ADVERTISEMENT

ಹಸಿ–ಒಣ ಕಸ ಬೇರ್ಪಡಿಸುವುದು ಇನ್ನು ಕಡ್ಡಾಯ

ಕಸ ವಿಂಗಡಿಸುವುದಿಲ್ಲವೇ... ದಂಡ ಕಟ್ಟಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2018, 20:18 IST
Last Updated 26 ಡಿಸೆಂಬರ್ 2018, 20:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹಸಿ ಮತ್ತು ಒಣ ಕಸ ಬೇರ್ಪಡಿಸದೇ ನೀಡಿದರೆ ಇನ್ನು ಪೌರಕಾರ್ಮಿಕರು ಅದನ್ನು ಒಯ್ಯುವುದಿಲ್ಲ. ಅಷ್ಟೇ ಅಲ್ಲ, ಕಸ ವಿಂಗಡಣೆ ಮಾಡದಿರುವುದಕ್ಕೆ ಬಿಬಿಎಂಪಿ ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ದಂಡ ವಿಧಿಸಲಿದ್ದಾರೆ.

ಹಸಿ ಕಸ ಮತ್ತು ಒಣ ಕಸ ಸಂಗ್ರಹಣೆ ಕುರಿತ ಟೆಂಡರ್‌ ಪ್ರಕ್ರಿಯೆಯನ್ನು ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲು ಸಿದ್ಧತೆ ನಡೆಸಿರುವ ಬಿಬಿಎಂಪಿ, ಕಸ ವಿಲೇವಾರಿ ವ್ಯವಸ್ಥೆಯಲ್ಲಿ ಕಟ್ಟುನಿಟ್ಟಿನ ಸುಧಾರಣೆ ತರಲು ಮುಂದಾಗಿದೆ.

ಈ ಸಲುವಾಗಿ, ಮಿಶ್ರ ಕಸವನ್ನು ಪಡೆಯಲು ಪೌರ ಕಾರ್ಮಿಕರು ನಿರಾಕರಿಸುವುದಕ್ಕೆ ಅವಕಾಶ ಕಲ್ಪಿಸುವ ನಿಯಮ ರೂಪಿಸಲಿದೆ. ಮೂಲದಲ್ಲೇ ಕಸ ವಿಂಗಡಣೆ ಮಾಡುವುದನ್ನು ಕಡ್ಡಾಯಗೊಳಿಸಲು ನಾನಾ ಕ್ರಮಗಳನ್ನು ಅನುಸರಿಸಿ ಕೈಸೋತಿರುವ ಪಾಲಿಕೆ, ಕೊನೆಯ ಅಸ್ತ್ರವಾಗಿ ನಿಯಮ ಪಾಲಿಸದವರಿಗೆ ದಂಡ ವಿಧಿಸುವ ತಂತ್ರದ ಮೊರೆ ಹೋಗಲು ಚಿಂತನೆ ನಡೆಸಿದೆ.

ADVERTISEMENT

‘ಕಸವನ್ನು ಮೂಲದಲ್ಲೇ ಬೇರ್ಪಡಿಸುವ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದೆ. 2017ರಲ್ಲಿ ಶೇ 80ರಷ್ಟು ಕಸ ವಿಂಗಡಣೆ ಆಗಿತ್ತು. 2018ರಲ್ಲಿ ಈ ಪ್ರಮಾಣ ಏಕಾಏಕಿ ಶೇ 25ಕ್ಕೆ ಕುಸಿಯಿತು. ನಾವು ಪ್ರಯೋಗಿಸುತ್ತಿರುವ ಕಟ್ಟಕಡೆಯ ಅಸ್ತ್ರದಿಂದಲಾದರೂ ಜನ ಕಸವನ್ನು ಸಮರ್ಪಕವಾಗಿ ಬೇರ್ಪಡಿಸುತ್ತಾರೋ ನೋಡಬೇಕು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಕಸ ವಿಂಗಡಣೆ ಮಾಡದಿದ್ದರೆ ಪೌರಕಾರ್ಮಿಕರು ಅದನ್ನು ಒಯ್ಯುವುದಿಲ್ಲ. ನಿಯಮ ಪಾಲನೆ ಆಗುವಂತೆ ನೋಡಿಕೊಳ್ಳಲು ಇದಕ್ಕಿಂತ ಉತ್ತಮ ವಿಧಾನ ಬೇರೆ ಇಲ್ಲ’ ಎಂದರು.

