ತು.
ಸೆಪ್ಟೆಂಬರ್ 26ರಂದು ಐದೂ ನಗರ ಪಾಲಿಕೆಗಳ ವಾರ್ಡ್‌ಗಳ ಸಂಖ್ಯೆ, ಗಡಿಯನ್ನು ಗುರುತಿಸಿ, ಕರಡು ಅಧಿಸೂಚನೆಯನ್ನು ಹೊರಡಿಸುವುದಾಗಿ ನಗರಾಭಿವೃದ್ಧಿ ಇಲಾಖೆಯ ಸೆ.2ರಂದು ಅಧಿಸೂಚನೆ ಹೊರಡಿಸಿತ್ತು. ಆದರೆ, ಗಡುವಿನಲ್ಲಿ ವಾರ್ಡ್ ಮರು ವಿಂಗಡಣೆ ಕಾರ್ಯ ಮುಗಿದಿಲ್ಲ.
ವಾರ್ಡ್‌ಗಳ ಮರು ವಿಂಗಡಣೆ ವರದಿಯನ್ನು ಸಲ್ಲಿಸಬೇಕಾದ ಅವಧಿ ಮುಗಿದು ಮೂರು ದಿನವಾದರೂ ಆಯೋಗದ ಅಧಿಕಾರಿಗಳು ಅಂತಿಮ ಹಂತದ ತಯಾರಿಯಲ್ಲಿ ತೊಡಗಿದ್ದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಗುರುವಾರ ಸಭೆ ನಡೆದ ನಂತರ, ಹಲವು ಬದಲಾವಣೆಗಳನ್ನು ಮಾಡಬೇಕಾಗಿರುವುದರಿಂದ ವರದಿ ಸಲ್ಲಿಕೆ ವಿಳಂಬವಾಗಿದೆ ಎಂದು ಹೇಳಲಾಗಿದೆ.
ನಗರಾಭಿವೃದ್ದಿ ಇಲಾಖೆಯ ಗಡುವು
ಸೆಪ್ಟೆಂಬರ್ 23; ‘ವಾರ್ಡ್‌ಗಳ ಪುನರ್ ವಿಂಗಡಣಾ ಆಯೋಗ’ದಿಂದ ವಾರ್ಡ್ ರಚನಾ ವರದಿ ಸಲ್ಲಿಕೆ
ಸೆ.26; ಸರ್ಕಾರದಿಂದ ವಾರ್ಡ್‌ಗಳ ಕರಡು ಅಧಿಸೂಚನೆ ಪ್ರಕಟ
ಅಕ್ಟೋಬರ್ 10; ಸಾರ್ವಜನಿಕರಿಂದ ಸಲಹೆ/ ಆಕ್ಷೇಪಕ್ಕೆ ಅವಕಾಶ
ಅ.17; ಆಯೋಗ ಆಕ್ಷೇಪಣೆ ಪರಿಶೀಲಿಸಿ, ಅಂತಿಮ ಶಿಫಾರಸು ಸಲ್ಲಿಸುವುದು
ನವೆಂಬರ್ 1; ಸರ್ಕಾರದಿಂದ ವಾರ್ಡ್‌ಗಳ ಅಂತಿಮ ಅಧಿಸೂಚನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.