ADVERTISEMENT

ಸಮಸ್ಯೆಯಾಗಿರುವ ಪಿ.ಜಿಗಳ ಕಸ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 19:27 IST
Last Updated 7 ಜುಲೈ 2019, 19:27 IST

ಬೆಂಗಳೂರು: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮನೆಗಳಿಂದ ಕಸ ಸಂಗ್ರಹಿಸುತ್ತಿದ್ದರೂ ದೊಡ್ಡ ಪ್ರಮಾಣದಲ್ಲಿ ಕಸ ಉತ್ಪತ್ತಿಯಾಗುವ ಪೇಯಿಂಗ್ ಗೆಸ್ಟ್‌ ವಸತಿ ಕಟ್ಟಡಗಳಿಂದ ಕಸ ಸಂಗ್ರಹಿಸುವ ಬಗ್ಗೆ ಬಿಬಿಎಂಪಿ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಪೇಯಿಂಗ್ ಗೆಸ್ಟ್‌ನಂತಹ ವಸತಿ ಪ್ರದೇಶದ ಕಟ್ಟಡಗಳಿಂದ ಗುತ್ತಿಗೆದಾರರು ಕಸ ಸಂಗ್ರಹಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಒಪ್ಪಿಗೆ ನೀಡಿಲ್ಲ. ಈವರೆಗೂ ಇಂತಹ ಸ್ಥಳಗಳಿಂದ ಕಸ ಸಂಗ್ರಹಿಸುವ ವ್ಯವಸ್ಥೆ ಇಲ್ಲವಾಗಿದ್ದು, ಖಾಲಿ ಜಾಗ, ಇತರ
ಪ್ರದೇಶಗಳಲ್ಲಿ ತಂದು ಸುರಿಯಲಾಗುತ್ತಿದೆ. ಎಲ್ಲೆಂದರಲ್ಲಿ ಕಸ ಹಾಕುವುದರಿಂದ ಸ್ವಚ್ಛತೆ ಮಾಯವಾಗಿ, ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಿದೆ. ಸಾಕಷ್ಟು ಕಡೆಗಳಲ್ಲಿ ದುರ್ವಾಸನೆಯಿಂದ ಜನರ ಬದುಕು ದುಸ್ತರವಾಗಿದೆ.

ನಗರದಲ್ಲಿ ದಿನದಿಂದ ದಿನಕ್ಕೆ ಪೇಯಿಂಗ್ ಗೆಸ್ಟ್ ನಡೆಸುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇಲ್ಲಿ ವಾಸಿಸುವ ಜನರ ಸಂಖ್ಯೆಯೂ ಅಧಿಕವಾಗಿದೆ. ಮಾಹಿತಿ ತಂತ್ರಜ್ಞಾನ ಕಂಪನಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳ ಸುತ್ತಮುತ್ತ ಪಿ.ಜಿಗಳು ಅಧಿಕ ಸಂಖ್ಯೆಯಲ್ಲಿವೆ.ಈ ಭಾಗದಲ್ಲಿ ಜನಸಂಖ್ಯೆ ಪ್ರಮಾಣವೂ ಹೆಚ್ಚುತ್ತಿದ್ದು, ಕಸ ನಿರ್ವಹಣೆ ಸಮಸ್ಯೆಯೂ ದೊಡ್ಡದಾಗುತ್ತಿದೆ.

ADVERTISEMENT

ನಗರದ ಪೂರ್ವ ಭಾಗದ ಮಹದೇವಪುರ, ಕೆ.ಆರ್.ಪುರಂ ಹಾಗೂ ಇದಕ್ಕೆ ಹೊಂದಿಕೊಂಡಂತೆ ಇರುವ ಬಡಾವಣೆಗಳಲ್ಲಿಪೇಯಿಂಗ್ ಗೆಸ್ಟ್‌ ನಡೆಸುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಒಂದು ಅಂದಾಜಿನ ಪ್ರಕಾರ ಮಹದೇವಪುರ ಸುತ್ತಮುತ್ತ 350ಕ್ಕೂ ಹೆಚ್ಚು ಇಂತಹ ಕೇಂದ್ರಗಳಿವೆ.ದುಬಾರಿ ಬಾಡಿಗೆ ಕಟ್ಟಲಾಗದವರು, ಕಡಿಮೆ ಬಾಡಿಗೆಗೆ ಸಿಗುವಪೇಯಿಂಗ್ ಗೆಸ್ಟ್‌ನಂತಹ ವಸತಿ ಪ್ರದೇಶಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಉದ್ಯೋಗ ನಿಮಿತ್ತ ನಗರಕ್ಕೆ ಬಂದ ಸಾಕಷ್ಟು ಒಬ್ಬಂಟಿ ಮಹಿಳೆಯರು ಸುರಕ್ಷತೆ ದೃಷ್ಟಿಯಿಂದ ಆದ್ಯತೆ ನೀಡುತ್ತಾರೆ. ಐಟಿ ಕಂಪನಿಗಳೂ ಚೌಕಾಸಿ ನಡೆಸಿ ಇಂತಹ ಕಡೆಗಳಲ್ಲಿ ತಮ್ಮ ಉದ್ಯೋಗಿಗಳಿಗೆ ಕಡಿಮೆ ಮೊತ್ತಕ್ಕೆ ವಸತಿ ಕಲ್ಪಿಸುತ್ತವೆ. ಹಾಗಾಗಿ ಇವುಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ.