‘ಕಸ ವಿಂಗಡಿಸಿ ಕೊಡದವರಿಗೆ ದಂಡ ವಿಧಿಸುವುದಕ್ಕೆ ಈ ಹಿಂದೆಯೂ ಅವಕಾಶವಿತ್ತು. ಆದರೆ ಇನ್ನು, ಯಾರೆಲ್ಲ ಮಿಶ್ರ ಕಸವನ್ನು ನೀಡುತ್ತಿದ್ದಾರೆ ಎಂಬ ಬಗ್ಗೆ ಪೌರಕಾರ್ಮಿಕರು ಪಾಲಿಕೆಗೆ ಮಾಹಿತಿ ನೀಡುತ್ತಾರೆ. ವಲಯ ಮಟ್ಟದ ಅಧಿಕಾರಿಗಳು ಮರುದಿನ ಅಂತಹವರ ಮನೆಗೆ ಭೇಟಿ ನೀಡಿ ದಂಡ ವಿಧಿಸಲಿದ್ದಾರೆ’ ಎಂದು ಕಸ ನಿರ್ವಹಣೆ ವಿಭಾಗದ ಇನ್ನೊಬ್ಬರು ಅಧಿಕಾರಿ ಮಾಹಿತಿ ನೀಡಿದರು.

‘ಮಿಶ್ರ ಕಸವನ್ನು ಕೊಡುವವರ ವಿರುದ್ಧ ಮಾತ್ರವಲ್ಲ, ಅದನ್ನು ಪೌರ ಕಾರ್ಮಿಕರು ಪಡೆದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ’ ಎಂದು ಅವರು ತಿಳಿಸಿದರು.

ಭಾರಿ ಪ್ರಮಾಣದಲ್ಲಿ ಕಸ ಉತ್ಪಾದಿಸುವ ಮಳಿಗೆಗಳು, ಅಪಾರ್ಟ್‌ಮೆಂಟ್‌ ಸಮುಚ್ಚಯಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಪಬ್‌ಗಳಿಗೂ ಹೊಸ ನಿಯಮ ಅನ್ವಯವಾಗುತ್ತದೆ. ಹೊಸ ನಿಯಮ ಜಾರಿಗೊಳಿಸುವುದರ ಜೊತೆಗೆ ಕಸ ಸಂಸ್ಕರಣ ಘಟಕಗಳೂ ಪರಿಣಾಮಕಾರಿಯಾಗಿ ಕಾರ್ಯಾಚರಿಸುವಂತೆ ಮಾಡುವುದಕ್ಕೂ ಪಾಲಿಕೆ ಕಾರ್ಯಕ್ರಮ ರೂಪಿಸುತ್ತಿದೆ.

* ಮಿಶ್ರ ಕಸ ನೀಡುವವರ ಬಗ್ಗೆ ಪಾಲಿಕೆಗೆ ಮಾಹಿತಿ ಕೊಡಲಿದ್ದಾರೆ ಪೌರಕಾರ್ಮಿಕರು

* ದೂರು ಬಂದ ಮರುದಿನವೇ ಮನೆಗೆ ಭೇಟಿ ನೀಡಲಿದ್ದಾರೆ ಪಾಲಿಕೆ ಅಧಿಕಾರಿಗಳು

* ಬೇರ್ಪಡಿಸದ ಕಸ ಸ್ವೀಕರಿಸಿದರೆ ಪೌರಕಾರ್ಮಿಕರ ವಿರುದ್ಧವೂ ಕ್ರಮ

* ಕಸ ಸಂಸ್ಕರಣಾ ಘಟಕಗಳ ಪರಿಣಾಮಕಾರಿ ನಿರ್ವಹಣೆಗೆ ಮುಂದಾದ ಪಾಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.