ADVERTISEMENT

ನಿವೇಶನ ಖರೀದಿಸುವ ಮುನ್ನ ಎಚ್ಚರ: ಬಿಡಿಎ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2020, 21:35 IST
Last Updated 30 ಡಿಸೆಂಬರ್ 2020, 21:35 IST
   

ಬೆಂಗಳೂರು: ನಗರದಲ್ಲಿ ಡಾ. ಶಿವರಾಮ ಕಾರಂತ ಬಡಾವಣೆ ರಚಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆದರೆ, ಈಗಾಗಲೇ ಈ ಪ್ರದೇಶದಲ್ಲಿ ಅನಧಿಕೃತ ಕಟ್ಟಡ ನಿರ್ಮಿಸಿ, ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸಾರ್ವಜನಿಕರು ಈ ಪ್ರದೇಶದಲ್ಲಿ ಜಮೀನು ಅಥವಾ ನಿವೇಶನ ಖರೀದಿಸುವಾಗ ಎಚ್ಚರ ವಹಿಸಬೇಕು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮನವಿ ಮಾಡಿದೆ.

ಈ ಅಧಿಸೂಚಿತ ಪ್ರದೇಶಗಳಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಿದ್ದಲ್ಲಿ, ಸುಪ್ರೀಂ ಕೋರ್ಟ್‌ ಆದೇಶದ ಅನುಸಾರ ಕಟ್ಟಡ ನೆಲಸಮಗೊಳಿಸಲಾಗುವುದು ಎಂದು ಹೇಳಿರುವ ಪ್ರಾಧಿಕಾರವು, ಅನಧಿಕೃತ ಕಟ್ಟಡಗಳು ನಿರ್ಮಾಣವಾಗುತ್ತಿರುವ ಬಗ್ಗೆ ಗಮನಕ್ಕೆ ಬಂದರೆ ಕೂಡಲೇ ಪ್ರಾಧಿಕಾರದ ಆಯುಕ್ತರು ಮತ್ತು ಜಾಗೃತ ದಳಕ್ಕೆ ದೂರು ನೀಡುವಂತೆ ನಾಗರಿಕರನ್ನು ಕೋರಿದೆ.

‘ಈ ಪ್ರದೇಶದಲ್ಲಿ ನಿವೇಶನ ಅಥವಾ ಜಮೀನು ಖರೀದಿಸುವಾಗ ಸಾರ್ವಜನಿಕರು ಪ್ರಾಧಿಕಾರವನ್ನು ಸಂಪರ್ಕಿಸಬೇಕು. ಅನಧಿಕೃತ ಕಟ್ಟಡಗಳ ಬಗ್ಗೆ ದೂರು ನೀಡಿದವರ ಗೋಪ್ಯತೆಯನ್ನು ಕಾಪಾಡಲಾಗುವುದು’ ಎಂದು ಬಿಡಿಎ ಪ್ರಕಟಣೆಯಲ್ಲಿ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.