ADVERTISEMENT

‘ನೀರಿನ ಘಟಕಕ್ಕೆ ಐಎಸ್‌ಐ ಮಾನ್ಯತೆ ಬೇಕಿಲ್ಲ’

ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಜಿಲ್ಲಾಧಿಕಾರಿಯಿಂದ ತಡೆ ಪ್ರಕರಣ

ಬಿ.ಎಸ್.ಷಣ್ಮುಖಪ್ಪ
Published 19 ಅಕ್ಟೋಬರ್ 2019, 18:48 IST
Last Updated 19 ಅಕ್ಟೋಬರ್ 2019, 18:48 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಪ್ಯಾಕ್‌ ಮಾಡಿದ ಕುಡಿಯುವ ನೀರಿನ ಬಳಕೆಗೆ ಮಾತ್ರವೇ ಐಎಸ್ಐ ಪ್ರಮಾಣಪತ್ರದ ಅವಶ್ಯಕತೆಯಿದೆ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಐಎಸ್‌ಐ (ಇಂಡಿಯನ್ ಸ್ಟ್ಯಾಂಡರ್ಡ್‌ ಇನ್‌ಸ್ಟಿಟ್ಯೂಟ್‌) ದೃಢೀಕೃತ ಪ್ರಮಾಣ ಪತ್ರ ಇಲ್ಲವೆಂಬ ಕಾರಣಕ್ಕೆ ಬಿಡದಿಯ ಅನುಸೂಯಮ್ಮ ಲೇಔಟ್‌ನಲ್ಲಿ ಸ್ಥಾಪಿಸಲಾಗಿರುವ ‘ಕೆ. ಮೋಹನ್‌ ಶುದ್ಧ ಕುಡಿಯುವ ನೀರಿನ ಘಟಕ’ ಸ್ಥಗಿತಗೊಳಿಸಲು ರಾಮನಗರ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಅಲೋಕ್‌ ಅರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

‘ಘಟಕವು ವಾಣಿಜ್ಯ ಉದ್ದೇಶ ಹೊಂದಿಲ್ಲ ಮತ್ತು ಇಲ್ಲಿನ ನೀರನ್ನು ಬಾಟಲಿಗೆ ತುಂಬಿ ಅಥವಾ ಪ್ಯಾಕ್‌ ಮಾಡಿ ಮಾರಾಟ ಮಾಡುತ್ತಿಲ್ಲ’ ಎಂಬ ಅರ್ಜಿದಾರರ ವಾದವನ್ನು ನ್ಯಾಯಪೀಠ ಪುರಸ್ಕರಿಸಿದೆ.

ADVERTISEMENT

ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲ ಎಚ್‌.ಸಿ.ಶಿವರಾಮು, ‘ಬಿಡದಿ ಪುರಸಭೆಯಿಂದ ಸರಬರಾಜಾಗುವ ಕೊಳಾಯಿ ನೀರು, ಫ್ಲೋರೈಡ್ ಅಂಶದಿಂದ ಕೂಡಿದ್ದು, ಯೋಗ್ಯವಾಗಿಲ್ಲ ಎಂದು ಸ್ಥಳೀಯರು ರಾಮನಗರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಪರಿಹಾರವಾಗಿ ಅರ್ಜಿದಾರರು ಶ್ರೀಲಕ್ಷ್ಮಿ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ನಡೆಸುತ್ತಿದ್ದಾರೆ. 20 ಲೀಟರ್‌ಗೆ ಕೇವಲ ₹5 ಪಡೆಯಲಾಗುತ್ತಿದೆ. ಇದು ವಿದ್ಯುತ್‌ ಮತ್ತು ನಿರ್ವಹಣೆ ರೂಪದಲ್ಲಿ ಸಾಂಕೇತಿಕವಾಗಿ ಪಡೆಯಲಾಗುತ್ತಿರುವ ವೆಚ್ಚ’ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.

