ADVERTISEMENT

ಕಸ ವಿಲೇವಾರಿ ಅಕ್ರಮ– ತನಿಖೆ ಹೊಣೆ ಎಸಿಬಿಗೆ

ತ್ಯಾಜ್ಯ ವಿಲೇವಾರಿ ಮೊತ್ತ ₹385 ಕೋಟಿಯಿಂದ ₹1,066 ಕೋಟಿಗೆ ಏರಿಕೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 19:59 IST
Last Updated 28 ಜೂನ್ 2019, 19:59 IST
..
..   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕಸ ವಿಲೇವಾರಿ ಅಕ್ರಮದ ತನಿಖೆಯನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ವಹಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

6,600 ನಕಲಿ ಪೌರಕಾರ್ಮಿಕರ ಹೆಸರಿನಲ್ಲಿ ₹550 ಕೋಟಿ ವೇತನ, ಪಿಎಫ್‌ ಹಾಗೂ ಇಎಸ್ಐ ಪಾವತಿ ಹೆಸರಿನಲ್ಲಿ ಪಾಲಿಕೆಗೆ ₹384 ಕೋಟಿ ವಂಚನೆ ಮಾಡುತ್ತಿರುವ ಗುತ್ತಿಗೆದಾರರು ಮತ್ತು ಅಕ್ರಮಕ್ಕೆ ಸಹಕರಿಸುವ ಅಧಿಕಾರಿಗಳ ವಿರುದ್ಧ ಸಿಐಡಿ ತನಿಖೆಗೆ ಆದೇಶಿಸಬೇಕು ಎಂದು ಪಾಲಿಕೆಯ ಆಯುಕ್ತರು 2016ರ ಡಿಸೆಂಬರ್‌ನಲ್ಲಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು. ಈ ಪ್ರಕರಣವನ್ನು 2017ರಲ್ಲಿ ಎಸಿಬಿಗೆ ವಹಿಸಲಾಗಿತ್ತು.

ಪಾಲಿಕೆಯಲ್ಲಿ ಕಸ ವಿಲೇವಾರಿಗೆ 2016ರ ವರೆಗೆ ವರ್ಷಕ್ಕೆ ₹385 ಕೋಟಿ ವೆಚ್ಚ ಮಾಡಲಾಗುತ್ತಿತ್ತು. ಈ ಮೊತ್ತ ಏಕಾಏಕಿ ₹1,066 ಕೋಟಿಗೆ ಏರಿದ್ದು, ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ನಗರ ಘಟಕದ ವಕ್ತಾರ ಎನ್‌.ಆರ್‌.ರಮೇಶ್‌ ಆರೋಪಿಸಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ 2017ರಲ್ಲಿ ದೂರು ಸಲ್ಲಿಸಿದ್ದರು. ಈ ಪ್ರಕರಣ ಸಹ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ–1988ರ ವ್ಯಾಪ್ತಿಗೊಳಪಡುತ್ತಿದ್ದು, ಇದನ್ನೂ ಎಸಿಬಿಗೆ ವಹಿಸಲಾಗಿದೆ ಎಂದು ಜೂನ್‌ 19ರಂದು ಆದೇಶ ಹೊರಡಿಸಲಾಗಿದೆ.

ADVERTISEMENT

ದೂರಿನಲ್ಲಿ ಏನಿತ್ತು: ಪಾಲಿಕೆಯು 2016ರ ಫೆಬ್ರುವರಿ ವರೆಗೆ ಗುತ್ತಿಗೆದಾರರಿಗೆ ವರ್ಷವೊಂದಕ್ಕೆ ₹236 ಕೋಟಿ ಪಾವತಿಸುತ್ತಿತ್ತು. ತ್ಯಾಜ್ಯ ವಿಲೇವಾರಿ ಕಾರ್ಯಕ್ಕೆ ₹385 ಕೋಟಿ ಖರ್ಚು ಮಾಡುತ್ತಿತ್ತು. ಗುತ್ತಿಗೆದಾರರಿಗೆ ಕೊಡುವ ಮೊತ್ತ ಏಕಾಏಕಿ ₹924 ಕೋಟಿಗೆ ಹಾಗೂ ಕಸ ವಿಲೇವಾರಿಯ ಮೊತ್ತ ₹1,066 ಕೋಟಿಗೆ ಏರಿದೆ. ಇದರಿಂದ ಗುತ್ತಿಗೆದಾರರಿಗೆ ಸಂದಾಯವಾಗುವ ಮೊತ್ತದಲ್ಲಿ ಶೇ 265 ಹಾಗೂ ಕಸ ವಿಲೇವಾರಿಗೆ ತಗಲುವ ವೆಚ್ಚದಲ್ಲಿ ಶೇ 365ರಷ್ಟು ಹೆಚ್ಚಳವಾಗಿದೆ ಎಂದು ರಮೇಶ್‌ ದೂರಿದ್ದರು.

