ADVERTISEMENT

ರಾಜಕಾಲುವೆಗೆ ಕೊಳಚೆ ನೀರು: ಗುತ್ತಿಗೆದಾರನಿಗೆ ದಂಡ

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 19:07 IST
Last Updated 1 ಜುಲೈ 2019, 19:07 IST

ಬೆಂಗಳೂರು: ಜೆಟ್ಟಿಂಗ್‌ ಯಂತ್ರದಿಂದ ರಾಜಕಾಲುವೆಗೆ ಕೊಳಚೆ ನೀರು ಹರಿಸುತ್ತಿದ್ದ ಗುತ್ತಿಗೆದಾರನಿಗೆ ಜಲಮಂಡಳಿಯು ₹1 ಲಕ್ಷ ದಂಡ ವಿಧಿಸಿದೆ.

ಈ ಕುರಿತು ಲಕ್ಷ್ಮೀಕಾಂತ್‌ ಎಂಬುವರು ನೀಡಿದ್ದ ದೂರಿನ ಆಧಾರದ ಮೇಲೆ ಜಲಮಂಡಳಿ ಈ ಕ್ರಮವನ್ನು ತೆಗೆದುಕೊಂಡಿದೆ.

ರಾಜ ಕಾಲುವೆ ನೀರು ಬೆಳ್ಳಂದೂರು ಕೆರೆಗೆ ಸೇರುತ್ತಿದೆ. ಇಂಥ ಕಾಲುವೆಯಲ್ಲಿ ಕೊಳಚೆ ನೀರನ್ನು ಬಿಡಲಾಗುತ್ತಿತ್ತು. ಇದನ್ನು ಗಮನಿಸಿದ್ದ ಲಕ್ಷ್ಮೀಕಾಂತ್‌, ಈ ಕುರಿತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮತ್ತು ಪೊಲೀಸರಿಗೆ 2018ರ ಅಕ್ಟೋಬರ್‌ 17ರಂದು ದೂರು ನೀಡಿದ್ದರು. ಗುತ್ತಿಗೆದಾರರ ವಿರುದ್ಧ ತೆಗೆದುಕೊಂಡ ಕ್ರಮದ ಬಗ್ಗೆ ತಿಳಿಸುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿಯನ್ನೂ ಸಲ್ಲಿಸಿದ್ದರು.

ADVERTISEMENT

‘ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರನ ಕಡೆಯ ಇಬ್ಬರನ್ನು ಬಂಧಿಸಲಾಗಿತ್ತು. ಅವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಲಾಗಿತ್ತು. ಅವರಿಬ್ಬರು ಸದ್ಯ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ’ ಎಂದು ಪೊಲೀಸರು ಉತ್ತರ ನೀಡಿದ್ದರು.

‘ಗುತ್ತಿಗೆದಾರನಿಗೆ ದಂಡ ನೀಡಿರುವುದು ಸ್ವಾಗತಾರ್ಹ. ಇಂತಹ ಪ್ರಕರಣಗಳು ಮರುಕಳಿಸದಂತೆ ಜಲಮಂಡಳಿ ನೋಡಿಕೊಳ್ಳಬೇಕು’ ಎಂದು ಲಕ್ಷ್ಮೀಕಾಂತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.