ADVERTISEMENT

ಬೆಂಗಳೂರು ಮಳೆ: ವಿಪತ್ತು ನಿರ್ವಹಣೆಗೆ ವಾರ್ಡ್‌ಗೊಬ್ಬ ಎಂಜಿನಿಯರ್‌

ನಿರಂತರ ಮಳೆ ಮುನ್ಸೂಚನೆ: ಮುಂಜಾಗ್ರತೆಗೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2023, 16:03 IST
Last Updated 7 ನವೆಂಬರ್ 2023, 16:03 IST
<div class="paragraphs"><p>&nbsp;ಬಿಬಿಎಂಪಿ</p></div>

 ಬಿಬಿಎಂಪಿ

   

ಬೆಂಗಳೂರು: ನಗರದಲ್ಲಿ ಇನ್ನೂ ಎರಡು–ಮೂರು ದಿನ ಮಳೆಯಾಗುವ ಮುನ್ಸೂಚನೆಯಿದ್ದು, ವಿಪತ್ತು ನಿರ್ವಹಣೆಗೆ ಪ್ರತಿ ವಾರ್ಡ್‌ನಲ್ಲಿ ಒಬ್ಬ ಎಂಜಿನಿಯರ್‌ಗೆ ಜವಾಬ್ದಾರಿ ವಹಿಸಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಸೂಚಿಸಿದ್ದಾರೆ.

ಸತತ ಮಳೆಯ ಹಿನ್ನೆಲೆಯಲ್ಲಿ ಬೆಸ್ಕಾಂ, ಬಿಡಬ್ಲ್ಯುಎಸ್‌ಎಸ್‌ಬಿ, ಪೊಲೀಸ್‌ ಇಲಾಖೆ, ನಮ್ಮ ಮೆಟ್ರೊದ ಅಧಿಕಾರಿಗಳೊಂದಿಗೆ ಮಂಗಳವಾರ ನಡೆದ ವರ್ಚ್ಯುವಲ್ ಸಭೆಯಲ್ಲಿ ಮುಂಜಾಗ್ರತೆ ವಹಿಸಲು ವಲಯ ಆಯುಕ್ತರಿಗೆ ಆದೇಶಿಸಿದರು.

ADVERTISEMENT

ವಿಪತ್ತು ನಿರ್ವಹಣೆ, ರಸ್ತೆ ಗುಂಡಿ, ಕಸದ ಸಮಸ್ಯೆ, ಪಾದಚಾರಿ ಮಾರ್ಗ ದುರಸ್ತಿಪಡಿಸಲು ಪ್ರತಿ ವಾರ್ಡ್‌ನಲ್ಲೂ ಪ್ರತ್ಯೇಕವಾಗಿ ಒಬ್ಬ ಎಂಜಿನಿಯರ್‌ಗೆ ಜವಾಬ್ದಾರಿ ನೀಡಬೇಕು. ಮೆಟ್ರೊ, ಬೆಸ್ಕಾಂ, ಜಲಮಂಡಳಿ ಕೆಲಸ ನಡೆಯುವ ಸ್ಥಳದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲಾದರೂ ಸಮಸ್ಯೆ ಇದ್ದರೆ ಅದಕ್ಕೆ ತಾತ್ಕಾಲಿಕ ಪರಿಹಾರ ನೀಡಿ, ನಂತರ ಶಾಶ್ವತ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದರು.

ತೂಬು ತೆಗೆಯಲು ಸೂಚನೆ: ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿರುವುದರಿಂದ ಬೆಳ್ಳಂದೂರು ಹಾಗೂ ವರ್ತೂರು ಕೆರೆಯ ಸ್ಲೂಯಿಸ್ ಗೇಟ್‌ಗಳನ್ನು  (ತೂಬು) ಕೂಡಲೇ ತೆಗೆದು ನೀರನ್ನು ಹೊರಬಿಡಬೇಕು ಎಂದು ಬಿಡಿಎ ಅಧಿಕಾರಿಗಳಿಗೆ ರಾಕೇಶ್‌ ಸಿಂಗ್‌ ಸೂಚಿಸಿದರು.

ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಜೋರು ಮಳೆಯಾಗುವ ಸಮಯದಲ್ಲಿ ರಸ್ತೆಗಳ ಮೇಲೆ ಹೆಚ್ಚು ನೀರು ನಿಂತು ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ರಸ್ತೆ ಮೇಲೆ ಬೀಳುವ ನೀರು ಚರಂಡಿಗಳಿಗೆ ಸರಾಗವಾಗಿ ಹರಿದು ಹೋಗುವ ನಿಟ್ಟಿನಲ್ಲಿ ಶೋಲ್ಡರ್ ಡ್ರೈನ್‌ಗಳ ಬಳಿ ಸ್ವಚ್ಛತೆ ಕಾಪಾಡಬೇಕು ಎಂದು ಆದೇಶಿಸಿದರು.

ಮೆಟ್ರೊ ಕಾಮಗಾರಿ ನಡೆಯುವ ಸ್ಥಳಗಳಲ್ಲಿನ ಬ್ಯಾರಿಕೇಡ್‌ಗಳಿಂದ ಮಳೆ ನೀರು ನಿಲ್ಲುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ಸಾಕಷ್ಟು ಸಮಸ್ಯೆಯಾಗಿದ್ದು, ಮೆಟ್ರೊ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ  ಸಮಸ್ಯೆ ಬಗೆಹರಿಸಬೇಕು ಎಂದರು.

ಮನೆಗಳಿಗೆ ನೀರು, ಪಟ್ಟಿಗೆ ಸೂಚನೆ

ನಗರದಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಎಷ್ಟು ಮನೆಗಳಿಗೆ ನೀರು ನುಗ್ಗಿದೆ ಎಂಬುದನ್ನು ವಲಯವಾರು ಪಟ್ಟಿಮಾಡಬೇಕು. ಅದಕ್ಕೆ ಪರಿಹಾರ ತ್ವರಿತವಾಗಿ ಪರಿಹಾರ ನೀಡಬೇಕು ಎಂದರು.

ಮಳೆಗಾಲದ ವೇಳೆ ಪಾಲಿಕೆಯ ಜೊತೆ ಅಗ್ನಿ ಶಾಮಕ ಇಲಾಖೆ, ಎಸ್.ಡಿ.ಆರ್.ಎಫ್ ಹಾಗೂ ಎನ್.ಡಿ.ಆರ್.ಎಫ್ ಇಲಾಖೆಗಳು ಕೈಜೋಡಿಸಲಿದ್ದಾರೆ. ಈ ಸಂಬಂಧ ಆಯಾ ವಲಯ ಆಯುಕ್ತರು ಸದರಿ ಇಲಾಖೆಗಳ ಜೊತೆ ನಿತ್ಯ ಸಂಪರ್ಕದಲ್ಲಿದ್ದು, ತುರ್ತು ಪರಿಸ್ಥಿತಿಯ ವೇಳೆ ಸದರಿ ಇಲಾಖೆಗಳ ಸಹಾಯ ಪಡೆದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದರು.

ಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಬೇಕು. ಮಳೆಗಾಲದ ವೇಳೆ ಕೋಲ್ಡ್ ಮಿಕ್ಸ್ ಅನ್ನು ಬಳಸಿ ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚಿಸಿದರು.

ಯೋಜನಾ ವಿಭಾಗದ ವಿಶೇಷ ಆಯುಕ್ತ ಡಾ. ತ್ರಿಲೋಕ್ ಚಂದ್ರ ಇದ್ದರು.

ನೋಡಲ್ ಅಧಿಕಾರಿಗಳ ನೇಮಕ

ಮಳೆ ಸಂದರ್ಭದಲ್ಲಿ ತುರ್ತು ನಿರ್ವಹಣೆ ಕಾಮಗಾರಿಗಳನ್ನು ಕೈಗೊಳ್ಳಲು ದಕ್ಷಿಣ ವಲಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳನ್ನು ನೋಡಲ್‌ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

ರಸ್ತೆ ಬದಿಯಲ್ಲಿ ನೀರು ನಿಲ್ಲದಂತೆ, ಮರದ ರಂಬೆ-ಕೊಂಬೆಗಳ ತೆರವು, ರಸ್ತೆ ಗುಂಡಿ ಮುಚ್ಚಲು, ಶೋಲ್ಡರ್ ಡ್ರೈನ್‌ನಲ್ಲಿರುವ ಹೂಳನ್ನು ತೆಗೆಯಲು, ಬೆಸ್ಕಾಂ, ಜಲಮಂಡಳಿ, ಆಗ್ನಿಶಾಮಕ ದಳ, ಅರಣ್ಯ ಇಲಾಖೆ ಹಾಗೂ ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಲ್‌ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ವಲಯ ಜಂಟಿ ಆಯುಕ್ತ ಕೆ. ಜಗದೀಶ್‌ ನಾಯ್ಕ್‌ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.