‘ಇದೇ ಅವಧಿಯಲ್ಲಿ ಗುತ್ತಿಗೆ ಪೌರಕಾರ್ಮಿಕರಿಗೆ ತಿಂಗಳಿಗೆ ₹17,053 ಪಾವತಿಸಬೇಕಾಗಿದ್ದು, ಅವರ ವೇತನ ಹೆಚ್ಚಿಸಿಲ್ಲ. 2,734 ಕಾಯಂ ಪೌರ ಕಾರ್ಮಿಕರು, 232 ಕಿರಿಯ ಆರೋಗ್ಯ ಪರಿವೀಕ್ಷಕರು, ಮೇಸ್ತ್ರಿಗಳು, ಕಸ ವಿಲೇವಾರಿ ವಾಹನಗಳ ಚಾಲಕರಿಗೆ ವರ್ಷಕ್ಕೆ ₹75.24 ಕೋಟಿ ವೇತನ ನೀಡುತ್ತಿದೆ. 48 ಕಾಂಪ್ಯಾಕ್ಟರ್‌ ನಿರ್ವಹಣೆಗೆ ವರ್ಷಕ್ಕೆ ₹8.17 ಕೋಟಿ ಖರ್ಚು. ಗುತ್ತಿಗೆ ಪೌರ ಕಾರ್ಮಿಕರ ನಕಲಿ ದಾಖಲೆಗಳನ್ನು ಗುತ್ತಿಗೆದಾರರು ಸೃಷ್ಟಿಸಿದ್ದಾರೆ’ ಎಂದು ಆರೋಪಿಸಿದ್ದರು.

ಈ ದೂರಿನ ತನಿಖೆಯನ್ನು ಎಸಿಬಿ ನಡೆಸಿತ್ತು. ಇದರ ವಿಚಾರಣೆಗೆ ತಾಂತ್ರಿಕ ಪರಿಣಿತಿಯ ಅಗತ್ಯ ಇದ್ದು, ಎಸಿಬಿಯಲ್ಲಿ ತಾಂತ್ರಿಕ ಅಧಿಕಾರಿಗಳ ಕೊರತೆ ಇದೆ. ಹೀಗಾಗಿ, ಇದನ್ನು ನಗರಾಭಿವೃದ್ಧಿ ಇಲಾಖೆಯ ವಿಚಕ್ಷಣಾ ದಳಕ್ಕೆ ವಹಿಸಿ ಆರೋಪ ನಿಜವೆಂದು ಕಂಡುಬಂದಲ್ಲಿ, ನಮ್ಮ ಸಂಸ್ಥೆಗೆ ವಹಿಸಬಹುದು ಎಂದು ಎಸಿಬಿ ಮುಖ್ಯಸ್ಥರು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ 2018ರ ಮೇ ತಿಂಗಳಲ್ಲಿ ಪತ್ರ ಬರೆದಿದ್ದರು.

‘ಈ ಪ್ರಕರಣದಲ್ಲಿ ಸಿದ್ದರಾಮಯ್ಯ, ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದ ಕೆ.ಜೆ.ಜಾರ್ಜ್‌, ಪಾಲಿಕೆಯ ಕಸ ವಿಲೇವಾರಿ ವಿಭಾಗದ ಅಧಿಕಾರಿಗಳು, 48 ಗುತ್ತಿಗೆದಾರರು ಭಾಗಿಯಾಗಿದ್ದು, ವ್ಯಾಪಕ ಭ್ರಷ್ಟಾಚಾರ ನಡೆದಿದೆ’ ಎಂದು ರಮೇಶ್‌ ಹೇಳಿದರು.

ಅಕ್ರಮ ಹೇಗೆ

31 ಸಾವಿರ ಗುತ್ತಿಗೆ ಪೌರ ಕಾರ್ಮಿಕರು

872 ಕಾಂಪ್ಯಾಕ್ಟರ್‌

2,794 ಟಿಪ್ಪರ್‌ ಆಟೊ

*ಇಷ್ಟು ಸಂಖ್ಯೆಯ ‍ಪೌರ ಕಾರ್ಮಿಕರು, ಕಾಂಪ್ಯಾಕ್ಟರ್‌ಗಳು ಹಾಗೂ ಆಟೊಗಳು ಇಲ್ಲ ಎಂಬುದು ಆರೋಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.