‘ಬಿಡದಿ ಹೋಬಳಿಯಾದ್ಯಂತ ಶಾಸಕರು ಮತ್ತು ಸಂಸದರ ನಿಧಿಯಿಂದ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ 10 ಘಟಕಗಳು ಇವೆ. ಅಂತೆಯೇ ಈ ಭಾಗದಲ್ಲಿ ಖಾಸಗಿ ಕಂಪನಿಗಳು ತಮ್ಮ ಸಿಎಸ್ಆರ್ (ಕಾರ್ಪೋರೇಟ್‌ಗಳ ಸಾಮಾಜಿಕ ಉತ್ತರದಾಯಿತ್ವ) ಅನುದಾನ ಬಳಸಿಕೊಂಡು ಸಾರ್ವಜನಿಕರ ಹಿತದೃಷ್ಟಿಯಿಂದ ನಿರ್ಮಿಸಿರುವ ಒಟ್ಟು ನೀರಿನ ಘಟಕಗಳ ಸಂಖ್ಯೆ 36. ಈ ಘಟಕಗಳಲ್ಲಿ ಯಾವುವೂ ಐಎಸ್‌ಐ ಅಥವಾ ಎಫ್‌ಎಸ್ಎಸ್‌ಎಐ (ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಭಾರತೀಯ ಪ್ರಾಧಿಕಾರ) ಸರ್ಟಿಫೀಕೇಟ್‌ ಹೊಂದಿರುವುದಿಲ್ಲ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದರು.

ಇದಕ್ಕೆ ಪ್ರತಿಯಾಗಿ ಸರ್ಕಾರದ ಪರ ವಕೀಲರು, ‘ಶುದ್ಧ ಕುಡಿಯುವ ನೀರಿನ ಘಟಕಗಳು ಐಎಸ್‌ಐ ಕಾಯ್ದೆ–1986ರ ಅನುಸಾರ ದೃಢೀಕೃತ ಪ್ರಮಾಣ ಪತ್ರ ಪಡೆಯುವುದು ಅಗತ್ಯವಿದೆ’ ಎಂದು ಪ್ರತಿಪಾದಿಸಿದ್ದರು.

ಸರ್ಕಾರದ ವಿವರಣೆಯನ್ನು ಒಪ್ಪದ ನ್ಯಾಯಪೀಠ, ‘ಮಾನವ ಬಳಕೆಗಾಗಿ ಪ್ಯಾಕ್‌ ಮಾಡಿದ ನೀರಿಗೆ ಮಾತ್ರವೇ ಐಎಸ್‌ಐ ಪ್ರಮಾಣ ಪತ್ರದ ಅವಶ್ಯಕತೆ ಇದೆ. ಈ ಕುರಿತಂತೆ ಈಗಾಗಲೇ ಕಾನೂನಿನಲ್ಲಿ ಮಾರ್ಪಾಟು ಆಗಿದೆ. ಆದ್ದರಿಂದ ಅರ್ಜಿದಾರರ ಶುದ್ಧ ಕುಡಿಯುವ ನೀರಿನ ಘಟಕವು ಆಹಾರ ಸುರಕ್ಷತೆ ಮ‌ತ್ತು ಗುಣಮಟ್ಟದ ಕಾಯ್ದೆ–2006ರ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂಬ ಸರ್ಕಾರದ ವಾದದಲ್ಲಿ ಹುರುಳಿಲ್ಲ’ ಎಂದು ಆದೇಶಿಸಿದೆ.

ಪರವಾನಗಿ ಇಲ್ಲವಾದರೆ ₹ 5 ಲಕ್ಷ ದಂಡ
‘ಐಎಸ್‌ಐ ಪ್ರಮಾಣ ಪತ್ರ ಪಡೆಯದೆ ಕುಡಿಯುವ ನೀರಿನ ಪ್ಯಾಕ್‌ ತಯಾರಿಕೆ ಮತ್ತು ಮಾರಾಟ ಘಟಕ ನಿರ್ವಹಣೆ ಅಪರಾಧ’ ಎಂದು ಜಿಲ್ಲಾಧಿಕಾರಿ ಅರ್ಜಿದಾರರಿಗೆ ನೀಡಿದ ನೋಟಿಸ್‌ನಲ್ಲಿ ಎಚ್ಚರಿಸಿದ್ದರು.

‘ಎಫ್‌ಎಸ್‌ಎಸ್‌ಎ (ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ) ಪರವಾನಗಿ ಪಡೆಯದೇ ಘಟಕ ನಿರ್ವಹಿಸಿದರೆ ಆಹಾರ ಸುರಕ್ಷತೆ ಕಾಯ್ದೆ–2006ರ ಕಲಂ 63ರ ಪ್ರಕಾರ ₹5 ಲಕ್ಷದವರೆಗೆ ದಂಡ ಹಾಗೂ ಗರಿಷ್ಠ 6 ತಿಂಗಳು ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧ’ ಎಂದೂ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.