‘ಪಿ.ಜಿ ನಡೆಸುವ ಮಾಲೀಕರಿಗೆ ಯಾವುದೇ ನಿಯಂತ್ರಣ ಇಲ್ಲವಾಗಿದ್ದು, ನಿಯಮಗಳ ಪಾಲನೆಯೂ ಆಗುತ್ತಿಲ್ಲ. ಬಾಡಿಗೆದಾರರಿಗೆ ಕಸ ವಿಲೇವಾರಿಗೆ ಮಾಲೀಕರೂಯಾವುದೇ ವ್ಯವಸ್ಥೆ ಮಾಡಿರುವುದಿಲ್ಲ.ಪಿ.ಜಿಗಳನ್ನು ಬೃಹತ್ ಪ್ರಮಾಣದ ಕಸ ಉತ್ಪತ್ತಿ ತಾಣಗಳೆಂದು ಪರಿಗಣಿಸಿ, ಸಂಗ್ರಹಿಸಲು ಗುತ್ತಿಗೆದಾರರಿಗೆ ಬಿಬಿಎಂಪಿ ಅನುಮತಿ ನೀಡಬೇಕು. ಇದರಿಂದ ಸ್ವಚ್ಛತೆ ಕಾಡಲು ಸಾಧ್ಯವಾಗಲಿದೆ’ ಎಂದು ಮಹದೇವಪುರ ಬಡಾವಣೆಯ ನಿವಾಸಿ ಅಂಜಲಿ ಶೈಲಿ ಒತ್ತಾಯಿಸುತ್ತಾರೆ.

ಉದ್ಯೋಗಿಗಳು ಒಂದೊಂದು ಶಿಫ್ಟ್‌ನಲ್ಲಿ ಕೆಲಸ ಮಾಡುವುದರಿಂದ ಮನೆಗಳಿಗೆ ಬರುವ ಸಮಯದಲ್ಲಿ ವ್ಯತ್ಯಾಸ ಇರುತ್ತದೆ. ಕಸ ಸಂಗ್ರಹಿಸುವವರು ಬಂದಾಗ ಮನೆಗಳಲ್ಲಿ ಇರುವುದಿಲ್ಲ. ಹಾಗಾಗಿ ಪಿ.ಜಿಗಳನ್ನು ಅಪಾರ್ಟ್‌ಮೆಂಟ್ ವಸತಿ ಪ್ರದೇಶಗಳೆಂದು ಪರಿಗಣಿಸಿ, ಕಸ ವಿಂಗಡಿಸಲು ಪ್ರತ್ಯೇಕ ವ್ಯವಸ್ಥೆ ಮಾಡಿಸಂಗ್ರಹಿಸಬೇಕು. ಈ ನಿಯಮ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

‘ಪಿ.ಜಿಗಳಿಂದ ನಿಯಮಿತವಾಗಿ ಕಸ ಸಂಗ್ರಹಿಸಲಾಗುತ್ತಿದೆ. ಆದರೆ ಇಂತಹ ಕಟ್ಟಡಗಳಿಂದ ಕಸ ಸಂಗ್ರಹ ಸಂಬಂಧ ಯಾವುದೇ ಸ್ಪಷ್ಟ ನಿಯಮಾವಳಿಗಳಿಲ್ಲ’ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

‘ಪಿ.ಜಿ ಸೌಲಭ್ಯ ಕಲ್ಪಿಸಿರುವ ಕಟ್ಟಡಗಳು ವಸತಿ ನಿಯಮಗಳನ್ನು ಪಾಲಿಸುತ್ತಿಲ್ಲ. ವಾಹನಗಳ ಪಾರ್ಕಿಂಗ್‌ಗೆ ಸ್ಥಳಾವಕಾಶ ಕಲ್ಪಿಸಿರುವುದಿಲ್ಲ. ಇವುಗಳ ನಿಯಂತ್ರಣಕ್ಕೆ ಸರ್ಕಾರ ನಿಯಮಾವಳಿ ರೂಪಿಸುತ್ತಿದ್ದು, ಬಿಡಿಎ ಮಾಸ್ಟರ್ ಯೋಜನೆಯಲ್ಲಿ ಪರಿಹಾರ ಸಿಗಲಿದೆ’ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.